ರೈತರ ಒಕ್ಕಲೆಬ್ಬಿಸಿ Township ಮಾಡುವುದರಲ್ಲಿ ಅರ್ಥ ಇಲ್ಲ, ಪರಿಹಾರ ಕುರಿತು ಮರುಪರಿಶೀಲನೆ: - ಡಿಸಿಎಂ ಪರಮೇಶ್ವರ್
ರೈತರನ್ನು ಒಕ್ಕಲೆಬ್ಬಿಸಿ ಟೌನ್‌ಶಿಪ್ ನಿರ್ಮಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಯಾವುದೇ ಗೊಂದಲ ಸೃಷ್ಟಿಯಾಗದಂತೆ ರೈತರೊಂದಿಗೆ ಚರ್ಚಿಸಿ, ಅವರ ಒಪ್ಪಿಗೆ ಪಡೆದ ನಂತರವೇ ಯೋಜನೆಯನ್ನು ಮುಂದುವರಿಸುತ್ತೇವೆ.

ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆಗೆ ರೈತರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೇ, ರಾಜ್ಯ ಸರ್ಕಾರ ಪರಿಹಾರ ಕುರಿತು ಮರುಚಿಂತನೆ ನಡೆಸುವ ಸೂಚನೆ ನೀಡಿದೆ.
ರೈತರ ಒಪ್ಪಿಗೆ ಇಲ್ಲದೆ ಯಾವುದೇ ಭೂಸ್ವಾಧೀನ ಅಥವಾ ಟೌನ್‌ಶಿಪ್ ನಿರ್ಮಾಣ ಯೋಜನೆಯನ್ನು ಜಾರಿಗೊಳಿಸುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದು, ಅಗತ್ಯವಿದ್ದರೆ ಭೂಸ್ವಾಧೀನ ಪರಿಹಾರ ಮೊತ್ತವನ್ನು ಮರುಪರಿಶೀಲಿಸಿ, ಹೆಚ್ಚಿಸಲು ಸರ್ಕಾರ ಸಿದ್ಧವಿದೆ ಎಂದು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ರೈತರನ್ನು ಒಕ್ಕಲೆಬ್ಬಿಸಿ ಟೌನ್‌ಶಿಪ್ ನಿರ್ಮಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಯಾವುದೇ ಗೊಂದಲ ಸೃಷ್ಟಿಯಾಗದಂತೆ ರೈತರೊಂದಿಗೆ ಚರ್ಚಿಸಿ, ಅವರ ಒಪ್ಪಿಗೆ ಪಡೆದ ನಂತರವೇ ಯೋಜನೆಯನ್ನು ಮುಂದುವರಿಸುತ್ತೇವೆ. ಯಾವುದೇ ಗೊಂದಲ ಅಥವಾ ಸಂಘರ್ಷ ಉಂಟಾಗದ ರೀತಿಯಲ್ಲಿ ಟೌನ್‌ಶಿಪ್ ಅಭಿವೃದ್ಧಿಪಡಿಸುವುದು ಸರ್ಕಾರದ ಉದ್ದೇಶ ಎಂದು ತಿಳಿಸಿದರು.
ಭೂಸ್ವಾಧೀನಕ್ಕೆ ನೀಡುತ್ತಿರುವ ಪರಿಹಾರದ ಬಗ್ಗೆ ರೈತರಿಗೆ ಅಸಮಾಧಾನವಿದ್ದರೆ, ಅದನ್ನು ಸರ್ಕಾರ ಮತ್ತೊಮ್ಮೆ ಪರಿಶೀಲಿಸಲು ಸಿದ್ಧವಿದೆ, "ಪರಿಹಾರ ಮೊತ್ತ ಸಾಕಾಗುತ್ತಿಲ್ಲ ಎಂದು ರೈತರು ಅಭಿಪ್ರಾಯಪಟ್ಟರೆ, ಅದರ ಮರುಪರಿಶೀಲನೆ ನಡೆಸುತ್ತೇವೆ. ಅಗತ್ಯವಿದ್ದರೆ ಹೆಚ್ಚಿನ ಪರಿಹಾರ ನೀಡುವ ಬಗ್ಗೆಯೂ ಸರ್ಕಾರ ಸಕಾರಾತ್ಮಕವಾಗಿ ನಿರ್ಧಾರ ಕೈಗೊಳ್ಳಲಿದೆ" ಎಂದು ಭರವಸೆ ನೀಡಿದರು.
ಇದೇ ವೇಳೆ ಟೌನ್‌ಶಿಪ್ ಯೋಜನೆ ಎಐ (ಕೃತಕ ಬುದ್ಧಿಮತ್ತೆ) ಹಬ್ ನಿರ್ಮಾಣಕ್ಕಾಗಿ ರೂಪಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಮತ್ತು ಜನಸಂಖ್ಯೆಯ ಒತ್ತಡ ಹೆಚ್ಚುತ್ತಿದೆ. ಈ ಒತ್ತಡವನ್ನು ಕಡಿಮೆ ಮಾಡಲು ಬೆಂಗಳೂರಿನ ಸುತ್ತಮುತ್ತ ಯೋಜಿತ ಟೌನ್‌ಶಿಪ್‌ಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಹೇಳಿದರು.
ಬೆಂಗಳೂರು ಸಮೀಪದ ತುಮಕೂರು, ಕೋಲಾರ ಸೇರಿದಂತೆ ಇತರೆ ನಗರಗಳನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸಿದರೆ ರಾಜಧಾನಿಯ ಮೇಲಿನ ಜನಸಂಖ್ಯೆ ಮತ್ತು ಸಂಚಾರದ ಒತ್ತಡವನ್ನು ಕಡಿಮೆ ಮಾಡಬಹುದು. ಈ ಉದ್ದೇಶದಿಂದಲೇ ಟೌನ್‌ಶಿಪ್ ಯೋಜನೆಯನ್ನು ಸರ್ಕಾರ ಮುಂದಿಟ್ಟಿದೆ ಎಂದು ವಿವರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



