ಒಳ ಮೀಸಲಾತಿ ಮತ್ತೆ ಪರಿಷ್ಕರಣೆ: ರೋಸ್ಟರ್ ಪಾಯಿಂಟ್ 100ರ ಬದಲು 400ಕ್ಕೆ ಹೆಚ್ಚಿಸಲು ಸಚಿವ ಸಂಪುಟ ಸಭೆ ತೀರ್ಮಾನ..!
ರೋಸ್ಟರ್ ಬಿಂದು 100 ಇದ್ದ ಕಾರಣ ನೇಮಕಾತಿಯಲ್ಲಿ ಎಸ್ ಸಿಯ ಎಲ್ಲಾ ಸಮುದಾಯಗಳಿಗೂ ನ್ಯಾಯ ಒದಗಿಸಲು ಕಷ್ಟಕರವಾಗುತ್ತಿತ್ತು.

ಬೆಂಗಳೂರು: ಅನುಸೂಚಿತ ಜಾತಿಗಳಿಗೆ ಒಳ ಮೀಸಲಾತಿ ಕುರಿತ ಏಪ್ರಿಲ್ 27ರ ಆದೇಶವನ್ನು ಹಿಂಪಡೆದು, ಕೆಲವು ತಿದ್ದುಪಡಿ ಮಾಡಿ ಶೀಘ್ರದಲ್ಲೇ ಹೊಸ ಆದೇಶ ಹೊರಡಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.
ನೇಮಕಾತಿ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ರೋಸ್ಟರ್ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಇದೇ ವೇಳೆ ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿರುವ ಪ್ರಕರಣಗಳನ್ನು ಹೊರತುಪಡಿಸಿ 2025ರ ಸೆ.3ರ ಬಳಿಕ ಪರಿಶಿಷ್ಟ ಜಾತಿ ಒಳ ಮೀಸಲಾತಿ ಅನ್ವಯ ಆಗುವಂತೆ ಹೊರಡಿಸಿದ್ದ ಎಲ್ಲಾ ನೇಮಕಾತಿ ಅಧಿಸೂಚನೆಗಳನ್ನು ಹಿಂಪಡೆಯಲು ಸಂಪುಟ ನಿರ್ಧರಿಸಿದೆ.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಅವರು ಈ ಕುರಿತು ಮಾಹಿತಿ ನೀಡಿದ್ದು, ರೋಸ್ಟರ್ ಬಿಂದು 100 ಇದ್ದ ಕಾರಣ ನೇಮಕಾತಿಯಲ್ಲಿ ಎಸ್ ಸಿಯ ಎಲ್ಲಾ ಸಮುದಾಯಗಳಿಗೂ ನ್ಯಾಯ ಒದಗಿಸಲು ಕಷ್ಟಕರವಾಗುತ್ತಿತ್ತು. ಹೀಗಾಗಿ 100ರಷ್ಟು ಇದ್ದ ರೋಸ್ಟರ್ ಬಿಂದುವನ್ನು 400 ಕ್ಕೆ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಪರಿಶಿಷ್ಟ ಜಾತಿಗೆ ಲಭ್ಯ ಶೇ 15 ಮೀಸಲಾತಿಯಲ್ಲಿ ಪ್ರವರ್ಗ ‘ಎ’, ಪ್ರವರ್ಗ ‘ಬಿ’ ಮತ್ತು ಪ್ರವರ್ಗ ‘ಸಿ’ಗೆ ಕ್ರಮವಾಗಿ ಶೇ 5.25, 5.25, 4.50 ಪ್ರಮಾಣದಲ್ಲಿ ಒಳ ಮೀಸಲಾತಿ ಜಾರಿಗೊಳಿಸಿ ಏಪ್ರಿಲ್ 27ರಂದು ಸರ್ಕಾರ ಆದೇಶ ಹೊರಡಿಸಿತ್ತು.
ಆ ಆದೇಶದಲ್ಲಿ 2025ರ ಸೆ. 3ರಂದು ಹೊರಡಿಸಿದ್ದ ಆದೇಶದ ಅನ್ವಯ ಒಳ ಮೀಸಲಾತಿ ಅಳವಡಿಸಿಕೊಂಡು ನೇಮಕಾತಿ ಪ್ರಕ್ರಿಯೆಯ ಹಂತದಲ್ಲಿರುವ ಎಲ್ಲ ನೇಮಕಾತಿ ಅಧಿಸೂಚನೆಗಳನ್ನು ಹಿಂಪಡೆದು ಪರಿಷ್ಕೃತ ಅಧಿಸೂಚನೆ ಹೊರಡಿಸಲು ಸೂಚಿಸಲಾಗಿತ್ತು.
ಆ ಆದೇಶದಿಂದಾಗಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಈಗಾಗಲೇ ಸಿದ್ಧಪಡಿಸಿರುವ 1,006 ಹುದ್ದೆಗಳ ಅರ್ಹತಾ ಪಟ್ಟಿಯನ್ನು ಕೈಬಿಡಬೇಕಾದ ಸ್ಥಿತಿ ಬಂದಿತ್ತು. ಈ ಕುರಿತು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದು, ಏಪ್ರಿಲ್ 16ರಂದು ನಡೆದಿದ್ದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿದ್ದ ಕೆಲವು ನಿರ್ಣಯಗಳನ್ನು ಮಾರ್ಪಡಿಸಲು ತೀರ್ಮಾನಿಸಲಾಗಿದೆ.
ಯಾವುದೇ ನೇಮಕಾತಿ ಅಧಿಸೂಚನೆಯಲ್ಲಿ ಮೂರಕ್ಕಿಂತ ಕಡಿಮೆ ಪರಿಶಿಷ್ಟ ಜಾತಿ ಬಿಂದುಗಳಿದ್ದರೆ, ಆ ಅಧಿಸೂಚನೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾದ ಹುದ್ದೆಗಳನ್ನು ‘ಪರಿಶಿಷ್ಟ ಜಾತಿ ಸಾಮಾನ್ಯ’ ಎಂದು ಪರಿಗಣಿಸಿ, ಎಲ್ಲ 101 ಪರಿಶಿಷ್ಟ ಜಾತಿಗಳಿಗೂ ಸ್ಪರ್ಧಿಸಲು ಅವಕಾಶ ನೀಡಲು ಗುರುವಾರ ನಡೆದ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.
ಪ್ರವರ್ಗ ‘ಎ’, ಪ್ರವರ್ಗ ‘ಬಿ’ ಮತ್ತು ಪ್ರವರ್ಗ ‘ಸಿ’ಗೆ ಕ್ರಮವಾಗಿ ಶೇ 5.25, 5.25, 4.50 ಪ್ರಮಾಣದಲ್ಲಿ ಒಳ ಮೀಸಲಾತಿ ಜಾರಿಗೊಳಿಸಲು 400 ಬಿಂದುಗಳ ರೋಸ್ಟರ್ ಅನ್ನು ಹೊರಡಿಸಬೇಕಿದೆ. ಸಮಾಜ ಕಲ್ಯಾಣ ಇಲಾಖೆಯ ಜೊತೆ ಸಮಾಲೋಚನೆ ನಡೆಸಿ 400 ಬಿಂದುಗಳ ರೋಸ್ಟರ್ ಅನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹೊರಡಿಸಲಿದೆ. ಉಳಿದಂತೆ, ಒಳ ಮೀಸಲಾತಿಗೆ ಕುರಿತಂತೆ ತೆಗೆದುಕೊಂಡ ನಿರ್ಣಯಗಳ ಕುರಿತು ಸಮಾಜ ಕಲ್ಯಾಣ ಇಲಾಖೆ ಸೂಕ್ತ ಆದೇಶ ಹೊರಡಿಸಬೇಕು ಎಂದೂ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



