ರಾಜ್ಯ

Video: ಹಾಡಹಗಲೇ ಯುವತಿ ಮೇಲೆ ಚಾಕು ದಾಳಿ; ರಸ್ತೆಯಲ್ಲೇ ದುಷ್ಕರ್ಮಿಗೆ ಸಾರ್ವಜನಿಕರ 'ಧರ್ಮದೇಟು'!

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿ ಮೇಲೆ ಮಾಸ್ಕ್ ಧರಿಸಿ ಬಂದ ದುಷ್ಕರ್ಮಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.

Video: ಹಾಡಹಗಲೇ ಯುವತಿ ಮೇಲೆ ಚಾಕು ದಾಳಿ; ರಸ್ತೆಯಲ್ಲೇ ದುಷ್ಕರ್ಮಿಗೆ ಸಾರ್ವಜನಿಕರ 'ಧರ್ಮದೇಟು'!
ಯುವತಿ ಮೇಲೆ ಚಾಕು ದಾಳಿ ನಡೆಸಿದ ದುಷ್ಕರ್ಮಿ
Published On :

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಹಾಡಹಗಲೇ ಯುವತಿಯೊಬ್ಬಳ ಮೇಲೆ ದುಷ್ಕರ್ಮಿಯೋರ್ವ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ವರದಿಯಾಗಿದೆ.

ಬೆಂಗಳೂರಿನ ಮಾದನಾಯಕನಹಳ್ಳಿ ಮುಖ್ಯರಸ್ತೆಯಲ್ಲಿ ಮೇ 6 ರಂದು ಈ ಘಟನೆ ನಡೆದಿದ್ದು, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿ ಮೇಲೆ ಮಾಸ್ಕ್ ಧರಿಸಿ ಬಂದ ದುಷ್ಕರ್ಮಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.

ಕೂಡಲೇ ಮಧ್ಯ ಪ್ರವೇಶಿಸಿದ ಸ್ಥಳೀಯರು ದುಷ್ಕರ್ಮಿಯನ್ನು ಹಿಡಿದು ಥಳಿಸಿದ್ದಾರೆ.

ಯುವತಿ ಚೀರಾಟ, ದುಷ್ಕರ್ಮಿಗೆ ಸಾರ್ವಜನಿಕರ ಧರ್ಮದೇಟು

ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಯುವತಿ ಮೇಲೆ ಸ್ಕೂಟಿಯಲ್ಲಿ ಬಂದ ದುಷ್ಕರ್ಮಿ ಏಕಾಏಕಿ ಚಾಕು ತೆಗೆದು ಹಲ್ಲೆ ಮಾಡಿದ್ದಾನೆ. ಯುವತಿ ಮೇಲೆ ಮನಸೋ ಇಚ್ಚೆ ಹಲ್ಲೆ ನಡೆಸುತ್ತಲೇ ಯುವತಿ ಕೂಗಿಕೊಂಡಿದ್ದಾಳೆ.

ಈ ವೇಳೆ ಯುವತಿ ಚೀರಾಟ ಕೇಳಿದ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ ಆಕೆಯನ್ನು ರಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ದುಷ್ಕರ್ಮಿಯನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಪ್ರಸ್ತುತ ಇವಿಷ್ಟೂ ಘಟನಾವಳಿಗಳು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ಮದ್ಯ ವ್ಯಸನ: ಕೌಟುಂಬಿಕ ಕಲಹ

ಇನ್ನು ವರದಿಗಳ ಪ್ರಕಾರ ಹಲ್ಲೆಗೊಳಗಾದ ಮಹಿಳೆ ಮತ್ತು ಹಲ್ಲೆ ಮಾಡಿದ ವ್ಯಕ್ತಿ ದಂಪತಿಗಳಾಗಿದ್ದು, ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ.

ಹಲ್ಲೆಗೊಳಗಾದ ಮಹಿಳೆಯನ್ನು ಸೋನಾಲಿ ಎನ್ನಲಾಗಿದ್ದು, ಹಲ್ಲೆ ಮಾಡಿದವನನ್ನು ಆಕೆಯ ಪತಿ ಸಂಜಯ್ ಎಂದು ಮೂಲಗಳು ತಿಳಿಸಿವೆ. ಈ ದಂಪತಿಗಳು ಬಿಹಾರ ಮೂಲದವರಾಗಿದ್ದು, ಇಬ್ಬರೂ ವಿಚೇದಿತರು ಎನ್ನಲಾಗಿದೆ. ಹಿಂದಿನ ವಿವಾಹಗಳ ನಂತರ ಪರಸ್ಪರ ಪ್ರೀತಿಸಿ ವಿವಾಹವಾದ ನಂತರ ಬೆಂಗಳೂರಿಗೆ ತೆರಳಿದ್ದರು. ಇಬ್ಬರೂ ನಗರದ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದರು ಎನ್ನಲಾಗಿದೆ.

ಮದ್ಯವ್ಯಸನ

ಸಂಜಯ್ ಆಗಾಗ್ಗೆ ಮದ್ಯ ಸೇವಿಸುತ್ತಿದ್ದ ಮತ್ತು ಸೋನಾಲಿಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈತನ ಕಾಟಕ್ಕೆ ಬೇಸತ್ತು ಸೋನಾಲಿ ಬೇರೆಡೆಗೆ ಹೋಗಿ ಪ್ರತ್ಯೇಕವಾಗಿ ವಾಸಿಸಲು ನಿರ್ಧರಿಸಿದಾಗ ಆತನ ಕಾಟ ಮತ್ತಷ್ಟು ಹೆಚ್ಚಾಗಿತ್ತು. ಇದೇ ಸಂದರ್ಭದಲ್ಲೇ ಸಂಜಯ್ ಬೈಕ್ ನಲ್ಲಿ ಬಂದು ಆಕೆಯ ಮೇಲೆ ದಾಳಿ ಮಾಡಿದ್ದಾನೆ ಎಂದು ಹೇಳಲಾಗಿದೆ.

ಅವನು ಚಾಕುವನ್ನು ಅವಳ ಕುತ್ತಿಗೆಯ ಬಳಿ ಹಿಡಿದಿದ್ದಾಗ, ಆಕೆ ಆತನ ಕೈ ಹಿಡಿದು ತನ್ನನ್ನು ತಾನು ರಕ್ಷಿಸಿಕೊಂಡಿದ್ದಾಳೆ. ಇದೇ ಸಂದರ್ಭದಲ್ಲೇ ಹತ್ತಿರದ ನಿವಾಸಿಗಳು ಮಧ್ಯಪ್ರವೇಶಿಸಿ, ಅವನನ್ನು ತಡೆದು, ಪೊಲೀಸರಿಗೆ ಒಪ್ಪಿಸುವ ಮೊದಲು ಮಹಿಳೆಯನ್ನು ರಕ್ಷಿಸಿದರು.

ಈ ಪ್ರಕರಣ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರಲಿದ್ದು, ಪೊಲೀಸರು ನಾನ್-ಕಾಗ್ನಿಜೇಬಲ್ ರಿಪೋರ್ಟ್ (NCR) ದಾಖಲಿಸಿಕೊಂಡು ನಂತರ ದಂಪತಿಗಳಿಗೆ ಕೌನ್ಸೆಲಿಂಗ್ ಮಾಡಿ ಅವರನ್ನು ಬೇರೆಡೆಗೆ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.