ಮುಖ್ಯರಸ್ತೆ ಬೀದಿ ವ್ಯಾಪಾರಕ್ಕೆ ಅವಕಾಶವಿಲ್ಲ; ವಾರಾನುಗಟ್ಟಲೆ ರಸ್ತೆಯಲ್ಲಿ ನಿಲ್ಲಿಸಲಾದ ಹಳೇಯ ವಾಹನಗಳು ಡಂಪ್: ಡಿ.ಕೆ ಶಿವಕುಮಾರ್
ಹಗಲು ವೇಳೆ ವ್ಯಾಪಾರ ಮಾಡಿ ರಾತ್ರಿ ವೇಳೆ ಗಾಡಿಯನ್ನು ಬೀದಿ ಬದಿಯಲ್ಲಿ ಕಟ್ಟಿ ಹೋಗಿದ್ದರೆ, ಅಧಿಕಾರಿಗಳು ಎಲ್ಲವನ್ನು ಪ್ಯಾಕ್ ಮಾಡಿಕೊಂಡು ಹೋಗಲಿದ್ದಾರೆ. ಈಗಲೇ ಈ ವಿಚಾರದಲ್ಲಿ ಜನರು ಜಾಗೃತರಾಗಬೇಕು ಎಂದು ಹೇಳಿದರು.

ಬೆಂಗಳೂರು: ಬೆಂಗಳೂರು ನಗರದಲ್ಲಿ ಪಾದಚಾರಿ ಮಾರ್ಗಕ್ಕೆ ಹೊಸ ನೀತಿ ರೂಪಿಸಲು ತೀರ್ಮಾನಿಸಲಾಗಿದ್ದು, ಮುಖ್ಯರಸ್ತೆ, ಉಪ ಮುಖ್ಯರಸ್ತೆಗಳಲ್ಲಿ ಬೀದಿ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ವಿಧಾನಸೌಧದಲ್ಲಿ ಜಿಬಿಎ ಪಾಲಿಕೆಗಳ ಬಜೆಟ್ ಸಿದ್ಧತೆ ಹಾಗೂ ಜಿಬಿಎ ಕಾರ್ಯಕಾರಿ ಸಭೆ ನಡೆಸಿದ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಜಿಬಿಎ ವ್ಯಾಪ್ತಿಯ ಎಲ್ಲಾ ಶಾಸಕರನ್ನು ಕರೆದು ಪಾಲಿಕೆಗಳ ಬಜೆಟ್ ಕುರಿತು ಸಭೆ ನಡೆಸಲಾಯಿತು. ಇದರ ಜತೆಗೆ ಕೆಲವು ಪ್ರಮುಖ ನಿರ್ಣಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರು ಸಭೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಜಿಬಿಎ ಕಾರ್ಯಕಾರಿ ಸಭೆಯನ್ನು ನಡೆಸಲಾಗಿದೆ. ಪೊಲೀಸ್, ಬೆಸ್ಕಾಂ, ಬಿಎಂಆರ್ ಸಿಎಲ್, ಬಿಡಬ್ಲ್ಯೂಎಸ್ಎಸ್ ಬಿ, ಬಿಡಿಎ ಅಧಿಕಾರಿಗಳು, ಸಚಿವರು, ಶಾಸಕರು, ಸಚಿವರು ಭಾಗವಹಿಸಿದ್ದರು" ಎಂದು ಮಾಹಿತಿ ನೀಡಿದರು.
"ಐದೂ ಪಾಲಿಕೆಗಳು ತಮ್ಮದೇ ಆದ ಪ್ರತ್ಯೇಕ ಬಜೆಟ್ ತಯಾರಿಸಿಕೊಂಡಿದ್ದಾರೆ. ಶಾಸಕರುಗಳು ಕೂಡ ತಮ್ಮ ಮನವಿ ಸಲ್ಲಿಸಿದ್ದಾರೆ. ವಾರ್ಡ್ ವಾರು ಅನುದಾನ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಪಾದಚಾರಿ ಮಾರ್ಗಕ್ಕೆ ಹೊಸ ನೀತಿ ತರಲು ತೀರ್ಮಾನಿಸಿದ್ದೇವೆ. ನಾಗರೀಕರು ಪಾದಚಾರಿ ಮಾರ್ಗದಲ್ಲಿ ಸಾಗಲು ಪರದಾಡುತ್ತಿದ್ದು, ಬೀದಿಬದಿ ವ್ಯಾಪಾರಿಗಳು ಪಾದಚಾರಿ ಮಾರ್ಗ ಒತ್ತುವರಿ ಮಾಡಿದ್ದು, ಅವರಿಗೆ ಪ್ರತ್ಯೇಕ ಜಾಗ ಕಲ್ಪಿಸಿ, ಜನರಿಗೆ ಪಾದಚಾರಿ ಮಾರ್ಗದಲ್ಲಿ ಓಡಾಡಲು ಅವಕಾಶ ಮಾಡಿಕೊಡಬೇಕು ಎಂದು ತೀರ್ಮಾನಿಸಲಾಗಿದೆ. ಬೀದಿ ವ್ಯಾಪಾರಿಗಳ ವ್ಯಾಪಾರಕ್ಕೆ ನಿರ್ದಿಷ್ಟ ರಸ್ತೆಗಳನ್ನು ನಿಗದಿ ಮಾಡಬೇಕು. ಇದಕ್ಕೆ ಎಲ್ಲಾ ಶಾಸಕರು ಒಮ್ಮತದ ಅಭಿಪ್ರಾಯ ತಿಳಿಸಿದ್ದಾರೆ" ಎಂದು ತಿಳಿಸಿದರು.
"ಹಗಲು ವೇಳೆ ವ್ಯಾಪಾರ ಮಾಡಿ ರಾತ್ರಿ ವೇಳೆ ಗಾಡಿಯನ್ನು ಬೀದಿ ಬದಿಯಲ್ಲಿ ಕಟ್ಟಿ ಹೋಗಿದ್ದರೆ, ಅಧಿಕಾರಿಗಳು ಎಲ್ಲವನ್ನು ಪ್ಯಾಕ್ ಮಾಡಿಕೊಂಡು ಹೋಗಲಿದ್ದಾರೆ. ಈಗಲೇ ಈ ವಿಚಾರದಲ್ಲಿ ಜನರು ಜಾಗೃತರಾಗಬೇಕು" ಎಂದು ಹೇಳಿದರು.
"60 ಸಾವಿರ ಬೀದಿ ವ್ಯಾಪಾರಿಗಳು ನೋಂದಣಿ ಮಾಡಿಕೊಂಡಿದ್ದು, 30 ಸಾವಿರ ಮಂದಿ ನಮಗೆ ವಾಹನ ಬೇಕು ಎಂದು ಕೇಳಿದ್ದಾರೆ. ಅದಕ್ಕೆ ಟೆಂಡರ್ ಕರೆಯಲಾಗಿದೆ. ಬೀದಿಬದಿ ವ್ಯಾಪಾರಿಗಳ ಗುರುತಿನ ಚೀಟಿ ಇದ್ದವರಿಗೆ ಮಾತ್ರ ವ್ಯಾಪಾರ ಮಾಡಲು ಅವಕಾಶ ನೀಡಲಾಗುವುದು. ಯಾರು ಗುರುತಿನ ಚೀಟಿ ಹೊಂದಿಲ್ಲ, ಅಂತಹವರಿಗೆ ಬೀದಿ ಬದಿಯಲ್ಲಿ ವ್ಯಾಪಾರಕ್ಕೆ ಅವಕಾಶವಿಲ್ಲ" ಎಂದರು.
"ಇನ್ನು ನಾವು ಎಷ್ಟೇ ಹೇಳಿದರೂ ಫ್ಲೆಕ್ಸ್ ಹಾಕುವುದು ಹೆಚ್ಚುತ್ತಿದೆ. ನಮ್ಮ ಪಕ್ಷವೂ ಸೇರಿದಂತೆ ಎಲ್ಲಾ ಪಕ್ಷದವರು ಫ್ಲೆಕ್ಸ್ ಹಾಕುತ್ತಿದ್ದಾರೆ. ಇನ್ನು ಮುಂದೆ ಯಾರು ಅನಧಿಕೃತ ಫ್ಲೆಕ್ಸ್ ಹಾಕುತ್ತಾರೋ ಅವರಿಗೆ ಪ್ರತಿ ಫ್ಲೆಕ್ಸ್ ಗೆ ಅದನ್ನು ಹಾಕಿದವರಿಗೆ 50 ಸಾವಿರದಿಂದ ಒಂದು ಲಕ್ಷ ರೂ. ವರೆಗೆ ದಂಡ ವಿಧಿಸಲು ಸೂಚಿಸಿದ್ದೇವೆ. ಹುಟ್ಟುಹಬ್ಬ, ಶುಭಾಶಯ ಸೇರಿದಂತೆ ಫ್ಲೆಕ್ಸ್ ಹಾವಳಿ ಹೆಚ್ಚಾಗಿದೆ. ಸರ್ಕಾರದಿಂದ ಜಾಹೀರಾತು ಪ್ರಕಟಿಸಲು ಕೆಲವು ಜಾಗ ನಿಗದಿ ಮಾಡಿದ್ದು, ಅಲ್ಲಿ ಅನುಮತಿ ಪಡೆದು ಹಾಕಿಕೊಳ್ಳಲಿ. ಇದರ ಹೊರತಾಗಿ ಫ್ಲೆಕ್ಸ್ ಹಾಕಿದರೆ ನಂತರದ ಪರಿಣಾಮವನ್ನು ನೀವು ಅನುಭವಿಸಬೇಕಾಗುತ್ತದೆ. ಈ ವಿಚಾರವಾಗಿ ಪೊಲೀಸ್ ಹಾಗೂ ಪಾಲಿಕೆಗಳ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ" ಎಂದು ಹೇಳಿದರು.
"ಇನ್ನು ಪಾಲಿಕೆ ವ್ಯಾಪ್ತಿಯ ಪಾರ್ಕ್ ಗಳನ್ನು ಸ್ಥಳೀಯ ಶಾಸಕರ ಜೊತೆ ಚರ್ಚೆ ಮಾಡಿ ಯಾವ ಸಮಯದಲ್ಲಿ ತೆಗೆಯಬೇಕು, ಯಾವ ಸಮಯದಲ್ಲಿ ತೆಗೆಯಬಾರದು ಎಂದು ತೀರ್ಮಾನ ಮಾಡಬೇಕು" ಎಂದರು.
"ಹಳೆ ವಾಹನಗಳನ್ನು ವಾರಾನುಗಟ್ಟಲೆ ರಸ್ತೆಗಳಲ್ಲಿ ನಿಲ್ಲಿಸಿ ಹೋಗಿದ್ದಾರೆ, ಅವುಗಳನ್ನು ಎತ್ತಿಕೊಂಡು ಹೋಗಿ ನಿಗದಿತ ಜಾಗದಲ್ಲಿ ಹಾಕಲಾಗುವುದು. ಇದರ ಜವಾಬ್ದಾರಿಯನ್ನು ಪೊಲೀಸರಿಗೆ ನೀಡಲಾಗಿದೆ. ಬೆಲ್ಲಳ್ಳಿ, ಬಿಡಗಾನಹಳ್ಳಿ, ಬಿದ್ದನಳ್ಳಿ, ಸೊಂಡೆಕೊಪ್ಪ ಜಾಗ ನಿಗದಿ ಮಾಡಲಾಗಿದ್ದು, ಇನ್ನು ಕೆಲವು ಜಾಗ ನೀಡಲಾಗುವುದು" ಎಂದು ಮಾಹಿತಿ ನೀಡಿದರು.
ವಾಹನಗಳ ಟೋಯಿಂಗ್ ಮಾಡುವ ವಿಚಾರ ಪ್ರಸ್ತಾಪ ಆಗಿದೆಯೇ ಎಂದು ಕೇಳಿದಾಗ, "ಎಲ್ಲಾ ಪಾಲಿಕೆಗಳಿಗೆ 2 ವಾಹನ ನೀಡಿದ್ದೇವೆ. ಎಲ್ಲಿ ವಾಹನ ನಿಲುಗಡೆಗೆ ಅವಕಾಶ ಇರುವುದಿಲ್ಲವೋ, ಅಲ್ಲಿ ವಾಹನ ನಿಲ್ಲಿಸಿದರೆ ಟೋಯಿಂಗ್ ಮಾಡಲಾಗುವುದು" ಎಂದರು.
ಪ್ರತಿ ವಾರ್ಡಿಗೆ 5-10 ಕೋಟಿ ಅನುದಾನ ಕೇಳುತ್ತಿದ್ದು, ಎಷ್ಟು ನೀಡಲಾಗುವುದು ಎಂದಾಗ, "ನೋಡೋಣ, ಅವರು ಆಕಾಶವನ್ನು ಕೇಳುತ್ತಿದ್ದಾರೆ, ಭೂಮಿಯನ್ನು ಕೇಳುತ್ತಿದ್ದಾರೆ" ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




