ರಾಜ್ಯ

ಬಿಜೆಪಿ ಸರ್ಕಾರದ ಬಿಲ್ ಬಾಕಿಗೆ ನಮ್ಮ ಎದೆಮೇಲೆ ಕೂತಿದ್ದೀರಿ: ಗುತ್ತಿಗೆದಾರರ ಪ್ರತಿಭಟನೆಗೆ ಡಿಕೆಶಿ ಗರಂ!

ಬಾಕಿ ಬಿಲ್ ಬಿಡುಗಡೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ರಾಜ್ಯ ಗುತ್ತಿಗೆದಾರರ ಸಂಘದವರನ್ನು ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್, ಅಧಿವೇಶನದ ವೇಳೆ ಮುಖ್ಯಮಂತ್ರಿಗಳ ಜೊತೆ ಗುತ್ತಿಗೆದಾರರ ಸಭೆ ಮಾಡಿಸುತ್ತೇವೆ ಎಂದು ಹೇಳಿದರು.

ಬಿಜೆಪಿ ಸರ್ಕಾರದ ಬಿಲ್ ಬಾಕಿಗೆ ನಮ್ಮ ಎದೆಮೇಲೆ ಕೂತಿದ್ದೀರಿ: ಗುತ್ತಿಗೆದಾರರ ಪ್ರತಿಭಟನೆಗೆ ಡಿಕೆಶಿ ಗರಂ!
ಡಿಸಿಎಂ ಡಿಕೆ ಶಿವಕುಮಾರ್ ಮತ್ತಿತರರು
Published On :

ಬೆಂಗಳೂರು: ಬಿಜೆಪಿ ಸರ್ಕಾರದ ಬಿಲ್ ಗೆ ನಮ್ಮ ಎದೆಮೇಲೆ ಕೂತಿದ್ದೀರಿ. ಮೇಲ್ಮನೆಯಲ್ಲಿ ಗುತ್ತಿಗೆದಾರರಿಗೂ ಜಾಗ ಕೊಡಿಸಬೇಕಿದೆ. ಆಗ ಸಮಸ್ಯೆ ಬಗೆಹರಿಯಬಹುದೇನೊ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶುಕ್ರವಾರ ಹೇಳಿದರು.

ಹೌದು. ಬಾಕಿ ಬಿಲ್ ಬಿಡುಗಡೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ರಾಜ್ಯ ಗುತ್ತಿಗೆದಾರರ ಸಂಘದವರನ್ನು ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್, ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರು ಹಣ ಇರಲಿ, ಬಿಡಲಿ, ಕಾಮಗಾರಿ ಕೊಟ್ಟಿದ್ದೇ ಕೊಟ್ಟದ್ದು. ನೀವು ಕೆಲಸ ತೆಗೆದುಕೊಂಡು ನಮ್ಮ ಎದೆ ಮೇಲೆ ಕೂತಿದ್ದೀರಿ. ಇದಕ್ಕೆ ಒಂದು ರೂಪ ನೀಡಬೇಕಿದೆ. ಇದಕ್ಕೆ ಸುಮಾರು 50 ಸಾವಿರ ಕೋಟಿಯಷ್ಟು ಬಾಂಡ್ ಅಥವಾ ಇತರೆ ಮಾರ್ಗ ಹುಡುಕಬೇಕು. ಆಗ ಮಾತ್ರ ಈ ಸಮಸ್ಯೆ ಬಗೆಹರಿಯಲಿದೆ ಎಂದರು.

ಗುತ್ತಿಗೆದಾರರು ತಮ್ಮ ಬದುಕಿಗೆ ಮಾತ್ರವಲ್ಲ ರಾಜ್ಯದ ಬದುಕಿಗೆ ಸಹಾಯ ಮಾಡುತ್ತಿದ್ದೀರಿ. ನಮ್ಮ ಸರ್ಕಾರ ತಂದಿದ್ದೀರಿ ಎಂಬ ಅರಿವು ನಮಗಿದೆ. ನಿಮಗೆ ಹಣ ಪಾವತಿ ಮಾಡಬಾರದು ಎಂಬುದು ನಮ್ಮ ಉದ್ದೇಶವಲ್ಲ. ನಿಮ್ಮ ಅಧ್ಯಕ್ಷರಾದ ಮಂಜುನಾಥ್, ಮೂರು ತಿಂಗಳಿಗೊಮ್ಮೆ ಮಾಧ್ಯಮಗಳಿಗೆ ಒಂದೊಂದು ಹೇಳಿಕೆ ನೀಡುತ್ತಲೇ ಇರುತ್ತಾರೆ. ಅವರನ್ನು ನೋಡಿದರೆ ನೀವು ಅವರಿಗೆ ವಿಧಾನಸಭೆ ಅಥವಾ ವಿಧಾನ ಪರಿಷತ್ತಿನಲ್ಲಿ ಒಂದು ಜಾಗ ಕೊಡಿಸಬೇಕು. ವಿಧಾನ ಪರಿಷತ್ತಿನಲ್ಲಿ ಶಿಕ್ಷಕರ ಕ್ಷೇತ್ರ, ಪದವೀಧರ ಕ್ಷೇತ್ರ, ಸಿನಿಮಾ, ಕಲೆ ಸೇರಿದಂತೆ ಇತರೆ ವಲಯದವರಿಗೆ ಒಂದು ಪ್ರಾತಿನಿಧ್ಯ ನೀಡಿದಂತೆ ಗುತ್ತಿಗೆದಾರರಿಗೆ ಒಂದು ಜಾಗ ಕೊಡಿಸಬೇಕಿದೆ. ಆಗ ನಿಮ್ಮ ಸಮಸ್ಯೆ ಬಗೆಹರಿಯಬಹುದು. ಇದಕ್ಕೆ ಒಂದು ದಾರಿ ಹುಡುಕಬೇಕಿದೆ ಎಂದು ಗರಂ ಆದರು.

ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನರಿಗೆ ನೆರವು ನೀಡಲು ಸರ್ಕಾರ ಗ್ಯಾರಂಟಿ ಯೋಜನೆ ನೀಡಿದ್ದು, ಇದಕ್ಕಾಗಿ ಸುಮಾರು 52 ಸಾವಿರ ಕೋಟಿ ವಾರ್ಷಿಕವಾಗಿ ವೆಚ್ಟ ಮಾಡಲಾಗುತ್ತಿದೆ. ಆದರೂ ನಮ್ಮ ರಾಜ್ಯದಲ್ಲಿ ಉತ್ತಮ ಬಜೆಟ್ ನೀಡುತ್ತಿದ್ದೇವೆ. ಇವತ್ತು ಕೂಡ ಮುಖ್ಯಮಂತ್ರಿಗಳು ಸರಿದೂಗಿಸಿ ಬಜೆಟ್ ಮಂಡಿಸಿದ್ದಾರೆ. ಬಿಜೆಪಿಯವರು ನಿನ್ನೆಯೇ ಖಾಲಿ ಚೊಂಬು ತೆಗೆದುಕೊಂಡಿದ್ದಾರೆ. ಕೇಂದ್ರ ಬಜೆಟ್ ನಲ್ಲಿ ನಿರ್ಮಲ ಸೀತರಾಮನ್ ಅವರು ಏನು ಕೊಟ್ಟರು? ಖಾಲಿ ಬಿಂದಿಗೆ ಕೊಟ್ಟರು. ಆಗ ಇವರು ಏನೂ ಮಾತನಾಡಲಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ ನಲ್ಲಿ 5300 ಕೋಟಿ ಘೋಷಣೆ ಮಾಡಿ ಈಗ ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದರು.

ಬೆಂಗಳೂರು ಅಭಿವೃದ್ಧಿಗೆ ಅವರು ಹಣ ಕೊಟ್ಟಿಲ್ಲ. ಅವರು ಮಾಡಲಿ ಬಿಡಲಿ, ನಮ್ಮ ಕರ್ತವ್ಯ ನಾವು ಮಾಡಬೇಕು. ನೀವು ನಮ್ಮನ್ನು ಬಿಡಂಗಿಲ್ಲ, ನಾವು ನಿಮ್ಮನ್ನು ಬಿಡಂಗಿಲ್ಲ. ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದನ್ನು ಬಿಡಿ. ನೀವು ಹೇಳಿಕೆ ನೀಡಿದರೆ ಅದು ಒಂದು ದಿನದ ಸುದ್ದಿಯಾಗಬಹುದು, ಬೇರೆ ಯಾವುದೇ ಪ್ರಯೋಜನವಿಲ್ಲ. ನೀವು ನಮ್ಮ ಬಳಿ ಬಂದು ಚರ್ಚೆ ಮಾಡಿ, ಯಾವ ರೀತಿ ಹಣ ಹೊಂದಿಸಿ ಸಮಸ್ಯೆ ಬಗೆಹರಿಸಬೇಕು ನೋಡೋಣ. ನಿಮ್ಮ ಜತೆ ನಾವಿದ್ದೇವೆ ಎಂದು ಹೇಳಲು ನಾನು, ಸತೀಶ್ ಜಾರಕಿಹೊಳಿ ಹಾಗೂ ಬೋಸರಾಜು ಅವರು ಬಂದಿದ್ದೇವೆ” ಎಂದು ತಿಳಿಸಿದರು.

ಸಚಿವರಾದ ಸತೀಶ್ ಜಾರಕಿಹೊಳಿ ಜೊತೆ ಸೇರಿ ಅಧಿವೇಶನದ ವೇಳೆ ಮುಖ್ಯಮಂತ್ರಿಗಳ ಜೊತೆ ಗುತ್ತಿಗೆದಾರರ ಸಭೆ ಮಾಡಿಸುತ್ತೇವೆ. ಆಗ ನಾವೆಲ್ಲ ಸೇರಿ ಪರಿಹಾರ ಕಂಡುಕೊಳ್ಳಬೇಕು ಎಂದು ಡಿಕೆ ಶಿವಕುಮಾರ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.