ರಾಜ್ಯ

ಆರೋಗ್ಯ ತುರ್ತು ಪರಿಸ್ಥಿತಿಗಳಿಗೆ ಬೆಂಗಳೂರಿನಲ್ಲಿ ಹೊಸ ನಿಯಂತ್ರಣ ಕೇಂದ್ರ ಆರಂಭ..!

ಕೊರೋನಾ ಮಹಾಮಾರಿ ವೇಳೆ ಕಂಡುಬಂದ ಸಮನ್ವಯ ಕೊರತೆಯನ್ನು ಮನಗಂಡು ಈ ವ್ಯವಸ್ಥೆ ರೂಪಿಸಲಾಗಿದೆ. ಸಾಂಕ್ರಾಮಿಕ ರೋಗ ಹರಡುವಿಕೆ, ಅಗ್ನಿ ಅವಘಡ, ಪ್ರಕೃತಿ ವಿಕೋಪ ಹಾಗೂ ಇತರೆ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಗಳಿಗೆ ರಾಜ್ಯವನ್ನು ಹೆಚ್ಚು ಸಜ್ಜುಗೊಳಿಸುವ ಉದ್ದೇಶ ಇದಾಗಿದೆ.

ಆರೋಗ್ಯ ತುರ್ತು ಪರಿಸ್ಥಿತಿಗಳಿಗೆ ಬೆಂಗಳೂರಿನಲ್ಲಿ ಹೊಸ ನಿಯಂತ್ರಣ ಕೇಂದ್ರ ಆರಂಭ..!
ಸಂಗ್ರಹ ಚಿತ್ರ
Published On :

ಬೆಂಗಳೂರು: ರಾಜ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಹೊಸ ಆರೋಗ್ಯ ತುರ್ತು ಕಾರ್ಯಾಚರಣೆ ಕೇಂದ್ರ (HEOC)ವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಗುರುವಾರ ಉದ್ಘಾಟಿಸಿದರು.

ಈ ಕೇಂದ್ರವು ಆರೋಗ್ಯ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಕೇಂದ್ರ ನಿಯಂತ್ರಣ ಘಟಕವಾಗಿ ಕಾರ್ಯನಿರ್ವಹಿಸಿ, ತ್ವರಿತ ನಿರ್ಧಾರ, ಸಂಪನ್ಮೂಲಗಳ ಸಮರ್ಪಕ ಬಳಕೆ ಹಾಗೂ ಸಾರ್ವಜನಿಕರಿಗೆ ನಿಖರ ಮಾಹಿತಿ ತಲುಪಿಸುವ ಕೆಲಸ ಮಾಡಲಿದೆ ಎಂದು ಸಚಿವರು ಹೇಳಿದರು.

ಕೊರೋನಾ ಮಹಾಮಾರಿ ವೇಳೆ ಕಂಡುಬಂದ ಸಮನ್ವಯ ಕೊರತೆಯನ್ನು ಮನಗಂಡು ಈ ವ್ಯವಸ್ಥೆ ರೂಪಿಸಲಾಗಿದೆ. ಸಾಂಕ್ರಾಮಿಕ ರೋಗ ಹರಡುವಿಕೆ, ಅಗ್ನಿ ಅವಘಡ, ಪ್ರಕೃತಿ ವಿಕೋಪ ಹಾಗೂ ಇತರೆ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಗಳಿಗೆ ರಾಜ್ಯವನ್ನು ಹೆಚ್ಚು ಸಜ್ಜುಗೊಳಿಸುವ ಉದ್ದೇಶ ಇದಾಗಿದೆ ಎಂದು ತಿಳಿಸಿದರು.

ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ ಅಡಿಯಲ್ಲಿ ಹಾಗೂ ವಿಶ್ವ ಆರೋಗ್ಯ ಸಂಸ್ಥೆ (WHO) ಮಾರ್ಗಸೂಚಿಗಳಂತೆ ಸ್ಥಾಪಿಸಲಾದ ಈ ಕೇಂದ್ರವು 24x7 ಕಾರ್ಯನಿರ್ವಹಿಸಲಿದೆ. ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ವಿಪತ್ತು ನಿರ್ವಹಣಾ ಪ್ರಾಧಿಕಾರ, ಪೊಲೀಸ್ ಹಾಗೂ ಅಗ್ನಿಶಾಮಕ ದಳಗಳೊಂದಿಗೆ ಈ ಕೇಂದ್ರ ಸಮನ್ವಯ ಸಾಧಿಸಲಿದೆ.

ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಸೇವೆಗಳೊಂದಿಗೆ ನೇರ ಸಂಪರ್ಕ ವ್ಯವಸ್ಥೆ ಹೊಂದಿರುವ ಈ ಕೇಂದ್ರವು ತಕ್ಷಣದ ಮಾಹಿತಿ ವಿನಿಮಯ ಮತ್ತು ಕ್ಷಿಪ್ರ ಕ್ರಮ ಕೈಗೊಳ್ಳಲು ನೆರವಾಗಲಿದೆ ಎಂದು ಸಚಿವರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ರಿತ್ವಿಕ್ ರಂಜನಮ್ ಪಾಂಡೆ, ಆಯುಕ್ತ ಗುರುದತ್ತ ಹೆಗ್ಡೆ, ಎನ್‌ಎಚ್‌ಎಂ ನಿರ್ದೇಶಕ ಅವಿನಾಶ್ ಮೆನನ್, ಆರೋಗ್ಯ ಇಲಾಖೆ ನಿರ್ದೇಶಕಿ ಡಾ. ರಜನಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.