ರಾಜ್ಯ

ಬೆಂಗಳೂರಿಗರಿಗೆ ಗುಡ್​​ ನ್ಯೂಸ್​​: ನೈಸ್ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನಗಳಿಗೆ ಶೀಘ್ರದಲ್ಲೇ ಟೋಲ್ ರದ್ದು..?

ಬೆಂಗಳೂರಿನ ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳಿಂದ ಟೋಲ್ ವಸೂಲಿ ರದ್ದು ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಬೆಂಗಳೂರಿಗರಿಗೆ ಗುಡ್​​ ನ್ಯೂಸ್​​: ನೈಸ್ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನಗಳಿಗೆ ಶೀಘ್ರದಲ್ಲೇ ಟೋಲ್ ರದ್ದು..?
ಸಂಗ್ರಹ ಚಿತ್ರ
Published On :

ಬೆಂಗಳೂರು: ಬೆಂಗಳೂರು ನಗರದ ಸಂಚಾರ ಸಮಸ್ಯೆ ದಿನೇ ದಿನೇ ಹೆಚ್ಚುತ್ತಿರುವ ನಡುವೆಯೇ, ಬೈಕ್ ಸವಾರರಿಗೆ ಸ್ವಲ್ಪ ಮಟ್ಟಿನ ನಿರಾಳತೆ ನೀಡುವ ಸಾಧ್ಯತೆಯೊಂದನ್ನು ರಾಜ್ಯ ಸರ್ಕಾರ ಪರಿಶೀಲಿಸುತ್ತಿದೆ.

ಬೆಂಗಳೂರಿನ ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳಿಂದ ಟೋಲ್ ವಸೂಲಿ ರದ್ದು ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಈ ವಿಷಯವನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರು ವಿಧಾನ ಪರಿಷತ್ತಿನಲ್ಲಿ ಪ್ರಸ್ತಾಪಿಸಿದ್ದಾರೆ.

ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ರಾಮೋಜಿ ಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ನೈಸ್ ರಸ್ತೆ ಯೋಜನೆಗೆ ಸಂಬಂಧಿಸಿದ ಹಲವು ವಿಚಾರಗಳನ್ನು ಪರಿಶೀಲಿಸಲು ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

ನೈಸ್ ರಸ್ತೆ ನಿರ್ಮಾಣಕ್ಕಾಗಿ ಅನೇಕ ರೈತರು ತಮ್ಮ ಭೂಮಿಯನ್ನು ನೀಡಿದ್ದರು. ಆದರೆ ಅವರಲ್ಲಿ ಹಲವರಿಗೆ ಇನ್ನೂ ಸಂಪೂರ್ಣ ಪರಿಹಾರ ದೊರೆತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ವಿಷಯವನ್ನು ವಿಧಾನ ಪರಿಷತ್ತಿನಲ್ಲಿ ರಮೋಜಿ ಗೌಡ ಪ್ರಸ್ತಾಪಿಸಿ, ರೈತರಿಗೆ ನ್ಯಾಯ ಒದಗಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ನೈಸ್ ರಸ್ತೆ ಯೋಜನೆಗಾಗಿ ರಾಜ್ಯ ಸರ್ಕಾರ ಮತ್ತು ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ (ನೈಸ್) ನಡುವೆ ಮಾಡಿಕೊಂಡ ಒಪ್ಪಂದದ ಅವಧಿಯೂ ಅಂತ್ಯಗೊಳ್ಳುವ ಹಂತದಲ್ಲಿದೆ. ಆದರೂ ಯೋಜನೆಗೆ ಸಂಬಂಧಿಸಿದ ಹಲವು ವಿಷಯಗಳು ಇನ್ನೂ ಸ್ಪಷ್ಟವಾಗಿಲ್ಲ ಎಂದು ಹೇಳಿದರು.

ನೈಸ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಕೆಲವೆಡೆ ನಿರ್ವಹಣಾ ಸಮಸ್ಯೆಗಳಿವೆ. ರಸ್ತೆ ನಿರ್ವಹಣೆ ಮತ್ತು ಸುರಕ್ಷತೆ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ, ಒಪ್ಪಂದದಲ್ಲಿ ನಿಗದಿಪಡಿಸಿದ ಷರತ್ತುಗಳ ಕುರಿತು ಮತ್ತು ಅದನ್ನು ನವೀಕರಿಸಿರುವ ಕುರಿತು ವಿವರಗಳನ್ನು ಕೇಳಿದರು.

ಇದಕ್ಕೆ ಉತ್ತರಿಸಿದ ಸಚಿವರು, ಯೋಜನೆಯ ಸ್ಥಿತಿ, ಒಪ್ಪಂದದ ಷರತ್ತುಗಳು, ಟೋಲ್ ವಸೂಲಿ ಹಾಗೂ ಇತರೆ ವಿಷಯಗಳನ್ನು ಪರಿಶೀಲಿಸಲು ಗೃಹ ಸಚಿವರ ನೇತೃತ್ವದಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.

ಸಮಿತಿ ವರದಿ ಸಲ್ಲಿಸಿದ ಬಳಿಕ ದ್ವಿಚಕ್ರ ವಾಹನಗಳ ಟೋಲ್ ರದ್ದುಗೊಳಿಸುವ ಯೋಜನೆ ಸೇರಿದಂತೆ ಮುಂದಿನ ಕ್ರಮಗಳ ಬಗ್ಗೆ ಸರ್ಕಾರ ನಿರ್ಧರಿಸುತ್ತದೆ ಎಂದು ಹೇಳಿದರು.

ನೈಸ್ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ಬೈಕ್ ಸವಾರರು ಸಂಚರಿಸುತ್ತಾರೆ. ದ್ವಿಚಕ್ರ ವಾಹನಗಳಿಗೆ ಟೋಲ್ ರದ್ದು ಮಾಡಿದರೆ ನಗರದಲ್ಲಿ ಸಂಚಾರ ಸುಗಮವಾಗುವ ಜೊತೆಗೆ ಬೈಕ್ ಸವಾರರಿಗೆ ಆರ್ಥಿಕ ಭಾರವೂ ಕಡಿಮೆಯಾಗಲಿದೆ. ಆದರೆ ಈ ಬಗ್ಗೆ ಅಂತಿಮ ತೀರ್ಮಾನ ಸಚಿವ ಸಂಪುಟ ಉಪ ಸಮಿತಿಯ ವರದಿ ನಂತರವೇ ಹೊರಬರುವ ಸಾಧ್ಯತೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.