'ವಿಐಪಿ ಸಂಸ್ಕೃತಿಗೆ ಪುರಸ್ಕಾರ ಸಿಗುತ್ತಿರುವುದು ಆಘಾತಕಾರಿ, ನನಗೆ ಐಪಿಎಲ್ ಪಾಸ್ ಬೇಡ': ಶಾಸಕ ಸುರೇಶ್ ಕುಮಾರ್
ಸಮಾಜವಾದಿ ಎಂದು ಹೇಳಿಕೊಳ್ಳುವ ಸರ್ಕಾರದ ಆಡಳಿತದಲ್ಲಿ ಈ ವಿಐಪಿ ಸಂಸ್ಕೃತಿಗೆ ಪುರಸ್ಕಾರ ಸಿಗುತ್ತಿರುವುದು ಆಘಾತಕಾರಿಯಾಗಿದೆ ಎಂದು ಕೂಡ ಅಸಮಾಧಾನ ಹೊರಹಾಕಿದ್ದಾರೆ.

ಬೆಂಗಳೂರು: ಐಪಿಎಲ್ (IPL) ಪಂದ್ಯಗಳಿಗೆ ಟಿಕೆಟ್ ನೀಡುವ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಮಧ್ಯೆ ವಾದ-ವಿವಾದಗಳು ಸಾಕಷ್ಟು ಕೇಳಿಬಂದವು, ಈ ಮಧ್ಯೆ ನನ್ನ ಹೆಸರಿನಲ್ಲಿ ಯಾವುದೇ ಟಿಕೆಟ್ ಅಥವಾ ಪಾಸ್‌ಗಳನ್ನು ವಿತರಿಸಬಾರದೆಂದು ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ಕುಮಾರ್ ಸ್ಪೀಕರ್ ಯುಟಿ ಖಾದರ್ ಅವರಿಗೆ ಪತ್ರ ಬರೆದಿದ್ದಾರೆ.
ಸಮಾಜವಾದಿ ಎಂದು ಹೇಳಿಕೊಳ್ಳುವ ಸರ್ಕಾರದ ಆಡಳಿತದಲ್ಲಿ ಈ ವಿಐಪಿ ಸಂಸ್ಕೃತಿಗೆ ಪುರಸ್ಕಾರ ಸಿಗುತ್ತಿರುವುದು ಆಘಾತಕಾರಿಯಾಗಿದೆ ಎಂದು ಕೂಡ ಅಸಮಾಧಾನ ಹೊರಹಾಕಿದ್ದಾರೆ.
ಸುರೇಶ್ ಕುಮಾರ್ ಬರೆದ ಪತ್ರದಲ್ಲಿ ಏನಿದೆ?
ಮೊನ್ನೆ ಅಂದರೆ ಮಾ.26 ರಂದು ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ವ್ಯಾಪ್ತಿಯಲ್ಲಿ ಜನಸಾಮಾನ್ಯರು ಅನುಭವಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ದಿಢೀರನೆ ಚಿನ್ನಸ್ವಾಮಿ ಸ್ಟೇಡಿಯಂನ(Chinnaswamy Stadium) ಐಪಿಎಲ್ ಪಂದ್ಯ, ಶಾಸಕರಿಗೆ ಟಿಕೆಟ್ ಹಂಚಿಕೆ ಹಾಗೂ ಶಾಸಕರ ಮರ್ಯಾದೆಯ ಕುರಿತು ಚರ್ಚೆಗಳು ಪ್ರಾರಂಭವಾದದ್ದು ತಮಗೆ ತಿಳಿದೇ ಇದೆ.
ಜನಸಾಮಾನ್ಯರ ಅದೆಷ್ಟೋ ಗಂಭೀರ ಪ್ರಶ್ನೆಗಳಿಗೆ, ಸಮಸ್ಯೆಗಳಿಗೆ ವರ್ಷಾನುಗಟ್ಟಲೆ ಪರಿಹಾರ ಸಿಗುವುದಿಲ್ಲ. ಆದರೆ ಶಾಸಕರ ಸೌಲಭ್ಯ, ಟಿಕೆಟ್ ವಿಚಾರ ಬಂದಾಗ 24 ಗಂಟೆಯೊಳಗೆ ಸ್ಪಂದಿಸುವ ಉತ್ಸುಕತೆಯನ್ನು ಸರ್ಕಾರ ತೋರಿರುವುದು ಜನಸಾಮಾನ್ಯರಲ್ಲಿ ಆಶ್ಚರ್ಯ ಹಾಗೂ ಜನಪ್ರತಿನಿಧಿಗಳ ಬಗ್ಗೆ ತಿರಸ್ಕಾರ ಮೂಡುವಂತೆ ಮಾಡಿದೆ.
ಮಾಧ್ಯಮಗಳ ವರದಿ ಪ್ರಕಾರ ಶಾಸಕರಿಗೆ ತಲಾ ಎರಡು ಹಾಗೂ ಮುಂದಿನ ದಿನಗಳಲ್ಲಿ ಐದು ಟಿಕೆಟ್/ಪಾಸ್ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. ಸಮಾಜವಾದಿ ಎಂದು ಹೇಳಿಕೊಳ್ಳುವ ಸರ್ಕಾರದ ಆಡಳಿತದಲ್ಲಿ ಈ ʼವಿಐಪಿ ಸಂಸ್ಕೃತಿ’ಗೆ ಪುರಸ್ಕಾರ ಸಿಗುತ್ತಿರುವುದು ಆಘಾತಕಾರಿಯಾಗಿದೆ.
ಕಳೆದ ವರ್ಷ ಇದೇ ಐಪಿಎಲ್ ಪಂದ್ಯದ ಸಂದರ್ಭದಲ್ಲಿ ನಡೆದ ದುರಂತದಲ್ಲಿ 11 ಜನ ಅಮಾಯಕರು ಪ್ರಾಣ ಕಳೆದುಕೊಂಡ ಘಟನೆಯ ಆಕ್ರಂದನ ಇಂದಿಗೂ ನನ್ನ ಕಿವಿಯಲ್ಲಿ ಮಾರ್ದನಿಸುತ್ತಿದೆ. ಆ ನೋವಿನ ನಡುವೆ ನಾವು ಐಪಿಎಲ್ ಟಿಕೆಟ್‌ಗಾಗಿ ಸದನದಲ್ಲಿ ಪಟ್ಟು ಹಿಡಿಯುವುದು ನಮ್ಮನ್ನು ಜನರ ದೃಷ್ಟಿಯಲ್ಲಿ ಇನ್ನಷ್ಟು ಕನಿಷ್ಠರನ್ನಾಗಿಸುತ್ತದೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಹಾಗೂ ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ, ಸರ್ಕಾರ ಅಥವಾ ಕೆಎಸ್‌ಸಿಎ ವತಿಯಿಂದ ಶಾಸಕರಿಗೆ ನೀಡಲಾಗುವ ಐಪಿಎಲ್ ಪಂದ್ಯದ ಯಾವುದೇ ಪಾಸ್ ಅಥವಾ ಟಿಕೆಟ್‌ಗಳನ್ನು ನಾನು ನಿರಾಕರಿಸುತ್ತಿದ್ದೇನೆ. ಆದ್ದರಿಂದ ದಯವಿಟ್ಟು ಮುಂಬರುವ ಐಪಿಎಲ್ ಪಂದ್ಯಗಳಿಗೆ ಸಂಬಂಧಿಸಿದಂತೆ ನನ್ನ ಹೆಸರಿನಲ್ಲಿ ಯಾವುದೇ ಟಿಕೆಟ್ ಅಥವಾ ಪಾಸ್‌ಗಳನ್ನು ವಿತರಿಸಬಾರದೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಮನವಿ ಮಾಡಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




