ಮಾದಕ ವ್ಯಸನದ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು: ಉಪ ರಾಷ್ಟ್ರಪತಿ ರಾಧಾಕೃಷ್ಣನ್-Video
ಈ ಅಭಿಯಾನವು ಪ್ರತಿಯೊಬ್ಬ ವ್ಯಕ್ತಿಯಿಂದ ಆರಂಭವಾಗಿ, ಶಿಕ್ಷಣ ಸಂಸ್ಥೆಗಳು, ನಗರಗಳು ಹಾಗೂ ದೇಶದಾದ್ಯಂತ ವ್ಯಾಪಿಸಬೇಕು ಎಂದು ಅವರು ಹೇಳಿದರು.

ಬೆಂಗಳೂರು: ಮಾದಕ ವ್ಯಸನದ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕೆಂದು ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಕರೆ ನೀಡಿದರು. ಶಿಕ್ಷಣ ಸಂಸ್ಥೆಗಳು, ಕುಟುಂಬಗಳು, ಆರೋಗ್ಯ ವೃತ್ತಿಪರರು ಹಾಗೂ ಕಾನೂನು ಜಾರಿ ಸಂಸ್ಥೆಗಳು ಒಂದಾಗಿ ಕೆಲಸ ಮಾಡಿ ಮಾದಕ ವಸ್ತು ಮುಕ್ತ ಭಾರತ ನಿರ್ಮಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಅಭಿಯಾನವು ಪ್ರತಿಯೊಬ್ಬ ವ್ಯಕ್ತಿಯಿಂದ ಆರಂಭವಾಗಿ, ಶಿಕ್ಷಣ ಸಂಸ್ಥೆಗಳು, ನಗರಗಳು ಹಾಗೂ ದೇಶದಾದ್ಯಂತ ವ್ಯಾಪಿಸಬೇಕು ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (RGUHS) 31ನೇ ಸಂಸ್ಥಾಪನಾ ದಿನಾಚರಣೆ ಹಾಗೂ 'ನಶಾ ಮುಕ್ತ ಭಾರತ' ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಮಾದಕ ವ್ಯಸನವು ವ್ಯಕ್ತಿಯ ಆರೋಗ್ಯಕ್ಕೆ ಮಾತ್ರವಲ್ಲದೆ ಶಿಕ್ಷಣ, ಉತ್ಪಾದಕತೆ, ಕುಟುಂಬದ ನೆಮ್ಮದಿ ಮತ್ತು ರಾಷ್ಟ್ರದ ಅಭಿವೃದ್ಧಿಗೂ ದೊಡ್ಡ ಅಪಾಯವಾಗಿದೆ. ಈ ಹೋರಾಟದಲ್ಲಿ ಯುವಜನತೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಸಾರಿದರು.
"ನಶೆ ಮುಕ್ತ ಭಾರತದ ಪರಿಕಲ್ಪನೆ ಎಂದರೆ ಕೇವಲ ಮಾದಕ ವಸ್ತುಗಳ ಬಳಕೆಯಿಂದ ಮುಕ್ತಿಯಾಗುವುದು ಮಾತ್ರವಲ್ಲ. ಆರೋಗ್ಯಕರ ಆಯ್ಕೆಗಳು, ಜಾಗೃತ ನಿರ್ಧಾರಗಳು, ಬೆಂಬಲ ನೀಡುವ ಕುಟುಂಬಗಳು ಮತ್ತು ಸದೃಢ ಸಮುದಾಯಗಳ ಉಪಸ್ಥಿತಿಯೇ ಅದರ ನಿಜವಾದ ಅರ್ಥ ಎಂದು ಹೇಳಿದರು.
ಆರೋಗ್ಯ ಶಿಕ್ಷಣವನ್ನು ಬಲಪಡಿಸುವಲ್ಲಿ ಹಾಗೂ ಆರೋಗ್ಯ ವೃತ್ತಿಪರರನ್ನು ರೂಪಿಸುವಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮಹತ್ವದ ಪಾತ್ರ ವಹಿಸಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಚಿಕಿತ್ಸೆ, ಸಾರ್ವಜನಿಕ ಜಾಗೃತಿ, ನೀತಿ ರೂಪಣೆ ಹಾಗೂ ವೈಜ್ಞಾನಿಕ ಆಧಾರಿತ ಪರಿಹಾರಗಳ ಮೂಲಕ ಮಾದಕ ವ್ಯಸನ ನಿರ್ಮೂಲನೆಗೆ ಮುಂಚೂಣಿಯಲ್ಲಿ ನಿಲ್ಲಲಿದ್ದಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಸಾಮಾಜಿಕ ಕಳಂಕದ ಕಾರಣದಿಂದ ಅನೇಕ ಪೋಷಕರು ತಮ್ಮ ಕುಟುಂಬದಲ್ಲಿ ಮಾದಕ ವ್ಯಸನವಿದೆ ಎಂಬುದನ್ನು ಒಪ್ಪಿಕೊಳ್ಳಲು ಹಿಂಜರಿಯುತ್ತಾರೆ. ಈ ಪಿಡುಗನ್ನು ನಿರ್ಮೂಲನೆ ಮಾಡಲು ಆತ್ಮಸ್ಥೈರ್ಯ ಅತ್ಯಗತ್ಯ ಎಂದು ತಿಳಿಸಿದ ಅವರು, ವಿದ್ಯಾರ್ಥಿಗಳು ತಾವು ಕೈಗೊಂಡಿರುವ ಮಾದಕ ವ್ಯಸನ ವಿರೋಧಿ ಪ್ರತಿಜ್ಞೆಯನ್ನು ತಮ್ಮ ಸ್ನೇಹಿತರು ಮತ್ತು ಸಮುದಾಯದವರಿಗೂ ತಲುಪಿಸಬೇಕು ಎಂದು ಕರೆ ನೀಡಿದರು.
ಜಾಗೃತಿ ಪ್ರತಿಯೊಬ್ಬ ವ್ಯಕ್ತಿಯಿಂದ ಆರಂಭವಾಗಿ, ತರಗತಿ ಕೊಠಡಿಗಳು, ಕಾಲೇಜು ಕ್ಯಾಂಪಸ್‌ಗಳು, ನಗರಗಳು ಹಾಗೂ ಜಿಲ್ಲೆಗಳಿಗೆ ವಿಸ್ತರಿಸಿ, ಅಂತಿಮವಾಗಿ ಮಾದಕ ವಸ್ತು ಮುಕ್ತ ಕರ್ನಾಟಕ ಮತ್ತು ಮಾದಕ ವಸ್ತು ಮುಕ್ತ ಭಾರತ ನಿರ್ಮಾಣವಾಗಬೇಕು ಎಂದು ಹೇಳಿದರು.
ತಂತ್ರಜ್ಞಾನ, ಸಮಾಲೋಚನೆ, ಸಹಪಾಠಿಗಳ ಬೆಂಬಲ ಹಾಗೂ ಸಾರ್ವಜನಿಕ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಸಮನ್ವಯಗೊಳಿಸುವ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಸಂಶೋಧನೆಯೇ ನೀತಿ ರೂಪಣೆಗೆ ಮಾರ್ಗದರ್ಶಿಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ತಮ್ಮ ಕುಲಪತಿತ್ವದ ಅಡಿಯಲ್ಲಿ ಕೇಂದ್ರ ವಿಶ್ವವಿದ್ಯಾಲಯಗಳಲ್ಲಿ ಜಾರಿಗೊಂಡಿರುವ ಮಾದಕ ವ್ಯಸನ ವಿರೋಧಿ ಕಾರ್ಯಕ್ರಮಗಳನ್ನು ಉಲ್ಲೇಖಿಸಿದ ಅವರು, ದೆಹಲಿ ವಿಶ್ವವಿದ್ಯಾಲಯವನ್ನು ಮಾದಕ ವಸ್ತು ಮುಕ್ತ ಕ್ಯಾಂಪಸ್ ಆಗಿ ರೂಪಿಸಲಾಗಿದೆ ಎಂದು ಹೇಳಿದರು.
ಎಲ್ಲಾ ಕುಲಪತಿಗಳು ವಿದ್ಯಾರ್ಥಿಗಳಿಂದ ಮಾದಕ ವಸ್ತುಗಳಿಂದ ದೂರವಿರುವ ಪ್ರತಿಜ್ಞೆ ಮಾಡಿಸಿ, ತಮ್ಮ ಸ್ನೇಹಿತರು, ಕುಟುಂಬ ಮತ್ತು ಸಮುದಾಯವನ್ನು ವ್ಯಸನದಿಂದ ರಕ್ಷಿಸಲು ಪ್ರೇರೇಪಿಸಬೇಕು ಎಂದು ಅವರು ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾದಕ ವಸ್ತು ಮುಕ್ತ ಕರ್ನಾಟಕ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಮಾದಕ ವಸ್ತುಗಳ ಕಳ್ಳಸಾಗಣೆಯಲ್ಲಿ ತೊಡಗಿರುವವರ ವಿರುದ್ಧ ಹಾಗೂ ಪಾನ್ ಮಸಾಲಾ, ಗುಟ್ಕಾದಂತಹ ಉತ್ಪನ್ನಗಳಲ್ಲಿ ಮಾದಕ ಪದಾರ್ಥಗಳನ್ನು ಬೆರೆಸುವ ತಯಾರಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ , ಮಾದಕ ವಸ್ತು ಮುಕ್ತ ಭಾರತವು ರಾಷ್ಟ್ರೀಯ ಅಗತ್ಯವಾಗಿದೆ ಎಂದು ಹೇಳಿದರು. ಯುವಜನತೆ ಮಾದಕ ವ್ಯಸನದಿಂದ ದೂರವಿದ್ದು, ಆರೋಗ್ಯಕರ, ಜಾಗೃತ ಹಾಗೂ ಸದಾಚಾರದ ಸಮಾಜ ನಿರ್ಮಾಣದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



