ಆನ್‌ಲೈನ್ ಗೇಮಿಂಗ್ ಹಗರಣ: 17 ಸ್ಥಳಗಳಲ್ಲಿ ED ದಾಳಿ, ಮೂವರ ಬಂಧನ
ಆನ್‌ಲೈನ್ ಗೇಮಿಂಗ್ ವಂಚನೆಗಳಿಂದ ಹಲವರು ಆತ್ಮಹತ್ಯೆಗೆ ಶರಣಾದ ಪ್ರಕರಣಗಳಿಗೂ ಈ ಕಂಪನಿಯ ವಿರುದ್ಧದ FIRಗಳು ಸಂಬಂಧ ಹೊಂದಿವೆ ಎಂದು ಆರೋಪಿಸಲಾಗಿದೆ.

ಬೆಂಗಳೂರು: ಆನ್‌ಲೈನ್ ರಿಯಲ್-ಮನಿ ಗೇಮಿಂಗ್ ಪ್ಲಾಟ್‌ಫಾರ್ಮ್ ಮೂಲಕ ಅಕ್ರಮ ಹಣ ವರ್ಗಾವಣೆ, ವಂಚನೆ ಹಾಗೂ ಇತರ ಅಪರಾಧಗಳಲ್ಲಿ ತೊಡಗಿದ್ದಾರೆ ಎಂಬ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ED) ಮೂರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದೆ.
ಬಂಧಿತರನ್ನು ದೀಪಕ್ ಸಿಂಗ್, ಪೃಥ್ವಿ ರಾಜ್ ಸಿಂಗ್ ಮತ್ತು ವಿಕಾಸ್ ತನೇಜಾ ಎಂದು ಗುರುತಿಸಲಾಗಿದೆ. ಅವರು Gamezkraft Technologies Ltd ಮತ್ತು ಅದರ ಸಹ ಸಂಸ್ಥೆಗಳ ಮೂಲಕ ರಮ್ಮಿ ಕಲ್ಚರ್ ಮತ್ತು ರಮ್ಮಿ ಟೈಮ್ ಸೇರಿದಂತೆ ಆನ್‌ಲೈನ್ ಗೇಮಿಂಗ್ ಆ್ಯಪ್ ಗಳನ್ನು ನಿರ್ವಹಿಸುತ್ತಾರೆ ಎಂದು ಇಡಿ ತಿಳಿಸಿದೆ.
ಪ್ರಕರಣವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ದಾಖಲಾಗಿದ್ದು, ಹಲವು FIRಗಳ ಆಧಾರದ ಮೇಲೆ ತನಿಖೆ ನಡೆಯುತ್ತಿದೆ.
ಆನ್‌ಲೈನ್ ಗೇಮಿಂಗ್ ವಂಚನೆಗಳಿಂದ ಹಲವರು ಆತ್ಮಹತ್ಯೆಗೆ ಶರಣಾದ ಪ್ರಕರಣಗಳಿಗೂ ಈ ಕಂಪನಿಯ ವಿರುದ್ಧದ FIRಗಳು ಸಂಬಂಧ ಹೊಂದಿವೆ ಎಂದು ಆರೋಪಿಸಲಾಗಿದೆ.
ಮೇ 7ರಂದು ಕರ್ನಾಟಕ ಹಾಗೂ ದೆಹಲಿ ಎನ್'ಸಿಆರ್ ಸೇರಿದಂತೆ 17 ಸ್ಥಳಗಳಲ್ಲಿ ED ದಾಳಿ ನಡೆಸಿದ್ದು, ಕಂಪನಿ ಕಚೇರಿಗಳು, ಸಂಸ್ಥಾಪಕರು ಹಾಗೂ ಉದ್ಯೋಗಿಗಳ ಸ್ಥಳಗಳಲ್ಲಿ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಈ ದಾಖಲೆಗಳಲ್ಲಿ ಅಕ್ರಮ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಸಾಕ್ಷ್ಯಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಿಖೆಯ ವೇಳೆ ಇವುಗಳ ಸಂಸ್ಥಾಪಕರು ಪ್ರಾಥಮಿಕವಾಗಿ ಹಣ ವರ್ಗಾವಣೆ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಇಡಿ ಗುರುತಿಸಿದ್ದು, ನಂತರ PMLA ಸೆಕ್ಷನ್ 19 ಅಡಿಯಲ್ಲಿ ಮೂವರನ್ನೂ ಬಂಧನಕ್ಕೊಳಪಡಿಸಿದೆ.
ಇದರ ಜೊತೆಗೆ, ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಶುಕ್ರವಾರ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿ ಮತ್ತು ಇತರ ಇಬ್ಬರನ್ನು ಬಂಧಿಸಿ 10 ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಂಡಿದ್ದಾರೆಂದು ತಿಳಿದುಬಂದಿದೆ.
ಏಪ್ರಿಲ್ 20 ರಂದು, ಕೇಂದ್ರ ಸಂಸ್ಥೆಯು ಶ್ರೀಕಿ, ಕಾಂಗ್ರೆಸ್ ಯುವ ನಾಯಕ ಮೊಹಮ್ಮದ್ ನಲಪಾಡ್ ಮತ್ತು ಮಾಜಿ ಕೇಂದ್ರ ಸಚಿವ ರೆಹಮಾನ್ ಖಾನ್ ಅವರ ಸಂಬಂಧಿಗೆ ಸಂಬಂಧಿಸಿದ ಸ್ಥಳಗಳು ಸೇರಿದಂತೆ 12 ಸ್ಥಳಗಳಲ್ಲಿ ದಾಳಿ ನಡೆಸಿತ್ತು.
ಅಕ್ರಮ ಕ್ರಿಪ್ಟೋಕರೆನ್ಸಿ ವಹಿವಾಟು, ಹ್ಯಾಕಿಂಗ್ ಮತ್ತು ಹಣಕಾಸಿನ ಅಕ್ರಮಗಳ ಆರೋಪದ ಮೇಲೆ ಇಡಿ ಹಲವಾರು ವರ್ಷಗಳಿಂದ ಬಿಟ್‌ಕಾಯಿನ್ ಹಗರಣದ ತನಿಖೆ ನಡೆಸುತ್ತಿದೆ.
ಶ್ರೀಕಿ ಅವರನ್ನು ಈ ಹಿಂದೆ ಬಿಟ್‌ಕಾಯಿನ್ ಪ್ರಕರಣದಲ್ಲಿ ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಶ್ರೀಕೃಷ್ಣ ರಮೇಶ್, ರಾಬಿನ್ ಖಂಡೇಲ್ವಾಲ್ ಮತ್ತು ಸುನೀಶ್ ಹೆಗ್ಡೆ ಬಂಧಿತರಾಗಿದ್ದಾರೆ. ಬಂಧಿತರನ್ನು ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



