ಶ್ರೀಗಳು ಎಲ್ಲೆಲ್ಲೋ ದಾರಿ ತಪ್ಪುತ್ತಿದ್ದಾರೆ: ವಿವಾದದ ಕಿಡಿ ಹೊತ್ತಿಸಿದ ರಮೇಶ್ ಬಂಡಿಸಿದ್ದೇಗೌಡ; ಕುಮಾರಸ್ವಾಮಿ ಹೇಳಿದ್ದೇನು?
ಹಿರಿಯ ಸ್ವಾಮೀಜಿ ಬಾಲಗಂಗಾಧರನಾಥ ಸ್ವಾಮಿಜಿ ಅವರು ಎಲ್ಲರನ್ನೂ ಒಗ್ಗೂಡಿಸಿ, ಜೊತೆಗೆ ಕರೆದುಕೊಂಡು ಹೋಗುವಂತೆ ಒಳ್ಳೆ ದಾರಿ ಹಾಕಿಕೊಟ್ಟಿದ್ದಾರೆ. ಅವರು ಹಾಕಿಕೊಟ್ಟಿರುವಂತಹ ಹಾದಿ ತಪ್ಪಬಾರದು ಎಂಬ ಉದ್ದೇಶದಿಂದ ಹೇಳಿದ್ದೇನೆಂದು ಸಮರ್ಥಿಸಿಕೊಂಡರು.

ಮಂಡ್ಯ: ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿಯವರ ಹೆಜ್ಜೆ ಎಲ್ಲೆಲ್ಲೋ ದಾರಿ ತಪ್ಪುತ್ತಿದೆ ಎಂದು ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ಎ.ಬಿ. ರಮೇಶ್ ಬಂಡಿಸಿದ್ದೇಗೌಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಂಡ್ಯದ ಶ್ರೀರಂಗಪಟ್ಟಣದ ಬಿಜಿಎಸ್ ಶಾಲಾ ಆವರಣದಲ್ಲಿ ನೂತನ ಶ್ರೀ ಆದಿಚುಂಚನಗಿರಿ ಬಾಲಜಗತ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಹಾಗೂ ಗಣಪತಿ ದೇವಾಲಯದ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮದ ಬಳಿಕ ಅವರು ಮಾತನಾಡಿದರು.
ಈ ವೇಳೆ ಮಠದ ಹಿರಿಯ ಸ್ವಾಮೀಜಿ ಬಾಲಗಂಗಾಧರನಾಥ ಸ್ವಾಮಿಜಿ ಅವರು ಎಲ್ಲರನ್ನೂ ಒಗ್ಗೂಡಿಸಿ, ಜೊತೆಗೆ ಕರೆದುಕೊಂಡು ಹೋಗುವಂತೆ ಒಳ್ಳೆ ದಾರಿ ಹಾಕಿಕೊಟ್ಟಿದ್ದಾರೆ. ಅವರು ಹಾಕಿಕೊಟ್ಟಿರುವಂತಹ ಹಾದಿ ತಪ್ಪಬಾರದು ಎಂಬ ಉದ್ದೇಶದಿಂದ ಹೇಳಿದ್ದೇನೆಂದು ಸಮರ್ಥಿಸಿಕೊಂಡರು.
ಚುಂಚನಗಿರಿ ಮಠ ಪ್ರಪಂಚದಾದ್ಯಂತ ಹೆಸರು ಮಾಡಿದೆ. ಇತ್ತೀಚಿನ ದಿನದ ತಮ್ಮ ಹೆಜ್ಜೆ ಹಾಗೂ ನುಡಿಗಳನ್ನ ಗಮನಿಸಿ ಬಹಳ ಬೇಸರದಿಂದ ಹೇಳುತ್ತಿದ್ದೇನೆ. ನಮ್ಮ ಮಠ ಎಂದು ಎಲ್ಲರೂ ಸದ್ಬಾವನೆಯಿಂದ ಕೂಡಿದೆ.
ಈ ಮಠ ಜಾತ್ಯಾತೀತವಾಗಿ ಬೆಳೆದು ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದೆ. ದೇಶದ ಎಲ್ಲಾ ವರ್ಗದ ಜನರನ್ನ ಒಂದು ತೆಕ್ಕೆಗೆ ತೆಗೆದುಕೊಂಡು, ಎಲ್ಲರಿಗೂ ಸಹಾಯ ಮಾಡಿರುವ ಕೀರ್ತಿ ನಿಮಗೆ ಸಲ್ಲಬೇಕು ಎಂದು ವಿವಾದಾತ್ಮಕವಾಗಿ ಹೇಳಿದ್ದಾರೆ.
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮಾತನಾಡಿ, ಆದಿಚುಂಚನಗಿರಿ ಮಠದ ಸ್ವಾಮೀಜಿ ದಾರಿ ತಪ್ಪುತ್ತಿದ್ದಾರೆ ಎಂಬ ರಮೇಶ್ ಬಂಡಿಸಿದ್ದೇಗೌಡ ಅವರ ಹೇಳಿಕೆಗೆ ಬೇಸರ ವ್ಯಕ್ತಪಡಿಸಿದರು. ಸ್ವಾಮೀಜಿ ಅವರ ನಡವಳಿಕೆಯನ್ನು ಸಾರ್ವಜನಿಕವಾಗಿ ನಾನೇ ಒಪ್ಪಿಕೊಳ್ಳುತ್ತೇನೆ. ಆದರೆ ರಮೇಶ್ ಬಂಡಿಸಿದ್ದೇಗೌಡ ಅವರು ಸ್ವಾಮೀಜಿ ದಾರಿ ತಪ್ಪುತ್ತಿದ್ದಾರೆ ಎಂದು ಹೇಳುವ ಮೂಲಕ ಸ್ವಾಮೀಜಿ ಅವರನ್ನೇ ಪ್ರಶ್ನಿಸುವ ಹಂತಕ್ಕೆ ನಾವೆಲ್ಲ ಬೆಳದಿದ್ದೇವೆಯೇ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯ ರಾಜಕಾರಣ ವಿಷಯವಾಗಿ ನಮ್ಮ ಸಮಾಜದವರು ಮುಖ್ಯಮಂತ್ರಿ ಆಗಬೇಕು ಎಂಬ ನಿರ್ಮಲಾನಂದನಾಥ ಸ್ವಾಮೀಜಿಗಳ ಹೇಳಿಕೆಗೆ, ಬೇರೆ ಸಮಾಜದ ಸ್ವಾಮೀಜಿಗಳು ಲಘುವಾಗಿ ಮಾತನಾಡಿದ್ದರು. ಆ ವೇಳೆ ನಾನು ಸಹ ನೀವು ನಿಮ್ಮ ವ್ಯಕ್ತಿತ್ವ ಬಹಳ ಎತ್ತರಕ್ಕೆ ಬೆಳೆದಿದೆ ತಾವು ರಾಜಕೀಯವಾಗಿ ಯಾವುದೇ ಹೇಳಿಕೆಳನ್ನು ನೀಡಬಾರದು ಎಂದು ಹೇಳಿದ್ದೆ.
ಈ ವಿಷಯವಾಗಿ ಮಾಜಿ ಪ್ರಧಾನಿ ದೇವೇಗೌಡರು ನನಗೆ ಕಿವಿಮಾತುಗಳನ್ನ ಹೇಳಿ ಸ್ವಾಮೀಜಿಗಳು ಹೆಚ್ಚಾಗಿ ಓದಿಕೊಂಡಿದ್ದು, ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದಾರೆ ಮೊದಲು ಸ್ವಾಮೀಜಿ ಅವರ ಬಳಿ ಕ್ಷಮೆ ಕೋರುವಂತೆ ಹೇಳಿದ್ದರು. ಸಾರ್ವಜನಿಕವಾಗಿ ನಾನು ಕ್ಷಮೆ ಕೋರಿದ್ದೇನೆ ಎಂದು ಸ್ಮರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



