ರಾಜ್ಯ

LPG ಸಿಲಿಂಡರ್ ದರ 60 ರೂ ಏರಿಕೆ: ಮಹಿಳಾ ದಿನಕ್ಕೆ ಕೇಂದ್ರ ಸರ್ಕಾರದ ಉಡುಗೊರೆ; DCM ಡಿ.ಕೆ ಶಿವಕುಮಾರ್ ಟೀಕೆ

ಸಣ್ಣ ಪುಟ್ಟ ವಿಷಯಗಳಿಗೂ ನಾಟಕೀಯವಾಗಿ ಮಾಧ್ಯಮಗಳ ಮುಂದೆ ಬರುವ ರಾಜ್ಯದ ಬಿಜೆಪಿ 'ಖಾಲಿ ಟ್ರಂಕ್' ಸಂಸದರು, ಜನಸಾಮಾನ್ಯರ ಈ ಸಂಕಷ್ಟದ ಬಗ್ಗೆ ಯಾಕೆ ಮೌನವಾಗಿದ್ದಾರೆ? ಈ ದರ ಏರಿಕೆ ವಿರುದ್ಧ ನಿಮ್ಮ ಹೋರಾಟ ಎಲ್ಲಿ? ನಿಮ್ಮ ಅಭಿಪ್ರಾಯ ಏನು?

LPG ಸಿಲಿಂಡರ್ ದರ 60 ರೂ ಏರಿಕೆ: ಮಹಿಳಾ ದಿನಕ್ಕೆ ಕೇಂದ್ರ ಸರ್ಕಾರದ ಉಡುಗೊರೆ; DCM ಡಿ.ಕೆ ಶಿವಕುಮಾರ್ ಟೀಕೆ
ಡಿಸಿಎಂ ಡಿಕೆ.ಶಿವಕುಮಾರ್
Published On :

ಬೆಂಗಳೂರು: ಸಿಲಿಂಡರ್ ಬೆಲೆಯನ್ನು 60 ರೂ. ಏರಿಕೆ ಮಾಡುವ ಮೂಲಕ ಕೇಂದ್ರದ ಮೋದಿ ಸರ್ಕಾರ, ವಿಶ್ವ ಮಹಿಳಾ ದಿನದಂದೇ ಮಹಿಳೆಯರಿಗೆ ಅಘಾತಕಾರಿ 'ಕೊಡುಗೆ' ನೀಡಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಭಾನುವಾರ ಟೀಕಿಸಿದ್ದಾರೆ.

ಸಿಲಿಂಡರ್ ದರ ಕುರಿತು ಮಾತನಾಡಿರುವ ಅವರು, ಸಿಲಿಂಡರ್ ಬೆಲೆಯನ್ನು ರೂ.60 ಏರಿಕೆ ಮಾಡುವ ಮೂಲಕ ಕೇಂದ್ರದ ಮೋದಿ ಸರ್ಕಾರ, ವಿಶ್ವ ಮಹಿಳಾ ದಿನದಂದೇ ಮಹಿಳೆಯರಿಗೆ ಅಘಾತಕಾರಿ 'ಕೊಡುಗೆ' ನೀಡಿದೆ. ದೇಶದ ಸುಮಾರು 30 ಕೋಟಿ ಕುಟುಂಬಗಳ ಮೇಲೆ ಈ ನಿರ್ಧಾರ ನೇರ ಪರಿಣಾಮ ಬೀರಲಿದೆ ಎಂದು ಹೇಳಿದರು.

ಸಣ್ಣ ಪುಟ್ಟ ವಿಷಯಗಳಿಗೂ ನಾಟಕೀಯವಾಗಿ ಮಾಧ್ಯಮಗಳ ಮುಂದೆ ಬರುವ ರಾಜ್ಯದ ಬಿಜೆಪಿ 'ಖಾಲಿ ಟ್ರಂಕ್' ಸಂಸದರು, ಜನಸಾಮಾನ್ಯರ ಈ ಸಂಕಷ್ಟದ ಬಗ್ಗೆ ಯಾಕೆ ಮೌನವಾಗಿದ್ದಾರೆ? ಈ ದರ ಏರಿಕೆ ವಿರುದ್ಧ ನಿಮ್ಮ ಹೋರಾಟ ಎಲ್ಲಿ? ನಿಮ್ಮ ಅಭಿಪ್ರಾಯ ಏನು? ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಈ ದೇಶದ 'ಸಹೋದರಿಯರ' ಬಗ್ಗೆ ನಿಜವಾದ ಕಾಳಜಿ ಇದ್ದರೆ, ಕೂಡಲೇ ಈ ಸಿಲಿಂಡರ್ ಬೆಲೆ ಏರಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಈ ನಡುವೆ ಕಲಬುರಗಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಸಮಾರಂಭದಲ್ಲೂ ಮಾತನಾಡಿದ ಅವರು, ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರವನ್ನು ರೂ.60 ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕೇಂದ್ರ ಸರ್ಕಾರ ಸದಾ ಸಾಮಾನ್ಯ ಜನರ ಮೇಲೆ ಆರ್ಥಿಕ ಭಾರವನ್ನು ಹಾಕುತ್ತಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳ ಜೊತೆಗೆ ಬಡವರಿಗೆ ಮನೆ ಮತ್ತು ಜಮೀನು ಒದಗಿಸುವ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು. ನೀರಾವರಿ ವ್ಯವಸ್ಥೆ ಬಲಪಡಿಸಲು 400ಕ್ಕೂ ಹೆಚ್ಚು ಕೆರೆಗಳನ್ನು ಪುನರುಜ್ಜೀವನಗೊಳಿಸುವ ಯೋಜನೆಯಿದೆ ಎಂದು ತಿಳಿಸಿದರು.

ಶಿಕ್ಷಣ ಇಲಾಖೆಯಡಿ ರಾಜ್ಯದಲ್ಲಿ 2,000 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಅದರಲ್ಲಿ 330 ಶಾಲೆಗಳು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸ್ಥಾಪನೆಯಾಗಲಿವೆ ಎಂದು ಹೇಳಿದರು.

ಇದೇ ವೇಳೆ ಸುಮಾರು 2.5 ಲಕ್ಷ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡುವ ಯೋಜನೆ ಇದೆ. ಈಗಾಗಲೇ 56,000ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ ರೂ.52,000 ಕೋಟಿ ಖರ್ಚು ಮಾಡುತ್ತಿದೆ ಎಂದೂ ಹೇಳಿದರು.

ಈ ಸಂದರ್ಭದಲ್ಲಿ ಸಚಿವ ಪ್ರಿಯಾಕ್ ಖರ್ಗೆ ಅವರನ್ನು ಕೊಂಡಾಡಿದ ಶಿವಕುಮಾರ್ ಅವರು, ಭವಿಷ್ಯದ ಕರ್ನಾಟಕದ ನಾಯಕನಾಗಿ ಹೊರಹೊಮ್ಮುತ್ತಿದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.