ಬದುಕಿನ ಕೊನೆ ಪಯಣವಾಯ್ತು ಮೊದಲ ವಿಮಾನ ಪ್ರಯಾಣ: ಕೇರಳ ಮಹಿಳೆಯರ ಜೀವ ಕಸಿದ ಭೀಕರ ಮಳೆ..!
56 ಸದಸ್ಯರ ಗುಂಪು ಕೇರಳದಿಂದ ಬೆಂಗಳೂರು ಹಾಗೂ ಮೈಸೂರು ಪ್ರವಾಸಕ್ಕೆ ಬಂದಿತ್ತು. ಇವರಲ್ಲಿ ಬಹುತೇಕರು ಜೀವನದಲ್ಲಿ ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡಿದ್ದರು. ಆಕಾಶದ ಮೇಲಿನ ಹಾರಾಟವನ್ನು ಸಂಭ್ರಮಿಸಿದ್ದರು.

ಬೆಂಗಳೂರು: ಕೆಲವೊಮ್ಮೆ ಕನಸುಗಳು ದೀರ್ಘ ನಿರೀಕ್ಷೆಯ ನಂತರ ಸಾಕಾರಗೊಳ್ಳುತ್ತವೆ. ಆದರೆ, ಆ ಸಂತೋಷದ ಕ್ಷಣವೇ ಕೆಲವರಿಗೆ ವಿಧಿಯ ಕ್ರೂರ ತಿರುವಾಗಿ ಮಾರ್ಪಡುತ್ತದೆ. ಇಂತಹದ್ದೇ ಒಂದು ಹೃದಯವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕೇರಳದ ಕುಡಂಬಶ್ರೀ ಸ್ವಸಹಾಯ ಸಂಘದ ಸದಸ್ಯೆಯರಾದ ಲತಾ (57) ಮತ್ತು ಸ್ಮಿತಾ (47) ಅವರು ತಮ್ಮ ಬಹುಕಾಲದ ಕನಸನ್ನು ನೆರವೇರಿಸಿಕೊಳ್ಳಲು ವಿಮಾನದಲ್ಲಿ ಪ್ರಯಾಣ ಮಾಡಿದ್ದರು. ಹೊಸ ಅನುಭವದ, ಸಂತೋಷ, ಪ್ರವಾಸದ ಮೇಲಿದ್ದ ಆಸಕ್ತಿ, ಉತ್ಸಾಹ ಎಲ್ಲವೂ ಅವರು ಬೆಂಗಳೂರಿಗೆ ಭೇಟಿ ನೀಡುವಂತೆ ಮಾಡಿತ್ತು. ಆದರೆ, ಆ ಸಂತೋಷ ಇದೀಗ ದುರಂತ ಅಂತ್ಯ ಕಂಡಿದೆ.
56 ಸದಸ್ಯರ ಗುಂಪು ಕೇರಳದಿಂದ ಬೆಂಗಳೂರು ಹಾಗೂ ಮೈಸೂರು ಪ್ರವಾಸಕ್ಕೆ ಬಂದಿತ್ತು. ಇವರಲ್ಲಿ ಬಹುತೇಕರು ಜೀವನದಲ್ಲಿ ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡಿದ್ದರು. ಆಕಾಶದ ಮೇಲಿನ ಹಾರಾಟವನ್ನು ಸಂಭ್ರಮಿಸಿದ್ದರು. ಆದರೆ, ಈ ಭೇಟಿ ದುರಂತವಾಗಿ ಬದಲಾಗುತ್ತಿದೆ ಎಂಬ ಕಲ್ಪನೆ ಈ ಮಹಿಳೆಯರಿಗೆ ಇರಲಿಲ್ಲ.
ಪ್ರವಾಸದ ಯೋಜನೆಯಂತೆ ಈ ಮಹಿಳೆಯರು ಬೆಂಗಳೂರು ಸುತ್ತಾಟ ಮುಗಿಸಿ, ಶಾಪಿಂಗ್ ಗಾಗಿ ಶಿವಾಜಿನಗರಕ್ಕೆ ಬಂದಿದ್ದರು. ಆದರೆ, ಭಾರೀ ಮಳೆ ಹಿನ್ನೆಲೆಯಲ್ಲಿ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಬಳಿ ನಿಂತಿದ್ದರು. ಆ ಕ್ಷಣದಲ್ಲಿ ಪ್ರಕೃತಿ ತನ್ನ ರೌದ್ರ ರೂಪ ತೋರಿಸಿದ್ದು, ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ.
ದುರಂತದಲ್ಲಿ ಲತಾ ಮತ್ತು ಸ್ಮಿತಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರೆ, ಅವರೊಂದಿಗೆ ಇದ್ದ ಇತರೆ ಮೂವರು ಮಹಿಳೆಯರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರೊಂದಿಗೆ ಕೆಲವೇ ಕ್ಷಣಗಳ ಹಿಂದೆ ಇದ್ದ ನಗು-ಸಂತೋಷ ಎಲ್ಲವೂ ಕಣ್ಮರೆಯಾಗಿದೆ.
ದುರಂತ ಕುರಿತು ಎರ್ನಾಕುಲಂ ಜಿಲ್ಲೆಯ ಕುಟುಂಬಶ್ರೀಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಅಜಿತ್ ಪಿ ಅವರು ಮಾತನಾಡಿ, ಎಲ್ಲವೂ ಕ್ಷಣಾರ್ಧದಲ್ಲಿ ನಡೆದು ಹೋಗಿದೆ, ಪ್ರವಾಸಕ್ಕೆ ಹೋಗಿದ್ದ ನಮ್ಮವರು ದುರಂತದಲ್ಲಿ ಸಿಲುಕಿರುವ ಬಗ್ಗೆ ನನಗೆ ಸಾಕಷ್ಟು ಕರೆಗಳು ಬರಲಾರಂಭಿಸಿತು. ಈ ಪ್ರವಾಸ ನಮ್ಮ ಜೀವನದಲ್ಲಿ ಮರೆಯಲಾಗದ ದುರಂತ ಘಟನೆಯಾಗುತ್ತದೆ ಎಂದು ಊಹಿಸಿರಲಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
ಲತಾ ಮತ್ತು ಸ್ಮಿತಾ ತಮ್ಮ-ತಮ್ಮ ಕುಟುಂಬಗಳಿಗೆ ಆಧಾರ ಸ್ತಂಭವಾಗಿದ್ದವರು. ಸ್ಮಿತಾ ದಿನಗೂಲಿ ಕೆಲಸ ಮಾಡುವ ಪತಿಯ ಜೊತೆಗೆ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಇನ್ನು ಲತಾ ತಮ್ಮ ಸಹೋದರನನ್ನು ಅಗಲಿದ್ದಾರೆ. ಇದೀಗ ಇಬ್ಬರ ಶವಗಳನ್ನು ಕೇರಳಕ್ಕೆ ರವಾನಿಸಲಾಗಿದ್ದು, ಗುಂಪಿನ ಉಳಿದ ಸದಸ್ಯರು ಸುರಕ್ಷಿತವಾಗಿ ಕೇರಳಕ್ಕೆ ಮರಳಿದ್ದಾರೆಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



