ಇದು 'ಕಾಪಿ-ಪೇಸ್ಟ್' ಟ್ರಾಫಿಕ್ ಡೇಟಾ: BBMPಯ ಅಂತಿಮ ವರದಿ ಬಗ್ಗೆ ತೀವ್ರ ಆಕ್ಷೇಪ
ಅಲ್ಟಿನೊಕ್ ಕನ್ಸಲ್ಟೆನ್ಸಿ ಎಂಜಿನಿಯರಿಂಗ್ ಇಂಕ್ ತಯಾರಿಸಿದ ಈ ಸಾಧ್ಯತಾ ವರದಿ, ಟನಲ್ ರಸ್ತೆ ಯೋಜನೆ ಸೇರಿ ಹಲವು ಸಂಚಾರ ನಿರ್ವಹಣಾ ಯೋಜನೆಗಳಿಗೆ ಆಧಾರವಾಗಿದೆ.

ಬೆಂಗಳೂರು: ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯ ಸಮಗ್ರ ಬೆಂಗಳೂರು ನಗರ ಸಂಚಾರ ನಿರ್ವಹಣಾ ಮೂಲಸೌಕರ್ಯ ಯೋಜನೆ–2024 (Comprehensive Bengaluru City Traffic Management Infrastructure Plan-2024), ನಗರ ದೀರ್ಘಾವಧಿ ಸಂಚಾರ ಯೋಜನೆಗಳಿಗೆ ಅಂತಿಮ ಸಾಧ್ಯತಾ ವರದಿಯಾಗಿ ಪರಿಗಣಿಸಲ್ಪಟ್ಟಿದ್ದು, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ನಡೆಸಿದ ಹಳೆಯ ಅಧ್ಯಯನಗಳಿಂದಲೇ ತೆಗೆದು ಯಥಾವತ್ ಕಾಪಿ-ಪೇಸ್ಟ್ ಮಾಡಲಾಗಿದೆ ಎಂಬ ವಿಷಯ ತಿಳಿದುಬಂದಿದೆ.
ಅಲ್ಟಿನೊಕ್ ಕನ್ಸಲ್ಟೆನ್ಸಿ ಎಂಜಿನಿಯರಿಂಗ್ ಇಂಕ್ ತಯಾರಿಸಿದ ಈ ಸಾಧ್ಯತಾ ವರದಿ, ಟನಲ್ ರಸ್ತೆ ಯೋಜನೆ ಸೇರಿ ಹಲವು ಸಂಚಾರ ನಿರ್ವಹಣಾ ಯೋಜನೆಗಳಿಗೆ ಆಧಾರವಾಗಿದೆ. ತುಮಕೂರು ರಸ್ತೆ, ಮೈಸೂರು ರಸ್ತೆ ಮತ್ತು ಹೊಸೂರು ರಸ್ತೆ ಸೇರಿದಂತೆ ಅನೇಕ ಮಾರ್ಗಗಳಲ್ಲಿ ಒಂದೇ ರೀತಿಯ ಸಂಚಾರ ದಟ್ಟಣೆಯ ದಾಖಲೆಗಳು ಕಾಣಿಸಿಕೊಂಡಿರುವುದು ಈ ವರದಿಯ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದೆ. ಜೆಸಿ ರಸ್ತೆ, ಹಳೆ ಮದ್ರಾಸ್ ರಸ್ತೆ ಮತ್ತು ಕನಕಪುರ ರಸ್ತೆ ಜಂಕ್ಷನ್‌ಗಳಲ್ಲಿಯೂ ಇದೇ ರೀತಿಯ ಪುನರಾವರ್ತನೆ ಕಂಡುಬಂದಿದೆ.
ಈ ಅಂಕಿಅಂಶಗಳು ಮೂಲತಃ 2020ರ ಆಗಸ್ಟ್‌ನಲ್ಲಿ ಹೊರಬಂದ ‘ಕಾರಿಡಾರ್ ಇಂಪ್ರೂವ್ಮೆಂಟ್ ಪ್ಲ್ಯಾನ್ಸ್ – ಡ್ರಾಫ್ಟ್ ಫೈನಲ್ ರಿಪೋರ್ಟ್’ ನಲ್ಲಿ ಕಾಣಿಸಿಕೊಂಡಿದ್ದು, ಹೊಸ ವರದಿ ಬಗ್ಗೆ ಅನುಮಾನ ಹುಟ್ಟಿಸಿದೆ. ಆನ್‌ಲೈನ್‌ನಲ್ಲಿ ಲಭ್ಯವಿರುವ ಈ ಸಾಧ್ಯತಾ ವರದಿಯಲ್ಲಿ ಟ್ರಾಫಿಕ್ ಪ್ರಮಾಣದ ಮಾಹಿತಿಯಷ್ಟೇ ಅಲ್ಲ, ಬಿಎಂಆರ್ ಸಿಎಲ್ ವರದಿಯ ವಿವರಗಳೂ ಸೇರಿವೆ.
ಸ್ವತಂತ್ರ ಸಂಚಾರ ತಜ್ಞ ಸತ್ಯ ಅರಿಕುಥಾರಂ, ಹಳೆಯ ಅಧ್ಯಯನಗಳ ಟೇಬಲ್‌ಗಳು, ಚಿತ್ರಗಳು ಮತ್ತು ಪಠ್ಯಗಳು ಎಲ್ಲೆಡೆ ಕಾಣಿಸುತ್ತವೆ. ಟನಲ್ ರಸ್ತೆಗಳಂತಹ ಕಾರು-ಕೇಂದ್ರಿತ ಮೂಲಸೌಕರ್ಯ ಯೋಜನೆಗಳ ಆಧಾರವೇ ತಪ್ಪಾಗಿದ್ದು, ಇದು ವೈಜ್ಞಾನಿಕವಾಗಿಲ್ಲ ಎಂದರು.
5.5 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಿಸಲಾದ ಈ ವರದಿಯ ಬಗ್ಗೆ ಜವಾಬ್ದಾರಿಯನ್ನು ಪ್ರಶ್ನಿಸಿ, ಇಂತಹ ವರದಿಯನ್ನು ಹೇಗೆ ಅಂಗೀಕರಿಸಿ ಹಣ ನೀಡಲಾಗಿದೆ ಎಂಬುದು ಗಂಭೀರ ಚಿಂತನೆಗೆ ಕಾರಣವಾಗಿದೆ ಎಂದು ಹೇಳಿದರು.
ಇದಕ್ಕೂ ಮುನ್ನ 9.5 ಕೋಟಿ ವೆಚ್ಚದ ಟನಲ್ ರಸ್ತೆ ಯೋಜನೆಯ ಡೀಟೈಲ್ಡ್ ಪ್ರಾಜೆಕ್ಟ್ ರಿಪೋರ್ಟ್ (DPR) ಮೇಲೂ ಇದೇ ರೀತಿಯ ನಕಲು ಆರೋಪಗಳು ಕೇಳಿಬಂದಿದ್ದವು. ಆ ವರದಿಯನ್ನು ಬಿಬಿಎಂಪಿಯ ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದ್ದರೂ, ವಿಷಯವನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದರು.
ಹಳೆಯ ವರದಿಗಳ ಮಾಹಿತಿಯನ್ನು ಪುನಃ ಬಳಸಿಕೊಂಡು ಹೊಸ ಅಧ್ಯಯನ ಮಾಡದೇ ಸರ್ಕಾರದ ಸಂಸ್ಥೆಗಳು ನಾಗರಿಕರ ಹಾದಿತಪ್ಪಿಸುತ್ತಿದೆ ಎಂದು ನಗರ ಪರಿಸರ ಮತ್ತು ಸಂಚಾರ ಹೋರಾಟಗಾರರೊಬ್ಬರು ಹೇಳುತ್ತಾರೆ. ಜನರಿಗೆ ಲಾಭವಾಗದ ಯೋಜನೆಗಳನ್ನು ಸಮರ್ಥಿಸಲು ಇಂತಹ ವಿಧಾನ ಅನುಸರಿಸಲಾಗುತ್ತಿದೆ. ಜನರು ಪ್ರಶ್ನಿಸದೆ ಒಪ್ಪಿಕೊಳ್ಳುತ್ತಾರೆ ಎಂಬ ಭಾವನೆ ಅವರಲ್ಲಿದೆ ಎಂದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ಬಿಎಂಆರ್ ಸಿಎಲ್ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೆ, ಅವರು ಪ್ರತಿಕ್ರಿಯೆಗೆ ಸಿಗಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



