ಸದನಕ್ಕೆ ತಪ್ಪು ಮಾಹಿತಿ ನೀಡಿ ಪೇಚಿಗೆ ಸಿಲುಕಿದ ಸಚಿವ SS ಮಲ್ಲಿಕಾರ್ಜುನ್: ಬಿಜೆಪಿ ಶಾಸಕರಿಂದ ತರಾಟೆ
ಶುಕ್ರವಾರ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಶಾಸಕ ಭೀಮಣ್ಣ ನಾಯ್ಕ್ ಪ್ರಶ್ನೆಗೆ ಉತ್ತರ ನೀಡುತ್ತಿದ್ದ ವೇಳೆ ಸಚಿವ ಮಲ್ಲಿಕಾರ್ಜುನ್ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದರು.

ಬೆಂಗಳೂರು: ವಿಧಾನಸಭೆಯಲ್ಲಿ ತಮ್ಮ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ನೀಡದ ತೋಟಗಾರಿಕೆ ಮತ್ತು ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ವಿರುದ್ಧ ಶಾಸಕರು ಪಕ್ಷಾತೀತವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಪೇಚೆಗೆ ಸಿಲುಕಿದ ಪ್ರಸಂಗ ನಡೆಯಿತು. ಶುಕ್ರವಾರ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಶಾಸಕ ಭೀಮಣ್ಣ ನಾಯ್ಕ್ ಪ್ರಶ್ನೆಗೆ ಉತ್ತರ ನೀಡುತ್ತಿದ್ದ ವೇಳೆ ಸಚಿವ ಮಲ್ಲಿಕಾರ್ಜುನ್ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದರು.
ಸಚಿವರು ಸದನದ ಕಲಾಪಗಳಿಗೆ ವಿರಳವಾಗಿ ಹಾಜರಾಗುತ್ತಾರೆ ಎಂದು ಹಲವಾರು ಸದಸ್ಯರು ಅಭಿಪ್ರಾಯಪಟ್ಟರು. ಪ್ರಶ್ನೋತ್ತರ ಅವಧಿಯಲ್ಲಿ, ಶಿರಸಿ ಶಾಸಕ ಭೀಮಣ್ಣ ಟಿ. ನಾಯಕ್ ಅವರು ಅಡಿಕೆ ಬೆಳೆಗಳ ಮೇಲೆ ಪರಿಣಾಮ ಬೀರುವ ಎಲೆ ಚುಕ್ಕೆ ರೋಗದ ಬಗ್ಗೆ ಪ್ರಶ್ನೆಯನ್ನು ಎತ್ತಿದರು.
ಈ ವೇಳೆ ಸಚಿವರ ಉತ್ತರದ ಅಂಕಿ ಅಂಶಗಳನ್ನ ಪ್ರಸ್ತಾಪಿಸಿ ತರಾಟೆಗೆ ತೆಗೆದುಕೊಂಡ ಬಿಜೆಪಿ ಶಾಸಕ ಸುನಿಲ್ ಕುಮಾರ್, 'ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಬಿಡುಗಡೆಯಾದ ಹಾಗೂ ಬಳಕೆಯಾದ ಹಣದ ಬಗ್ಗೆ ಹೇಳಿದ್ದೀರಿ. 16,866 ಜನರಿಗೆ 5.53 ಕೋಟಿ ಬಿಡುಗಡೆ ಮಾಡಲಾಗಿದೆ ಅಂತಾ ಸಚಿವರು ಒಂದು ಉತ್ತರ ನೀಡಿದ್ದಾರೆ. ಸಚಿವರ ಉತ್ತರದ ಕೊನೆಯಲ್ಲಿ ಮತ್ತೊಂದನ್ನು ಉಲ್ಲೇಖಿಸಿದ್ದಾರೆ' ಎಂದು ವಿವರಿಸಿದರು.
ಆದರೆ ಸಚಿವರು ತಮ್ಮ ಉತ್ತರದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಸದಸ್ಯರು ಆರೋಪಿಸಿದರು. ಪ್ರತಿಕ್ರಿಯೆಯಿಂದ ಅತೃಪ್ತರಾದ ಬಿಜೆಪಿ ಸದಸ್ಯರು ಪೂರಕ ಪ್ರಶ್ನೆಗಳನ್ನು ಎತ್ತಿದರು. ಸಚಿವರು ತೃಪ್ತಿದಾಯಕ ಉತ್ತರಗಳನ್ನು ನೀಡಲು ವಿಫಲರಾದರು.
ಕೊನೆಗೆ ಗೊಂದಲಕ್ಕೆ ತೆರೆ ಎಳೆಯಲು ಮಧ್ಯಪ್ರವೇಶಿಸಿದ ಸ್ಪೀಕರ್ ಖಾದರ್, 'ಮಾಹಿತಿ ಪಡೆದು ಗೊಂದಲ ಬಗೆಹರಿಸಿ ಎಂದು ಸಚಿವರಿಗೆ ಸಲಹೆ ನೀಡಿದರು. ಅಲ್ಲದೆ, ಇದೇ ಪ್ರಶ್ನೋತ್ತರ ಕಲಾಪದ ವೇಳೆ ಉತ್ತರ ಕೊಡುವಂತೆ ಸಚಿವರಿಗೆ ತಾಕೀತು ಮಾಡಿದರು.
ಆಳಂದ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಅವರು ಕಲಬುರಗಿಯಲ್ಲಿ ಕೋಲ್ಡ್ ಸ್ಟೋರೇಜ್ ಸೌಲಭ್ಯಗಳ ಬಗ್ಗೆ ಸಚಿವರಿಗೆ ಮತ್ತೊಂದು ಪ್ರಶ್ನೆಯನ್ನು ಕೇಳಿದರು. ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಲು ವಿಫಲವಾದ ನಂತರ ಸಚಿವರು ಮತ್ತೆ ಸದಸ್ಯರಿಂದ ಟೀಕೆಗೆ ಒಳಗಾದರು.
ಎಲ್ಲದಕ್ಕೂ ಹೀಗೆ ಮಾಡಬೇಡಿ, ನಾವು ಬಜೆಟ್ ಬುಕ್ ಹಿಡಿದು ಚರ್ಚೆ ಮಾಡ್ತೇವೆ. ನೀವು ಉತ್ತರ ಕೊಡಿಸಬೇಕು, ಸದನಕ್ಕೆ ತಪ್ಪು ಉತ್ತರ ಕೊಟ್ಟರು ಹೇಗೆ ಸುಮ್ಮನಿರೋದು. ಇಲ್ಲ ಉತ್ತರವನ್ನ ವಾಪಸ್ ಪಡೆಯಲಿ ಎಂದು ಸುನಿಲ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



