ಹೋಟೆಲ್ ಉದ್ಯಮಕ್ಕೆ ಬಿಗ್ ರಿಲೀಫ್; ವಾಣಿಜ್ಯ LPG ಪೂರೈಕೆ ಮೇಲಿನ ನಿರ್ಬಂಧ ಸಂಪೂರ್ಣ ರದ್ದು..!
ಮಧ್ಯಪ್ರಾಚ್ಯದಲ್ಲಿನ ಸಂಘರ್ಷ, ಉದ್ವಿಗ್ನ ಪರಿಸ್ಥಿತಿಯಿಂದಾಗಿ ಕಳೆದ ಕೆಲವು ತಿಂಗಳುಗಳಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ತೀವ್ರ ಕೊರತೆ ಉಂಟಾಗಿತ್ತು.

ಬೆಂಗಳೂರು: ರಾಜ್ಯದ ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮಕ್ಕೆ ಕೇಂದ್ರ ಸರ್ಕಾರದಿಂದ ಮಹತ್ವದ ನಿರಾಳತೆ ಸಿಕ್ಕಿದೆ.
ವಾಣಿಜ್ಯ ಬಳಕೆಯ ಎಲ್‌ಪಿಜಿ (Commercial LPG) ಪೂರೈಕೆಯ ಮೇಲೆ ವಿಧಿಸಲಾಗಿದ್ದ ಎಲ್ಲಾ ವಲಯವಾರು ನಿರ್ಬಂಧಗಳನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ತೆರವುಗೊಳಿಸಿದೆ. ಇದರೊಂದಿಗೆ ಕರ್ನಾಟಕದ, ವಿಶೇಷವಾಗಿ ಬೆಂಗಳೂರಿನ ಹೋಟೆಲ್‌ಗಳು ಮತ್ತೆ ಹಿಂದಿನಂತೆ ಅಡುಗೆ ಕಾರ್ಯಾಚರಣೆ ನಡೆಸಲು ಅನುಕೂಲವಾಗಿದ್ದು, ಗ್ರಾಹಕರಿಗೂ ಸ್ಥಿರ ದರದಲ್ಲಿ ಹಾಗೂ ಸಂಪೂರ್ಣ ಮೆನು ಲಭ್ಯವಾಗುವ ನಿರೀಕ್ಷೆ ಮೂಡಿದೆ.
ಮಧ್ಯಪ್ರಾಚ್ಯದಲ್ಲಿನ ಸಂಘರ್ಷ, ಉದ್ವಿಗ್ನ ಪರಿಸ್ಥಿತಿಯಿಂದಾಗಿ ಕಳೆದ ಕೆಲವು ತಿಂಗಳುಗಳಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ತೀವ್ರ ಕೊರತೆ ಉಂಟಾಗಿತ್ತು.
ಇದರ ಪರಿಣಾಮವಾಗಿ ರಾಜ್ಯದ ಅನೇಕ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ತಮ್ಮ ಮೆನುಗಳನ್ನು ಸೀಮಿತಗೊಳಿಸುವುದು, ಆಹಾರದ ಬೆಲೆ ಏರಿಸುವುದು, ಕಾರ್ಯನಿರ್ವಹಣೆಯ ಸಮಯವನ್ನು ಕಡಿಮೆ ಮಾಡುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದ್ದವು. ಕೆಲವು ಜನಪ್ರಿಯ ಖಾದ್ಯಗಳು ಲಭ್ಯವಿಲ್ಲ ಎಂಬ ಸೂಚನ ಫಲಕಗಳೂ ಕಂಡು ಬಂದಿದ್ದವು. ಇದೀಗ ಕೇಂದ್ರ ಸರ್ಕಾರ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿದ್ದು, ಎಲ್ಲವೂ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆಗಳಿವೆ.
ರಾಜ್ಯ ಮಟ್ಟದ ಸಂಯೋಜಕ ಸಿದ್ಧಾರ್ಥ್ ಅವರು ಮಾತನಾಡಿ, ಕೇಂದ್ರದಿಂದ ಹೊಸ ಸೂಚನೆ ಬಂದಿದೆ. ಸಂಘರ್ಷ ಪರಿಸ್ಥಿತಿಯಿಂದ ವಿಧಿಸಲಾಗಿದ್ದ ನಿರ್ಬಂಧಗಳನ್ನು ಈಗ ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲಾಗಿದೆ. ಮೇ ತಿಂಗಳಲ್ಲೇ ಶೇ.70ರಷ್ಟು ನಿರ್ಬಂಧಗಳನ್ನು ಸಡಿಲಿಸಲಾಗಿತ್ತು. ಈಗ ಉಳಿದ ನಿರ್ಬಂಧಗಳನ್ನೂ ತೆಗೆದುಹಾಕಲಾಗಿದೆ. ಪೂರೈಕೆಯಲ್ಲಿ ಯಾವುದೇ ತೊಂದರೆ ಎದುರಾದರೆ ಗ್ರಾಹಕರು ಸಹಾಯವಾಣಿ ಅಥವಾ ಮೊಬೈಲ್ ಆ್ಯಪ್ ಮೂಲಕ ಸಂಪರ್ಕಿಸಬಹುದು" ಎಂದು ಹೇಳಿದ್ದಾರೆ.
ಈ ನಿರ್ಧಾರವನ್ನು ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಸುಬ್ರಹ್ಮಣ್ಯ ಹೊಳ್ಳ ಸ್ವಾಗತಿಸಿದ್ದಾರೆ. ಆದರೆ ಇತ್ತೀಚೆಗೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು ಸುಮಾರು 900 ರೂಪಾಯಿ ಹೆಚ್ಚಿಸಲಾಗಿದೆ ಎಂಬುದನ್ನು ಉಲ್ಲೇಖಿಸಿದ ಅವರು, "ಪೂರೈಕೆ ಮೇಲಿನ ನಿರ್ಬಂಧ ತೆರವುಗೊಳಿಸಿರುವುದು ಸ್ವಾಗತಾರ್ಹ. ಆದರೆ ದರ ಏರಿಕೆಯನ್ನೂ ಸರ್ಕಾರ ಹಿಂಪಡೆಯಬೇಕು. ನಿರ್ಬಂಧದ ಸಮಯದಲ್ಲಿ ಹೆಚ್ಚಿನ ಹಣ ನೀಡಿ ಸಿಲಿಂಡರ್ ಖರೀದಿಸುವ ಪರಿಸ್ಥಿತಿ ಎದುರಾಗಿತ್ತು" ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಈ ಹಿಂದೆ ಅಗತ್ಯ ವಸ್ತುಗಳ ಕಾಯ್ದೆಯಡಿ (Essential Commodities Act) ಸಿ3-ಸಿ4 ಹೈಡ್ರೋಕಾರ್ಬನ್‌ಗಳನ್ನು ಎಲ್‌ಪಿಜಿ ಉತ್ಪಾದನೆಗೆ ಮಾತ್ರ ಮೀಸಲಿಟ್ಟಿತ್ತು. ಆದರೆ, ದೇಶೀಯ ಉತ್ಪಾದನೆ ಹೆಚ್ಚಳ ಹಾಗೂ ಆಮದು ಸುಧಾರಿಸಿರುವ ಹಿನ್ನೆಲೆಯಲ್ಲಿ ಈ ನಿರ್ಬಂಧಗಳನ್ನು ಕ್ರಮೇಣ ತೆಗೆದುಹಾಕಲಾಗುತ್ತಿದೆ.
ದೇಶೀಯ ಎಲ್‌ಪಿಜಿ ಉತ್ಪಾದನೆಯನ್ನು ದಿನಕ್ಕೆ 40 ಟಿಎಂಟಿ (TMT) ಗಿಂತ ಹೆಚ್ಚು ಮಟ್ಟದಲ್ಲಿ ಕಾಯ್ದುಕೊಳ್ಳುವ ಕ್ರಮವೂ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ.
ಆದಾಗ್ಯೂ, ಬಲ್ಕ್ ಟ್ಯಾಂಕರ್‌ಗಳ ಮೂಲಕ ಎಲ್‌ಪಿಜಿ ಪೂರೈಕೆಯ ಮೇಲಿನ ಕೆಲವು ನಿಯಮಗಳು ಮುಂದುವರಿಯುವ ಸಾಧ್ಯತೆ ಇದ್ದರೂ, ಒಟ್ಟಾರೆ ವಾಣಿಜ್ಯ ಎಲ್‌ಪಿಜಿ ಲಭ್ಯತೆ ಸುಧಾರಿಸಿರುವುದು ಹೋಟೆಲ್ ಹಾಗೂ ಆಹಾರ ಉದ್ಯಮಕ್ಕೆ ದೊಡ್ಡ ನಿರಾಳತೆ ನೀಡಿದೆ. ಇದರಿಂದ ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಆಹಾರ ಲಭ್ಯತೆ ಸುಧಾರಿಸುವುದರ ಜೊತೆಗೆ, ಬೆಲೆ ಏರಿಕೆಯ ಒತ್ತಡವೂ ಕಡಿಮೆಯಾಗುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



