ರಾಜ್ಯ

CM ಡಿ.ಕೆ ಶಿವಕುಮಾರ್ ನಿವಾಸದಿಂದಲೇ Pulse Polio ಲಸಿಕಾ ಅಭಿಯಾನಕ್ಕೆ ಚಾಲನೆ; ರಾಜ್ಯದಲ್ಲಿ 60.36 ಲಕ್ಷ ಮಕ್ಕಳಿಗೆ ಲಸಿಕೆ

ಆರೋಗ್ಯವಂತ ಕುಟುಂಬದಿಂದ ಆರೋಗ್ಯವಂತ ರಾಜ್ಯ ಮತ್ತು ದೇಶ ನಿರ್ಮಾಣ ಸಾಧ್ಯ. ಆದ್ದರಿಂದ ರಾಜ್ಯದ ಪ್ರತಿಯೊಬ್ಬ ಪೋಷಕರೂ ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿಸಬೇಕು.

CM ಡಿ.ಕೆ ಶಿವಕುಮಾರ್ ನಿವಾಸದಿಂದಲೇ Pulse Polio ಲಸಿಕಾ ಅಭಿಯಾನಕ್ಕೆ ಚಾಲನೆ; ರಾಜ್ಯದಲ್ಲಿ 60.36 ಲಕ್ಷ ಮಕ್ಕಳಿಗೆ ಲಸಿಕೆ
ಪಲ್ಸ್ ಪೋಲಿಯೊ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಡಿಕೆ.ಶಿವಕುಮಾರ್
Published On :

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರ ನಿವಾಸದಿಂದ ಭಾನುವಾರ ರಾಜ್ಯವ್ಯಾಪಿ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲ ಮಕ್ಕಳಿಗೂ ಕಡ್ಡಾಯವಾಗಿ ಪೋಲಿಯೊ ಲಸಿಕೆ ಹಾಕಿಸಬೇಕು ಎಂದು ಮುಖ್ಯಮಂತ್ರಿ ಪೋಷಕರಿಗೆ ಮನವಿ ಮಾಡಿದರು.

ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, "ಆರೋಗ್ಯವಂತ ಕುಟುಂಬದಿಂದ ಆರೋಗ್ಯವಂತ ರಾಜ್ಯ ಮತ್ತು ದೇಶ ನಿರ್ಮಾಣ ಸಾಧ್ಯ. ಆದ್ದರಿಂದ ರಾಜ್ಯದ ಪ್ರತಿಯೊಬ್ಬ ಪೋಷಕರೂ ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿಸಬೇಕು," ಎಂದು ಹೇಳಿದರು.

"ಆರೋಗ್ಯ ಸಚಿವ ಯು.ಟಿ. ಖಾದರ್ ತುಂಬಾ ಚಾಣಾಕ್ಷರು. ನನ್ನ ಮೊಮ್ಮಗಳು ಕೇವಲ ಒಂದು ತಿಂಗಳ ಮಗು. ಆದ್ದರಿಂದ ಈ ಬಾರಿ ಅಭಿಯಾನವನ್ನು ನನ್ನ ಮನೆಯಲ್ಲೇ ಆರಂಭಿಸುವಂತೆ ನಿರ್ಧರಿಸಿದ್ದಾರೆ," ಎಂದು ಮುಖ್ಯಮಂತ್ರಿ ಹಾಸ್ಯಮಿಶ್ರಿತವಾಗಿ ಹೇಳಿದರು.

ಆರೋಗ್ಯಕರ ಕರ್ನಾಟಕ ನಿರ್ಮಾಣಕ್ಕಾಗಿ ಸರ್ಕಾರ ಹಲವು ಹಂತಗಳಲ್ಲಿ ಆರೋಗ್ಯ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದ್ದು, ಉತ್ತಮ ಆರೋಗ್ಯ ಸೇವೆಗಳಿಗಾಗಿ ದೇಶದ ವಿವಿಧ ಭಾಗಗಳಿಂದ ಜನರು ಕರ್ನಾಟಕಕ್ಕೆ ಬರುತ್ತಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಈ ವರ್ಷ ರಾಜ್ಯದ 60,84,911 ಮಕ್ಕಳಿಗೆ ಪೋಲಿಯೊ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ ಅವರು, 1972ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪೋಲಿಯೊ ಲಸಿಕಾ ಕಾರ್ಯಕ್ರಮ ಆರಂಭಿಸಿದ್ದರು. ಬಳಿಕ ರಾಜೀವ್ ಗಾಂಧಿ ಅವರ ಅವಧಿಯಲ್ಲಿ ಅದನ್ನು ಜನಾಂದೋಲನವಾಗಿ ರೂಪಿಸಲಾಯಿತು. ಡಾ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಭಾರತ ಪೋಲಿಯೊ ಮುಕ್ತ ರಾಷ್ಟ್ರವಾಗಿ ಘೋಷಿಸಲ್ಪಟ್ಟಿತು ಎಂದು ಸ್ಮರಿಸಿದರು.

ಒಂದೇ ದಿನ 60.36 ಲಕ್ಷ ಮಕ್ಕಳಿಗೆ ಪೋಲಿಯೊ ಹನಿ

ಭಾನುವಾರ ನಡೆದ ಅಭಿಯಾನದಲ್ಲಿ ರಾಜ್ಯದಾದ್ಯಂತ ಐದು ವರ್ಷದೊಳಗಿನ 60.36 ಲಕ್ಷ ಮಕ್ಕಳಿಗೆ ಪೋಲಿಯೊ ಹನಿ ಹಾಕಲಾಯಿತು. ಇದು ಆರೋಗ್ಯ ಇಲಾಖೆಯ 64.84 ಲಕ್ಷ ಮಕ್ಕಳ ಗುರಿಯ ಶೇ.93ರಷ್ಟು ಸಾಧನೆಯಾಗಿದೆ.

ಭಾನುವಾರ ಲಸಿಕೆ ಪಡೆಯದ ಮಕ್ಕಳಿಗೆ ಜುಲೈ 1ರವರೆಗೆ ಮನೆ-ಮನೆಗೆ ತೆರಳಿ ಪೋಲಿಯೊ ಲಸಿಕೆ ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಆರೋಗ್ಯ ಕೇಂದ್ರಗಳ ಜೊತೆಗೆ ರೈಲು ನಿಲ್ದಾಣ, ಬಸ್ ನಿಲ್ದಾಣ, ಮೆಟ್ರೋ ನಿಲ್ದಾಣ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದ್ದು, ಅಭಿಯಾನಕ್ಕಾಗಿ 1.14 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಬೆಂಗಳೂರು ಮುಂಚೂಣಿ, ಕೊಡಗು ಕೊನೆಯ ಸ್ಥಾನ

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ 11.06 ಲಕ್ಷ ಮಕ್ಕಳಿಗೆ ಪೋಲಿಯೊ ಹನಿ ಹಾಕಲಾಗಿದ್ದು, ಇದು ನಿಗದಿತ ಗುರಿಯ ಶೇ.96.4 ಸಾಧನೆಯಾಗಿದೆ.

ಬೆಂಗಳೂರು ನಗರದಲ್ಲಿ:

  • ಕೇಂದ್ರ ವಲಯ – ಶೇ.95.45

  • ಪೂರ್ವ ವಲಯ – ಶೇ.99.48

  • ಪಶ್ಚಿಮ ವಲಯ – ಶೇ.94.34

  • ಉತ್ತರ ವಲಯ – ಶೇ.98.22

  • ದಕ್ಷಿಣ ವಲಯ – ಶೇ.95.13

ಜಿಲ್ಲಾವಾರು ಸಾಧನೆಯಲ್ಲಿ ಬೆಂಗಳೂರು ನಗರ ಜಿಲ್ಲೆ ಶೇ.100ರ ಸಮೀಪ ಗುರಿ ಸಾಧಿಸಿ ಮೊದಲ ಸ್ಥಾನ ಪಡೆದಿದೆ. ಶಿವಮೊಗ್ಗ, ರಾಯಚೂರು, ಕೋಲಾರ, ಕಲಬುರಗಿ, ಧಾರವಾಡ, ಚಿಕ್ಕಬಳ್ಳಾಪುರ, ಬಳ್ಳಾರಿ ಹಾಗೂ ಹಾವೇರಿ ಜಿಲ್ಲೆಗಳು ಶೇ.95ಕ್ಕಿಂತ ಹೆಚ್ಚಿನ ಗುರಿ ಸಾಧಿಸಿವೆ.

ಇನ್ನೊಂದೆಡೆ ಕೊಡಗು ಜಿಲ್ಲೆ ಕೇವಲ ಶೇ.82ರಷ್ಟು ಸಾಧನೆಯೊಂದಿಗೆ ಕೊನೆಯ ಸ್ಥಾನದಲ್ಲಿದ್ದರೆ, ಗದಗ ಜಿಲ್ಲೆ ಶೇ.83ರೊಂದಿಗೆ ಎರಡನೇ ಕಡಿಮೆ ಸಾಧನೆ ದಾಖಲಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.