ತಮಿಳುನಾಡು ಚುನಾವಣೆಯಲ್ಲಿ ಗೆದ್ದು ಮಿಂಚಿದ ಕನ್ನಡಿಗ: 'ನಾನು ಹೆಮ್ಮೆಯ ಕನ್ನಡಿಗ, ನಮ್ಮೂರ ದೇವರ ಆಶೀರ್ವಾದದಿಂದ ಗೆದ್ದೆ'; ಸುನಿಲ್ ಆನಂದ್ ಭಾವುಕ ಮಾತು
ತಮಿಳುನಾಡಿನ ಮೆಟ್ಟುಪಾಳ್ಯಂ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಸುನೀಲ್ ಆನಂದ್ ಅವರು ಮೂಲತಃ ಕರ್ನಾಟಕದ ತುಮಕೂರು ಜಿಲ್ಲೆಯವರಾಗಿದ್ದು, ಸುನೀಲ್ ಗೆಲುವನ್ನು ಗ್ರಾಮಸ್ಥರು ಸಂಭ್ರಮಿಸಿದ್ದಾರೆ.

ಬೆಂಗಳೂರು: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಸಂಚಲನ ಮೂಡಿಸಿದೆ. ವಿಜಯ್ ಅವರ ಪಕ್ಷದಲ್ಲಿ ಕನ್ನಡಿಗ ಕೂಡ ವಿಜಯ ಪತಾಕೆ ಹಾರಿಸಿದ್ದಾರೆ.
ತಮಿಳುನಾಡಿನ ಮೆಟ್ಟುಪಾಳ್ಯಂ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಸುನೀಲ್ ಆನಂದ್ ಅವರು ಮೂಲತಃ ಕರ್ನಾಟಕದ ತುಮಕೂರು ಜಿಲ್ಲೆಯವರಾಗಿದ್ದು, ಸುನೀಲ್ ಗೆಲುವನ್ನು ಗ್ರಾಮಸ್ಥರು ಸಂಭ್ರಮಿಸಿದ್ದಾರೆ.
ಸುನೀಲ್ ಅವರು ಮೊದಲು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದಲ್ಲಿದ್ದರು. ಆದರೆ, ವಿಜಯ್ ಪರಿಣಾಮಕಾರಿ ಚಟುವಟಿಕೆಗಳು, ಅವರ ವೇಗವನ್ನು ಗ್ರಹಿಸಿ, ಎರಡು ವರ್ಷಗಳ ಹಿಂದೆ ಟಿವಿಕೆ ಪಕ್ಷಕ್ಕೆ ಸೇರಿದ್ದರು.
ಈ ಬಾರಿಯ ಚುನಾವಣೆಯಲ್ಲಿ ಸುನೀಲ್ ಅವರು 75,664 ಮತಗಳನ್ನು ಪಡೆದು 7,768 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅವರ ಎದುರಾಳಿಯಾದ ಕವಿತಾ ಕಲ್ಯಾಣಸುಂದರಂ 67,896 ಮತಗಳನ್ನು ಪಡೆದಿದ್ದಾರೆ. ಈ ಬಾರಿ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಏಕೈಕ ಕನ್ನಡಿಗ ಎಂಬ ಹೆಗ್ಗಳಿಕೆಗೆ ಸುನಿಲ್ ಪಾತ್ರರಾಗಿದ್ದಾರೆ.
ಕೃಷಿಕ ಮತ್ತು ಉದ್ಯಮಿಯಾಗಿರುವ ಸುನಿಲ್ ಅವರು, ಮೂಲತಃ ತುರುವೇಕೆರೆ ತಾಲ್ಲೂಕಿನ ವಡಕೆಘಟ್ಟ ಗ್ರಾಮದ ಮೂಲದವರಾಗಿದ್ದು, ಅದೇ ಗ್ರಾಮದ ಅವರ ಚಿಕ್ಕಪ್ಪ ಎಚ್.ಬಿ. ನಂಜೇಗೌಡ (ಮೂರ್ತಿ) ಜನತಾದಳದ ಮಾಜಿ ಶಾಸಕರಾಗಿದ್ದರು (1994).
ಸುನಿಲ್ ಅವರ ತಾತ ಎಚ್.ಎಲ್. ಲಿಂಗೆಗೌಡ ಅವರು ಮೆಟ್ಟುಪಾಳಯಂನಲ್ಲಿ ಪುರಸಭೆ ಅಧ್ಯಕ್ಷರಾಗಿದ್ದರು. ತಂದೆ ನಾಗರಾಜು ಉದ್ಯಮಿಯಾಗಿದ್ದು, ಕೋವಿಡ್ ಸಂದರ್ಭದಲ್ಲಿ ನಿಧನರಾಗಿದ್ದರು. ಮೈಸೂರಿನಲ್ಲೂ ಅವರ ಕುಟುಂಬಕ್ಕೆ ವ್ಯಾಪಾರ ಸಂಬಂಧಗಳಿವೆ.
ಸುನಿಲ್ ಕುಟುಂಬ ಕಾರ್ಯಕ್ರಮಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಇಲ್ಲಿಗೆ ಬರುತ್ತಲೇ ಇರುತ್ತಾರೆ. ಅವರು ಉತ್ತಮ ಸಂಘಟಕ ಮತ್ತು ಜನಪರ ವ್ಯಕ್ತಿ ಎಂದು ಚಿಕ್ಕಪ್ಪ ನಂಜೇಗೌಡ ಅವರು ತಿಳಿಸಿದ್ದಾರೆ.
ಟಿವಿಕೆ ಪಕ್ಷದಲ್ಲಿ ಉತ್ತಮ ಸಂಘಟಕರಾಗಿ ಗುರುತಿಸಿಕೊಂಡಿರುವ ಸುನೀಲ್, ಜನಪರ ವ್ಯಕ್ತಿತ್ವದಿಂದಲೇ ಮೆಟ್ಟುಪಾಳಯಂ ಕ್ಷೇತ್ರದಲ್ಲಿ ಜನರ ವಿಶ್ವಾಸ ಗಳಿಸಿದ್ದಾರೆ ಎಂದು ಅವರ ಬಂಧುಗಳು ಹೇಳಿದ್ದಾರೆ.
ಚುನಾವಣಾ ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ಸುನಿಲ್, “ನಾನು ಹೆಮ್ಮೆಯ ಕನ್ನಡಿಗ. ವರ್ಷಕ್ಕೆ ನಾಲ್ಕೈದು ಬಾರಿ ನಮ್ಮ ಊರಿಗೆ ಬಂದು ಕುಟುಂಬದ ದೇವತೆ ಮಾಯಮ್ಮ ಮತ್ತು ಆದಿಚುಂಚನಗಿರಿ ಕಾಲಭೈರವೇಶ್ವರ ದೇವರ ದರ್ಶನ ಪಡೆಯುತ್ತೇನೆ” ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



