News Wrap 06-03-26 | 4.48 ಲಕ್ಷ ಕೋಟಿ ರೂ ಗಾತ್ರದ ಬಜೆಟ್ ಮಂಡನೆ, 1.32 ಲಕ್ಷ ಕೋಟಿ ರೂ ಸಾಲ: ಸಿದ್ದರಾಮಯ್ಯ ದಾಖಲೆಯ 17ನೇ ಬಜೆಟ್; ಇದು ಓಲೈಕೆ ಬಜೆಟ್: BJP ಟೀಕೆ!

1. Karnataka Budget 2026: 4.48 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡನೆ, 1.32 ಲಕ್ಷ ಕೋಟಿ ಸಾಲ
ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು 2026-27ನೇ ಸಾಲಿನ ಬಜೆಟ್ ಮಂಡಿಸಿದರು. ವಿಧಾನಸಭೆಯಲ್ಲಿ 17ನೇ ಬಾರಿಗೆ ರಾಜ್ಯದ ಬಜೆಟ್ ಮಂಡಿಸುವ ಮೂಲಕ ಸಿದ್ದರಾಮಯ್ಯ ದಾಖಲೆ ಬರೆದಿದ್ದಾರೆ. ಈ ಬಾರಿ ಬಜೆಟ್ ನಲ್ಲಿ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಇಂಧನ ಇಲಾಖೆಗೆ ಬಂಪರ್ ಅನುದಾನವನ್ನು ಘೋಷಣೆ ಮಾಡಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ 47,224 ಕೋಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 34,929 ಕೋಟಿ, ಇಂಧನ ಕ್ಷೇತ್ರಕ್ಕೆ 29,947 ಕೋಟಿ, ಲೋಕೋಪಯೋಗಿ ಮತ್ತು ಸಾರಿಗೆ ಇಲಾಖೆಗೆ 23,100 ಕೋಟಿ, ನೀರಾವರಿಗೆ 22,436 ಕೋಟಿ, ನಗರಾಭಿವೃದ್ಧಿ ಮತ್ತು ವಸತಿ ಇಲಾಖೆಗೆ 22,203 ಕೋಟಿ, ಕಂದಾಯ: 19,843 ಕೋಟಿ, ಸಮಾಜ ಕಲ್ಯಾಣ ಇಲಾಖೆಗೆ 18,612 ಕೋಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 17,817 ಕೋಟಿ ಅನುದಾನ ಘೋಷಿಸಿದ್ದಾರೆ.
2. ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ 7,000 ಕೋಟಿ ರೂಪಾಯಿ ಹಂಚಿಕೆ
2026-27ನೇ ಸಾಲಿನ ಬಜೆಟ್ ನಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನ ಕುರಿತು ಸಾಕಷ್ಟು ಅಂಶಗಳಿದ್ದು, ಬೆಂಗಳೂರಿನ ಮೂಲಸೌಕರ್ಯವನ್ನು ಹೆಚ್ಚಳಕ್ಕೆ ಬಜೆಟ್ ನಲ್ಲಿ ಮಹತ್ವದ ಘೋಷಣೆಗಳನ್ನು ಮಾಡಲಾಗಿದೆ. ಆರ್ಥಿಕ ನಗರಿ ಬೆಂಗಳೂರನ್ನು ಗಮನದಲ್ಲಿಟ್ಟುಕೊಂಡು ನಿಧಿ ಹಂಚಿಕೆ ಮಾಡಿದೆ. ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ 7,000 ಕೋಟಿ ರೂಪಾಯಿ ಹಂಚಿಕೆ ಮಾಡುವುದಾಗಿ ಘೋಷಿಸಿದರು. ವೈಟ್ ಟಾಪಿಂಗ್‌ಗೆ 3,500 ಕೋಟಿ ರೂ. ಮತ್ತು ಬೆಂಗಳೂರು ಪ್ರವಾಹ ನಿಯಂತ್ರಣಕ್ಕೆ 5,000 ಕೋಟಿ ರೂ.ಗಳನ್ನು ಸಿದ್ದರಾಮಯ್ಯ ಘೋಷಿಸಿದ್ದಾರೆ. ಹೆಬ್ಬಾಳ ಜಂಕ್ಷನ್‌ನಿಂದ ಮೇಖ್ರಿ ವೃತ್ತದವರೆಗೆ ಸುರಂಗ ರಸ್ತೆ ಮತ್ತು ಎತ್ತರದ ಕಾರಿಡಾರ್ ನಿರ್ಮಾಣಕ್ಕೆ 2,250 ಕೋಟಿ ರೂಪಾಯಿ ಘೋಷಿಸಲಾಗಿದೆ. ಬೆಂಗಳೂರಿಗರಿಗೆ ನೀರನ್ನು ಪೂರೈಸಲು ಜೈಕಾ ನೆರವಿನೊಂದಿಗೆ ಕಾವೇರಿ 6ನೇ ಹಂತದ ಯೋಜನೆಗೆ 6,939 ಕೋಟಿ ರೂಪಾಯಿ ಘೋಷಿಸಲಾಗಿದೆ.
3. 16 ವರ್ಷದ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಗೆ ನಿಷೇಧ
ಹೆಚ್ಚುತ್ತಿರುವ ಮೊಬೈಲ್ ಬಳಕೆ ಮಕ್ಕಳ ಮೇಲೆ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 16 ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಷೇಧ ಮಾಡಿದೆ. ವಿಧಾನಸಭೆಯಲ್ಲಿ ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿದ ಸಿದ್ದರಾಮಯ್ಯ, ಇದು ಮಕ್ಕಳ ಆರೋಗ್ಯ, ವಿದ್ಯಾಭ್ಯಾಸ ಹಾಗೂ ಏಳಿಗೆಯ ದೃಷ್ಟಿಯಿಂದ ಒಳ್ಳೆಯ ತೀರ್ಮಾನವಾಗಿದ್ದು, ಕೇಂದ್ರ ಸರ್ಕಾರದ ಆರ್ಥೀಕ ಸಮೀಕ್ಷಾ ವರದಿಯಲ್ಲೂ ಮಕ್ಕಳಿಗೆ ಮೊಬೈಲ್ ಬಳಕೆ ನಿಷೇಧಿಸುವ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು ಎಂದರು. 2026-27ನೇ ಸಾಲಿನ ಬಜೆಟ್‌ನಲ್ಲಿ ಒಟ್ಟಾರೆ 3,900 ಕೋಟಿ ವೆಚ್ಚದಲ್ಲಿ 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸಲಾಗುತ್ತದೆ ಎಂದರು.
4. ಇದು ಓಲೈಕೆ ಬಜೆಟ್ BJP ಟೀಕೆ
2026-27ನೇ ಸಾಲಿನ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನತೆಗೆ ಖಾಲಿ ಪಾತ್ರೆ ಕೊಟ್ಟಿದ್ದಾರೆ ಎಂದು ಪ್ರತಿಪಕ್ಷ ಬಿಜೆಪಿ ಕಿಡಿಕಾರಿದೆ. ವಿಧಾನಸಭೆಯಲ್ಲಿ ಸಿದ್ದರಾಮಯ್ಯ 17ನೇ ಬಾರಿಗೆ ದಾಖಲೆಯ ಬಜೆಟ್ ಮಂಡಿಸಿದರೇ ಅತ್ತ ಪ್ರತಿಪಕ್ಷ ಬಿಜೆಪಿ ಈ ಬಜೆಟ್ ವಿರೋಧಿಸಿ, ಕೈಯಲ್ಲಿ ಖಾಲಿ ಚೊಂಬು ಹಿಡಿದು ಪ್ರತಿಭಟನೆ ನಡೆಸಿತು. ಕಳೆದ 3 ವರ್ಷಗಳಲ್ಲಿ, ರಾಜ್ಯ ಸರ್ಕಾರವು 4.39 ಲಕ್ಷ ಕೋಟಿ ರೂ. ಸಾಲ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಆರೋಪಿಸಿದರು. ಮುಂದೆ ಅಧಿಕಾರಕ್ಕೆ ಬರುವ ಸರ್ಕಾರಗಳು ಬಡ್ಡಿಯನ್ನು ಪಾವತಿಸುವ ಸ್ಥಿತಿಯಲ್ಲಿರುವುದಿಲ್ಲ, ಅಸಲು ಮೊತ್ತವನ್ನು ಬಿಟ್ಟು ಹಣಕಾಸಿನ ಕೊರತೆಯು 97,000 ಕೋಟಿ ರೂ.ಗಳನ್ನು ತಲುಪಿದೆ ಎಂದರು. ಇದು 'ಬ್ರದರ್ಸ್ ಬಜೆಟ್.. ಓಲೈಕೆ ರಾಜಕಾರಣವೇ ಕಾಂಗ್ರೆಸ್ ಪಕ್ಷದ ಪರಮ ಗುರಿ'ಯಾಗಿದೆ. ಅತಿಥಿ ಶಿಕ್ಷಕರಿಗೆ ಕಳೆದ 5 ತಿಂಗಳಿಂದ ಗೌರವ ಧನ ನೀಡದ ಈ ಭ್ರಷ್ಟ ಸರ್ಕಾರ, ಅಲ್ಪಸಂಖ್ಯಾತರ ಶಾಲೆಗಳನ್ನು KPS ಮಾದರಿಯಲ್ಲಿ ಉನ್ನತೀಕರಣಕ್ಕೆ 1000 ಕೋಟಿ ಕೊಟ್ಟಿದೆ ಎಂದು ಬಿಜೆಪಿ ಕಿಡಿಕಾರಿದೆ. ಸಿದ್ದರಾಮಯ್ಯ ಅವರು ದಾಖಲೆ ದಿನಗಳವರೆಗೆ ಮುಖ್ಯಮಂತ್ರಿಯಾಗಿ ತಾವು ಪಡೆದ ಅನುಭವವನ್ನು ಸಂಪೂರ್ಣ ನೀರಿನಲ್ಲಿ ಹೋಮ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ಬೆಲೆ ಕುಸಿತದಿಂದ ಕಂಗಾಲಾಗಿರುವ ನಮ್ಮ ಅನ್ನದಾತ ರೈತರಿಗೆ ಮಾರುಕಟ್ಟೆ ಮಧ್ಯಪ್ರವೇಶಕ್ಕೆ ಕೇವಲ 100 ಕೋಟಿ ರೂ ನೀಡಿರುವುದು ರೈತರ ಮೂಗಿಗೆ ತುಪ್ಪ ಸವರುವ ಕೆಲಸವಾಗಿದೆ ಎಂದು ವಿಜಯೇಂದ್ರ ಟೀಕಿಸಿದರು.
5. 37 ಸಾವಿರ ಕೋಟಿ ಬಿಲ್ ಬಿಡುಗಡೆಗೆ ಆಗ್ರಹಿಸಿ ಗುತ್ತಿಗೆದಾರರ ಪ್ರತಿಭಟನೆ
ಬಾಕಿ ಇರುವ 37 ಸಾವಿರ ಕೋಟಿ ರೂಪಾಯಿ ಬಿಲ್ ಬಿಡುಗಡೆಗೆ ಆಗ್ರಹಿಸಿ ಗುತ್ತಿಗೆದಾರರು ರಾಜ್ಯಾದ್ಯಂತ ಕಾಮಗಾರಿ ಸ್ಥಗಿತಗೊಳಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ ನಡೆಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಮಂಡಿಸಿದ 17ನೇ ಬಜೆಟ್ ನಲ್ಲೂ ಗುತ್ತಿಗೆದಾರರಿಗೆ ಯಾವುದೇ ಭರವಸೆ ಸಿಗಲಿಲ್ಲ. ಹಾಗಾಗಿ ಹಣ ಬಿಡುಗಡೆಗಾಗಿ ಗುತ್ತಿಗೆದಾರರು ಇದೀಗ ಬೀದಿಗೆ ಇಳಿದಿದ್ದಾರೆ. ಗುತ್ತಿಗೆದಾರರ ಪ್ರತಿಭಟನಾ ಸ್ಥಳಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿ ಗುತ್ತಿಗೆದಾರರನ್ನು ಮನವೊಲಿಸಲು ಪ್ರಯತ್ನಿಸಿದರು. ನಂತರ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಬಿಲ್ ಗೆ ನಮ್ಮ ಎದೆ ಮೇಲೆ ಕೂತಿದ್ದೀರಾ. ಮೇಲ್ಮನೆಯಲ್ಲಿ ಗುತ್ತಿಗೆದಾರರಿಗೂ ಜಾಗ ಕೊಡಿಸಬೇಕಿದೆ. ಆಗ ಸಮಸ್ಯೆ ಬಗೆಹರಿಯಬಹುದೇನೊ ಎಂದು ಡಿಕೆ ಶಿವಕುಮಾರ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


