ರಾಜ್ಯ

ರಾಜ್ಯದಲ್ಲಿ MNREGA ಯೋಜನೆಯಲ್ಲಿ ಭಾರೀ ಅಕ್ರಮ: CAG ವರದಿಯಲ್ಲಿ ಬಹಿರಂಗ..!

ಈಗಾಗಲೇ ಪೂರ್ಣಗೊಂಡ ಮನೆಗಳಿಗೆ ಮತ್ತೆ ಹಣ ಪಾವತಿಸಿರುವುದು, ಅರ್ಹತೆ ಇಲ್ಲದವರಿಗೆ ಹಣ ನೀಡಿರುವುದು ಮತ್ತು ಯಾವುದೇ ಕೆಲಸವಿಲ್ಲದೆ ಕಾರ್ಮಿಕರಿಗೆ ವೇತನ ನೀಡಿರುವುದು ಪತ್ತೆಯಾಗಿದೆ. ಕೆಲವು ಸಂದರ್ಭಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಹಣ ಪಾವತಿಸಿರುವುದೂ ಗಮನಕ್ಕೆ ಬಂದಿದೆ.

ರಾಜ್ಯದಲ್ಲಿ MNREGA ಯೋಜನೆಯಲ್ಲಿ ಭಾರೀ ಅಕ್ರಮ: CAG ವರದಿಯಲ್ಲಿ ಬಹಿರಂಗ..!
ಮನ್ರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು
Published On :

ಬೆಂಗಳೂರು: ರಾಜ್ಯದಲ್ಲಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA)ಯಲ್ಲಿ ಭಾರೀ ಅಕ್ರಮಗಳು ನಡೆದಿರುವುದನ್ನು ಭಾರತ ಲೆಕ್ಕ ನಿಯಂತ್ರಕ ಹಾಗೂ ಮಹಾಲೆಕ್ಕಪಾಲರ (ಸಿಎಜಿ) ವರದಿ ಬಹಿರಂಗಪಡಿಸಿದೆ.

ವಿಧಾನಸಭೆಯಲ್ಲಿ ಮಂಡಿಸಲಾದ ಈ ವರದಿ ಹಲವು ಗಂಭೀರ ಅಂಶಗಳ ಮೇಲೆ ಬೆಳಕು ಚೆಲ್ಲಿದೆ. ಸಿಎಜಿ ತನಿಖೆ ನಡೆಸಿದ ಗ್ರಾಮ ಪಂಚಾಯ್ತಿಗಳಲ್ಲಿ ಹಲವು 'ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ' (ಕೆಟಿಪಿಪಿ) ಕಾಯ್ದೆ ಅನುಸರಿಸದೇ ಟೆಂಡರ್ ನಿಯಮ ಉಲ್ಲಂಘಿಸಿದೆ. ಐದು ಲಕ್ಷ ರೂಪಾಯಿ ಮೀರಿದ ಸಾಮಗ್ರಿಗಳ ಖರೀದಿಯನ್ನು ಟೆಂಡರ್ ಕರೆಯದೇ ಖರೀದಿಸಿವೆ ಎಂದು ವರದಿ ತಿಳಿಸಿದೆ.

ಈಗಾಗಲೇ ಪೂರ್ಣಗೊಂಡ ಮನೆಗಳಿಗೆ ಮತ್ತೆ ಹಣ ಪಾವತಿಸಿರುವುದು, ಅರ್ಹತೆ ಇಲ್ಲದವರಿಗೆ ಹಣ ನೀಡಿರುವುದು ಮತ್ತು ಯಾವುದೇ ಕೆಲಸವಿಲ್ಲದೆ ಕಾರ್ಮಿಕರಿಗೆ ವೇತನ ನೀಡಿರುವುದು ಪತ್ತೆಯಾಗಿದೆ. ಕೆಲವು ಸಂದರ್ಭಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಹಣ ಪಾವತಿಸಿರುವುದೂ ಗಮನಕ್ಕೆ ಬಂದಿದೆ.

ಕೆಲವು ಕೆಲಸದ ಸ್ಥಳಗಳಲ್ಲಿ ಕುಡಿಯುವ ನೀರು, ವೈದ್ಯಕೀಯ ನೆರವು ಮತ್ತು ಮಕ್ಕಳ ಆರೈಕೆ ಸೌಲಭ್ಯಗಳ ಕೊರತೆ ಇದ್ದುದರಿಂದ ಮಹಿಳೆಯರು ಹಾಗೂ ಹಿರಿಯ ನಾಗರಿಕರು ಕೆಲಸದಲ್ಲಿ ಪಾಲ್ಗೊಳ್ಳಲು ಹಿಂಜರಿದಿದ್ದಾರೆ. ಇದು ಯೋಜನೆಯ ಮೂಲ ಉದ್ದೇಶಕ್ಕೆ ಧಕ್ಕೆ ತಂದಿದೆ.

ಅನೇಕ ಯೋಜನೆಗಳು ಅನುಮೋದನೆ ಪಡೆದಿದ್ದರೂ ಅವುಗಳನ್ನು ಕೈಗೆತ್ತಿಕೊಳ್ಳದೇ ಬಿಟ್ಟಿರುವುದು ಹಾಗೂ ಕೆಲವು ಕಾಮಗಾರಿಗಳು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಅಪೂರ್ಣವಾಗಿರುವುದು ವರದಿಯಲ್ಲಿ ಉಲ್ಲೇಖವಾಗಿದೆ. ವಿವಿಧ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಯೋಜನೆ ಅನುಷ್ಠಾನ ಸರಿಯಾಗಿ ನಡೆದಿಲ್ಲ ಎಂದೂ ತಿಳಿಸಲಾಗಿದೆ.

50 ಪ್ರಕರಣಗಳಲ್ಲಿ ಕಾರ್ಮಿಕರ ಹಾಜರಾತಿ ದಾಖಲೆ ಇಲ್ಲದೆ, ಸಹಿ ಅಥವಾ ಬೆರಳಚ್ಚು ಪಡೆಯದೇ ಸುಮಾರು ರೂ.5.51 ಲಕ್ಷ ಪಾವತಿಸಿರುವುದು ಪತ್ತೆಯಾಗಿದೆ. ಮತ್ತೊಂದೆಡೆ, 13 ಗ್ರಾಮ ಪಂಚಾಯಿತಿಗಳಲ್ಲಿ 17 ಕೆಲಸಗಳಲ್ಲಿ ಕೆಲಸ ಮಾಡಿದ 497 ಕಾರ್ಮಿಕರಿಗೆ ರೂ.10.98 ಲಕ್ಷ ವೇತನ ನೀಡದೇ ಇರುವುದು ಗಂಭೀರ ವಿಚಾರವಾಗಿದೆ.

ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ತಾಂತ್ರಿಕ ಸಮಿತಿಗಳು ರಚಿಸಲಾಗದ ಕಾರಣ ಅಸಂಬದ್ಧ ಅಂದಾಜುಗಳು, ಕಾಮಗಾರಿಗಳ ದುರಾವಸ್ಥೆ ಮತ್ತು ಅನಿಯಮಿತ ವೆಚ್ಚಗಳು ನಡೆದಿವೆ. ಯೋಜನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಅನುಮೋದಿತ ಮೊತ್ತಕ್ಕಿಂತ ಹೆಚ್ಚು ಖರ್ಚು ಮಾಡಿರುವುದು ಹಾಗೂ ಲಾಭಾಂಶಧಾರಕರಿಗೆ ನೀಡಬೇಕಾದ ಹಣವನ್ನು ನೇರವಾಗಿ ಪೂರೈಕೆದಾರರಿಗೆ ಪಾವತಿಸಿರುವುದೂ ವರದಿಯಲ್ಲಿ ಬಹಿರಂಗವಾಗಿದೆ.

ಒಟ್ಟಾರೆ, ಗ್ರಾಮೀಣ ಉದ್ಯೋಗ ಮತ್ತು ಅಭಿವೃದ್ಧಿಗಾಗಿ ರೂಪಿಸಲಾದ ಯೋಜನೆಯಲ್ಲಿ ಈ ಮಟ್ಟದ ಅಕ್ರಮಗಳು ಕಂಡುಬಂದಿರುವುದು ಆಡಳಿತ ವ್ಯವಸ್ಥೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.