ರಾಜ್ಯ

ಬೆಂಗಳೂರು: ಕಿಡ್ನ್ಯಾಪ್ ಆಗಿದ್ದ ವ್ಯಕ್ತಿ ತಮಿಳುನಾಡಿನಲ್ಲಿ ಶವವಾಗಿ ಪತ್ತೆ; ಒಬ್ಬನ ಬಂಧನ

ಮೃತ ವ್ಯಕ್ತಿಯನ್ನು ಬೆಂಗಳೂರು ನಗರದ ಹೊರವಲಯದಲ್ಲಿರುವ ಆನೇಕಲ್ ತಾಲ್ಲೂಕಿನ ಹೊನ್ನಕಳಸಪುರ ಗ್ರಾಮದ ನಿವಾಸಿ ಗೋಪಾಲ್(30) ಅಲಿಯಾಸ್ ಗೋಪಿ ಎಂದು ಗುರುತಿಸಲಾಗಿದೆ.

ಬೆಂಗಳೂರು: ಕಿಡ್ನ್ಯಾಪ್ ಆಗಿದ್ದ ವ್ಯಕ್ತಿ ತಮಿಳುನಾಡಿನಲ್ಲಿ ಶವವಾಗಿ ಪತ್ತೆ; ಒಬ್ಬನ ಬಂಧನ
ಗೋಪಾಲ್
Published On :

ಬೆಂಗಳೂರು: ಬೆಂಗಳೂರಿನ ಹೊರ ವಲಯದಲ್ಲಿ ಸಿನಿಮಾ ಸ್ಟೈಲ್​​ನಲ್ಲಿ ಕಿಡ್ನ್ಯಾಪ್ ಆಗಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಒಬ್ಬರು ಸೋಮವಾರ ತಮಿಳುನಾಡಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ವ್ಯಕ್ತಿಯನ್ನು ಬೆಂಗಳೂರು ನಗರದ ಹೊರವಲಯದಲ್ಲಿರುವ ಆನೇಕಲ್ ತಾಲ್ಲೂಕಿನ ಹೊನ್ನಕಳಸಪುರ ಗ್ರಾಮದ ನಿವಾಸಿ ಗೋಪಾಲ್(30) ಅಲಿಯಾಸ್ ಗೋಪಿ ಎಂದು ಗುರುತಿಸಲಾಗಿದೆ.

ಗೋಪಿ ರಿಯಲ್ ಎಸ್ಟೇಟ್ ಮತ್ತು ಹಣಕಾಸು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗೋಪಾಲ್ ಅವರನ್ನು ಅಪಹರಿಸಿದ ಇಬ್ಬರು ಆರೋಪಿಗಳನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ. ಆದರೆ ಅಪರಾಧದ ಹಿಂದಿನ ಮಾಸ್ಟರ್ ಮೈಂಡ್ ಎಂದು ಹೇಳಲಾದ ಮೋಹನ್ ಬಾಬು ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಭಾನುವಾರ, ಗೋಪಾಲ್ ಮತ್ತು ಅವರ ಸ್ನೇಹಿತ ಸತೀಶ್ ಅತ್ತಿಬೆಲೆಯಿಂದ ಆನೇಕಲ್ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಆನೇಕಲ್ ತಾಲ್ಲೂಕಿನ ಕರ್ಪುರ ಗೇಟ್ ಬಳಿ ಗೋಪಿ ಅವರನ್ನು ಅಪಹರಿಸಲಾಗಿದೆ.

ಅಪಹರಣಕ್ಕೆ ಯೋಜನೆ ರೂಪಿಸಿದ್ದ ದುಷ್ಕರ್ಮಿಗಳು, ಗೋಪಾಲ್ ಅವರ ಕಾರು ಅಡ್ಡಗಟ್ಟಿ, ಕಿಡ್ನ್ಯಾಪ್ ಮಾಡಿದ್ದರು. ಅಪಹರಿಸಿ ಕಾರಿನಲ್ಲಿ ಕರೆದೊಯ್ದು ಬಳಿಕ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ ಎನ್ನಲಾಗುತ್ತಿದೆ.

ನಿನ್ನೆ ಸಂಜೆ ಕರ್ಪೂರ ಗೇಟ್ ಬಳಿ ಬರ್ತಿದ್ದ ಗೋಪಾಲನ ಕಾರಿಗೆ ಟಾಟಾ ಏಸ್ ವಾಹನ ಡಿಕ್ಕಿ ಹೊಡೆಸಿ ಮುಖಕ್ಕೆ ಪೆಪ್ಪರ್ ಸ್ಪ್ರೇ ಹೊಡೆದು ಕಿಡ್ನಾಪ್ ಮಾಡಿದ್ದರು. ರಿಯಲ್ ಎಸ್ಟೇಟ್ ಏಜೆಂಟ್‌ಗಳಾಗಿದ್ದ ಗೋಪಾಲ್ ಹಾಗೂ ಮೋಹನ್ ಬಾಬು ನಡುವೆ ಕೆಲ ವಿಚಾರಕ್ಕೆ ವೈಷಮ್ಯವಿತ್ತು. ತನಗಿಂತ ಹೆಚ್ಚು ಹಣ ಗಳಿಸುತ್ತಿದ್ದಾನೆ ಎಂದು ಮೋಹನ್ ಬಾಬುಗೆ ಹೊಟ್ಟೆ ಕಿಚ್ಚಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಗೋಪಾಲ ಮೊದಲು ಮೋಹನ್ ಬಾಬು ಬಳಿ ಕೆಲಸ ಮಾಡುತ್ತಿದ್ದನಂತೆ. ಬಳಿಕ ಕೆಲ ವರ್ಷಗಳ ಹಿಂದೆ ಮೋಹನ್ ಬಾಬು ಬಳಿ ಕೆಲಸ ಬಿಟ್ಟು ತಾನೇ ನೇರವಾಗಿ ವ್ಯವಹಾರ ಮಾಡಲು ಶುರು ಮಾಡಿದ್ದ ಎಂದು ತಿಳಿದು ಬಂದಿದೆ.

ಗೋಪಾಲ್ ಪತ್ತೆಗಾಗಿ ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್ ನೇತೃತ್ವದಲ್ಲಿ 9 ಇನ್ಸ್‌ಪೆಕ್ಟರ್‌ಗಳೊಂದಿಗೆ 7 ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಗೋಪಾಲ್ ರಿಯಲ್ ಎಸ್ಟೇಟ್ ಹಾಗೂ ಹಣಕಾಸು ವ್ಯವಹಾರ ನಡೆಸುತ್ತಿದ್ದರು. ಸಾಕಷ್ಟು ಹುಡುಕಾಟದ ನಂತರ ಇಂದು ತಮಿಳುನಾಡಿನ ಡೆಂಕಣಿಕೋಟೆ ಬಳಿ ಗೋಪಾಲ್ ಅವರ ಮೃತದೇಹ ಪತ್ತೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.