LPG ದರ ಏರಿಕೆ ಎಫೆಕ್ಟ್: ಹೋಟೆಲ್‌ಗಳಲ್ಲಿ ತಿಂಡಿ-ತಿನಿಸು, ಅಗತ್ಯ ವಸ್ತುಗಳ ಬೆಲೆ ಏರಿಕೆ ಸಾಧ್ಯತೆ
ಕಾಫಿ ಬೀಜಗಳ ಬೆಲೆ ಕೂಡ ಏರಿಕೆಯಾಗಿದ್ದು, ಗ್ರೇವಿ ಮತ್ತು ಸಿಹಿತಿಂಡಿಗಳಲ್ಲಿ ವ್ಯಾಪಕವಾಗಿ ಬಳಸುವ ಗೋಡಂಬಿ ಸೇರಿದಂತೆ ಡ್ರೈಫ್ರೂಟ್ಸ್‌ಗಳ ಬೆಲೆ ಸುಮಾರು 20ರಿಂದ 25 ಶೇಕಡಾವರೆಗೆ ಹೆಚ್ಚಾಗಿದೆ

ಬೆಂಗಳೂರು: ಎಲ್‌ಪಿಜಿ ದರ ಏರಿಕೆಯಿಂದಾಗಿ ಹೋಟೆಲ್‌ಗಳಲ್ಲಿ ತಿಂಡಿ– ತಿನಿಸುಗಳು ಹಾಗೂ ಅಗತ್ಯ ವಸ್ತುಗಳ ದರ ಕೂಡ ಹೆಚ್ಚಾಗುವ ಸಾಧ್ಯತೆ ಇದೆ.
ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ದರವನ್ನು ರೂ.115 ಹೆಚ್ಚಿಸಲಾಗಿದ್ದು, ಗೃಹ ಬಳಕೆಯ ಸಿಲಿಂಡರ್‌ಗಳ ಬೆಲೆಯೂ ರೂ.60 ಏರಿಕೆಯಾಗಿದೆ. ಪಶ್ಚಿಮ ಏಷ್ಯಾದ ಉದ್ವಿಗ್ನತೆ ಹಿನ್ನೆಲೆಯಲ್ಲಿ ಜಾಗತಿಕ ಇಂಧನ ವೆಚ್ಚ ಏರಿಕೆಯಾಗಿರುವುದರಿಂದ ಎಲ್‌ಪಿಜಿ ದರ ಏರಿಕೆಯಾಗಿದೆ.
ಬೆಂಗಳೂರು ಬೃಹತ್ ಹೋಟೆಲ್ ಅಸೋಸಿಯೇಷನ್ (ಬಿಬಿಎಚ್‌ಎ) ಅಧ್ಯಕ್ಷ ಪಿಸಿ ರಾವ್ ಅವರು ಮಾತನಾಡಿ, ಈ ಹಿಂದೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಗರಿಷ್ಠ ಚಿಲ್ಲರೆ ಬೆಲೆ (MRP) ಮೇಲೆ ಸುಮಾರು ರೂ.150 ರಿಯಾಯಿತಿ ನೀಡಲಾಗುತ್ತಿತ್ತು. ಮಾರ್ಚ್ 1ರಿಂದ ಆ ರಿಯಾಯಿತಿಯನ್ನು ನಿಲ್ಲಿಸಲಾಗಿದೆ. ಈಗ ಮತ್ತೆ ರೂ.115 ದರ ಹೆಚ್ಚಳವಾಗಿದೆ. ಹೀಗಾಗಿ ಪ್ರತಿ ಸಿಲಿಂಡರ್‌ಗೆ ಒಟ್ಟು ಸುಮಾರು ರೂ.265 ಹೆಚ್ಚುವರಿ ಹೊರೆ ಬೀಳುತ್ತಿದೆ. ಇದೀಗ ಹೋಟೆಲ್‌ಗಳು ಆಹಾರ ತಯಾರಿಕೆಗೆ ಬಳಸುವ ಹಲವು ಮೂಲ ಪದಾರ್ಥಗಳ ಬೆಲೆಯೂ ಏರಿಕೆಯಾಗುತ್ತಿದೆ. ಅಡುಗೆ ಎಣ್ಣೆ ದರ ಪ್ರತಿ ಕಿಲೋಗ್ರಾಂಗೆ ಸುಮಾರು ರೂ.15ರಿಂದ ರೂ.20ರವರೆಗೆ ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ.
ಇದರ ಜೊತೆಗೆ ಕಾಫಿ ಬೀಜಗಳ ಬೆಲೆ ಕೂಡ ಏರಿಕೆಯಾಗಿದ್ದು, ಗ್ರೇವಿ ಮತ್ತು ಸಿಹಿತಿಂಡಿಗಳಲ್ಲಿ ವ್ಯಾಪಕವಾಗಿ ಬಳಸುವ ಗೋಡಂಬಿ ಸೇರಿದಂತೆ ಡ್ರೈಫ್ರೂಟ್ಸ್‌ಗಳ ಬೆಲೆ ಸುಮಾರು 20ರಿಂದ 25 ಶೇಕಡಾವರೆಗೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಇದಲ್ಲದೆ ವಿದ್ಯುತ್ ದರದಲ್ಲೂ ಪ್ರತಿ ಯುನಿಟ್‌ಗೆ ಸುಮಾರು ರೂ.1 ಏರಿಕೆಯಾಗು ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು, ಇದರಿಂದ ಕಾರ್ಯಾಚರಣೆ ವೆಚ್ಚ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಆದರೂ ಕೂಡ ತಕ್ಷಣವೇ ಆಹಾರದ ಬೆಲೆ ಹೆಚ್ಚಿಸುವ ಯೋಚನೆ ಬಹುತೇಕ ಹೋಟೆಲ್‌ಗಳಿಗೆ ಇಲ್ಲ. “ಗ್ರಾಹಕರ ಹಿತದೃಷ್ಟಿಯಿಂದ ಇನ್ನೂ ಕೆಲವು ದಿನ ಪರಿಸ್ಥಿತಿಯನ್ನು ಗಮನಿಸುತ್ತೇವೆ. ಅನಿವಾರ್ಯವಾದರೆ ಮಾತ್ರ ಕೆಲ ಬೆಲೆ ಹೆಚ್ಚಿಸಲಾಗುತ್ತದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮುಂದಿನ ದಿನಗಳಲ್ಲಿ ಸಂಘದ ಸಭೆ ನಡೆಸಿ ಪರಿಸ್ಥಿತಿಯನ್ನು ಚರ್ಚಿಸಲಾಗುತ್ತದೆ. ಆದರೆ, ಮೆನು ದರ ಹೆಚ್ಚಿಸುವ ಬಗ್ಗೆ ಅಂತಿಮ ನಿರ್ಧಾರವನ್ನು ಪ್ರತಿ ಹೋಟೆಲ್ ಮಾಲೀಕರು ತಮ್ಮ ವ್ಯವಹಾರ ಪರಿಸ್ಥಿತಿಯನ್ನು ಗಮನಿಸಿ ಪ್ರತ್ಯೇಕವಾಗಿ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



