ರಾಜ್ಯ

ಗೋ ದತ್ತು ಯೋಜನೆಯಲ್ಲಿ ಬೊಮ್ಮಾಯಿ, ಪ್ರಭು ಚೌಹಾಣ್ ಬಿಟ್ಟರೆ ಯಾವ ಬಿಜೆಪಿ ಶಾಸಕರು ದತ್ತು ಪಡೆದಿಲ್ಲ: ಪ್ರಿಯಾಂಕ್ ಖರ್ಗೆ

ಇಂದು ವಿಧಾನಸಭೆಯಲ್ಲಿ ಮಾತನಾಡಿದ ಅವರು, ಪ್ರಭು ಚೌಹಾಣ್ ಅವರು 11 ಗೋವುಗಳನ್ನು, ಬಸವರಾಜ ಬೊಮ್ಮಾಯಿಯವರು ಐದಾರು ಹಸುಗಳನ್ನು ದತ್ತು ತೆಗೆದುಕೊಂಡಿದ್ದು ಬಿಟ್ಟರೆ ಯಾವ ಬಿಜೆಪಿ ಶಾಸಕರು ಕೂಡ ದತ್ತು ತೆಗೆದುಕೊಂಡಿಲ್ಲ ಎಂದರು.

ಗೋ ದತ್ತು ಯೋಜನೆಯಲ್ಲಿ ಬೊಮ್ಮಾಯಿ, ಪ್ರಭು ಚೌಹಾಣ್ ಬಿಟ್ಟರೆ ಯಾವ ಬಿಜೆಪಿ ಶಾಸಕರು ದತ್ತು ಪಡೆದಿಲ್ಲ: ಪ್ರಿಯಾಂಕ್ ಖರ್ಗೆ
ಸಚಿವ ಪ್ರಿಯಾಂಕ್ ಖರ್ಗೆ(ಸಂಗ್ರಹ ಚಿತ್ರ)
Published On :

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದಲ್ಲಿ ಗೋವುಗಳ ದತ್ತು ಯೋಜನೆ ಎಂದು ಆರಂಭಿಸಿದರು. ಹಾಸ್ಯಾಸ್ಪದ ಎಂದರೆ ಗೋ ದತ್ತು ಯೋಜನೆಯಲ್ಲಿ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪ್ರಭು ಚೌಹಾಣ್ ಅವರನ್ನು ಬಿಟ್ಟರೆ ಯಾವ ಬಿಜೆಪಿ ಶಾಸಕರು ಕೂಡ ಗೋವುಗಳನ್ನು ದತ್ತು ಪಡೆದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.

ಇಂದು ವಿಧಾನಸಭೆಯಲ್ಲಿ ಮಾತನಾಡಿದ ಅವರು, ಪ್ರಭು ಚೌಹಾಣ್ ಅವರು 11 ಗೋವುಗಳನ್ನು, ಬಸವರಾಜ ಬೊಮ್ಮಾಯಿಯವರು ಐದಾರು ಹಸುಗಳನ್ನು ದತ್ತು ತೆಗೆದುಕೊಂಡಿದ್ದು ಬಿಟ್ಟರೆ ಯಾವ ಬಿಜೆಪಿ ಶಾಸಕರು ಕೂಡ ದತ್ತು ತೆಗೆದುಕೊಂಡಿಲ್ಲ, ಆ ಯೋಜನೆ ಘೋಷಿಸುವಾಗ ಅನೇಕ ಬಿಜೆಪಿ ನಾಯಕರು ಸದನದಲ್ಲಿ ಇದ್ದರು, ಆದರೆ ಗೋವುಗಳನ್ನು ದತ್ತು ಪಡೆಯುವ ಗೋಜಿಗೆ ಯಾವ ಬಿಜೆಪಿ ಶಾಸಕರೂ ಕೂಡ ಹೋಗಿಲ್ಲ ಏಕೆ ಎಂದು ಪ್ರಶ್ನಿಸಿದರು.

ಸಚಿವರ ಪ್ರಶ್ನೆಗೆ ಬಿಜೆಪಿ ಶಾಸಕರು ಸೂಕ್ತ ರೀತಿಯಲ್ಲಿ ಉತ್ತರ ನೀಡಲು ಸಾಧವಾಗದೆ ಇಕ್ಕಟ್ಟಿಗೆ ಸಿಲುಕಿದ ಪರಿಸ್ಥಿತಿ ಸೃಷ್ಟಿಯಾಯಿತು. ಬಿಜೆಪಿ ಸದಸ್ಯ ಶರಣು ಸಲಗಾರ್ ಮಾತಿಗೆ ಸಚಿವ ಪ್ರಿಯಾಂಕ್ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದರು. "ಗೋ ರಕ್ಷಣೆ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಗೋಮಾಂಸ ಮಾರಾಟ ಕಂಪನಿ ಯಾರದ್ದು? ಗೊತ್ತಾ ಎಂದು ಕಂಪನಿಯೊಂದರ ಹೆಸರು ಉಲ್ಲೇಖ ಮಾಡಿದರು.

ಈ ವೇಳೆ ಅಶ್ವತ್ಥ ನಾರಾಯಣ ಮಧ್ಯಪ್ರವೇಶ ಮಾಡಿ, "ಸರ್ಕಾರ ಕ್ರಮ ಕೈಗೊಳ್ಳಲಿ. ಪ್ರಿಯಾಂಕ್ ವಿಷಯಾಂತರ ಮಾಡ್ತಿದ್ದಾರೆ" ಎಂದು ಆಕ್ಷೇಪಿಸಿದರು. ಇದಕ್ಕೆ 'ನೀವು ಏಕೆ ಎದ್ದೇಳುತ್ತೀರಿ' ಎಂದು ಪ್ರಿಯಾಂಕ್ ಪ್ರಶ್ನಿಸಿದರು.

ಇದಕ್ಕೆ ಅಶ್ವತ್ಥ ನಾರಾಯಣ ತಿರುಗೇಟು ನೀಡಿ, "ಸರ್ಕಾರ ಸೂಕ್ಷ್ಮತೆ ಕಳೆದುಕೊಂಡಿದೆ. ಹಾಗಿದ್ದರೆ ನೀವು ಕ್ರಮ ಕೈಗೊಳ್ಳಿ. ಸರ್ಕಾರ ನಿಮ್ಮದು ಕಂಪನಿ ವಿರುದ್ಧ ಕ್ರಮ ಕೈಗೊಳ್ಳಿ" ಎಂದು ಅಶ್ವತ್ಥ ನಾರಾಯಣ ಸವಾಲು ಹಾಕಿದರು.

ಎಷ್ಟು ಗೋವುಗಳನ್ನು ದತ್ತು ಪಡೆದುಕೊಂಡಿದ್ದೀರಿ

ಹಿಂದಿನ ಸರ್ಕಾರದಲ್ಲಿ ಗೋ ದತ್ತು ಯೋಜನೆ ಎಂದಿತ್ತು. 11 ಗೋವುಗಳನ್ನು ಪ್ರಭು ಚೌಹಾಣ್ ದತ್ತು ಪಡೆದುಕೊಂಡಿದ್ದರು. ಬೊಮ್ಮಾಯಿ ಅವರು ಐದಾರು ಗೋವು ದತ್ತು ತೆಗೆದುಕೊಂಡಿದ್ದರು. ಅದನ್ನು ಹೊರತು ಪಡಿಸಿ ಯಾವ ಬಿಜೆಪಿ ಶಾಸಕರು ಗೋ ದತ್ತು ಪಡೆದುಕೊಂಡಿಲ್ಲ. ಎಷ್ಟು ಬಿಜೆಪಿ ಶಾಸಕರು ಜನ ದತ್ತು ಪಡೆದುಕೊಂಡರು ಎಂಬ ಅಂಕಿ ಅಂಶ ನೀಡಿ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು. ಈ ವೇಳೆ ಬಿಜೆಪಿ ಸದಸ್ಯರು ಮತ್ತು ಪ್ರಿಯಾಂಕ್ ನಡುವೆ ಮಾತಿನ ಚಕಮಕಿ ನಡೆಯಿತು‌.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.