'ಗೃಹಲಕ್ಷ್ಮಿ' ಯೋಜನೆ ಅನುಷ್ಠಾನದಲ್ಲಿ ಯಾವುದೇ ಲೋಪವಿಲ್ಲ: ರಾಜ್ಯ ಸರ್ಕಾರ ಸ್ಪಷ್ಟನೆ
ಯೋಜನೆಯನ್ನು ನಿಯಮಗಳ ಪ್ರಕಾರ ಪಾರದರ್ಶಕ ರೀತಿಯಲ್ಲಿ ಕಾರ್ಯಗತಗೊಳಿಸಲಾಗುತ್ತಿದ್ದು, ಹಣ ಯಾವುದೇ ಸಮಸ್ಯೆಯಿಲ್ಲದೆ ಅರ್ಹ ಫಲಾನುಭವಿಗಳನ್ನು ತಲುಪುತ್ತಿದೆ.

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ ಕುರಿತು ಲೆಕ್ಕಪರಿಶೋಧಕರ (ಆಡಿಟ್) ವರದಿಯಲ್ಲಿ ಕೇಳಿಬಂದಿರುವ ಆಕ್ಷೇಪಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸ್ಪಷ್ಟನೆ ನೀಡಿದ್ದು, ಯೋಜನೆ ಸಂಪೂರ್ಣ ಪಾರದರ್ಶಕವಾಗಿ ಜಾರಿಯಾಗುತ್ತಿದೆ ಎಂದು ತಿಳಿಸಿದೆ.
ಅರ್ಹರಲ್ಲದವರು ಹಾಗೂ ಮೃತಪಟ್ಟ ಫಲಾನುಭವಿಗಳ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ಹಿನ್ನೆಲೆಯಲ್ಲಿ ಇಲಾಖೆ ಸ್ಪಷ್ಟನೆ ನೀಡಿದೆ.
ಈ ನಡುವೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಈ ಕುರಿತು ಮಾಹಿತಿ ನೀಡಿದ್ದು, ಆದಾಯ ತೆರಿಗೆ ಪಾವತಿಸುವ ಮತ್ತು ಜಿಎಸ್‌ಟಿ ರಿಟರ್ನ್ ಸಲ್ಲಿಸುವ 1,94,560 ಮಹಿಳೆಯರನ್ನು ಯೋಜನೆಯಿಂದ ಹೊರಗಿಡುವ ಪ್ರಕ್ರಿಯೆ ನಡೆಯುತ್ತಿದೆ. ಇಲ್ಲಿಯವರೆಗೆ ಯೋಜನೆಯಲ್ಲಿ ನೋಂದಾಯಿಸಿಕೊಂಡಿದ್ದ 2,88,376 ಮಹಿಳೆಯರು ಮೃತಪಟ್ಟಿದ್ದು, ಅವರ ಮಾಹಿತಿಯನ್ನು ಇ-ಜನ್ಮ, ಕುಟುಂಬ ತಂತ್ರಾಂಶ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (PDO) ಮೂಲಕ ಸಂಗ್ರಹಿಸಲಾಗುತ್ತಿದೆ. ಮೃತಪಟ್ಟ ಫಲಾನುಭವಿಗಳ ಹೆಸರನ್ನು ಶೀಘ್ರವೇ ಯೋಜನೆಯಿಂದ ತೆಗೆದುಹಾಕಲಾಗುವುದು ಎಂದು ತಿಳಿಸಿದೆ.
ಮೃತಪಟ್ಟ ಫಲಾನುಭವಿಗಳಲ್ಲಿ 1,03,922 ಕುಟುಂಬಗಳಲ್ಲಿ ನಿಯಮಾನುಸಾರ ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರ ಹೆಸರು ಬದಲಾಗಿದ್ದು, ಮರು ನೋಂದಣಿಯ ಬಳಿಕ ಹೊಸ ಕುಟುಂಬ ಮುಖ್ಯಸ್ಥರ ಖಾತೆಗೆ ಹಣ ಜಮೆಯಾಗುತ್ತಿದೆ.
ಆದರೆ, ಫಲಾನುಭವಿಗಳ ಸಾವಿನ ಮಾಹಿತಿ ಇಲಾಖೆಗೆ ಸಮಯಕ್ಕೆ ಸಿಗದ ಕಾರಣ 1,08,755 ಮೃತ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಒಟ್ಟು ರೂ.115 ಕೋಟಿ ಜಮೆಯಾಗಿದೆ. ಈ ಪೈಕಿ ರೂ.15.24 ಕೋಟಿ ಮೊತ್ತವನ್ನು ಬ್ಯಾಂಕ್‌ಗಳು ಸರ್ಕಾರದ ಖಾತೆಗೆ ಹಿಂದಿರುಗಿಸಿವೆ. ಉಳಿದ ಮೊತ್ತವನ್ನು ವಾಪಸ್ ಪಡೆಯುವ ಪ್ರಕ್ರಿಯೆ ಮುಂದುವರಿದಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಗೃಹಲಕ್ಷ್ಮಿ ಯೋಜನೆಯನ್ನು ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (ABPS) ಮೂಲಕ ಜಾರಿಗೊಳಿಸಲಾಗುತ್ತಿದೆ. ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಭೌತಿಕ ಪರಿಶೀಲನೆ ನಡೆಸಿದಾಗ, ಅತ್ತೆ-ಸೊಸೆ ಅಥವಾ ತಾಯಿ-ಮಗಳು ಜಂಟಿ ಬ್ಯಾಂಕ್ ಖಾತೆ ಹೊಂದಿದ್ದ ಕೆಲವು ಪ್ರಕರಣಗಳಲ್ಲಿ ಒಂದೇ ಖಾತೆಗೆ ಹಣ ಜಮೆಯಾಗಿರುವುದು ಕಂಡುಬಂದಿದೆ. ಆದರೆ, ಅವರು ಪ್ರತ್ಯೇಕ ಪಡಿತರ ಚೀಟಿಗಳನ್ನು ಹೊಂದಿರುವ ಅರ್ಹ ಫಲಾನುಭವಿಗಳೇ ಆಗಿದ್ದಾರೆ ಎಂದು ಇಲಾಖೆ ತಿಳಿಸಿದೆ.
ಕೆಲವು ಸಂದರ್ಭಗಳಲ್ಲಿ ಬ್ಯಾಂಕ್‌ಗಳ ತಾಂತ್ರಿಕ ದೋಷ (Narration Error) ಕಾರಣದಿಂದ ಹಣ ತಪ್ಪು ಖಾತೆಗೆ ವರ್ಗಾವಣೆಯಾಗಿರಬಹುದು. ಅಲ್ಲದೆ, ಫಲಾನುಭವಿಗಳು ತಮ್ಮ ಆಧಾರ್‌ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯನ್ನು ಬದಲಾಯಿಸಬಹುದಾದ ಕಾರಣ, ಬೇರೆ ಬೇರೆ ತಿಂಗಳಲ್ಲಿ ಬೇರೆ ಖಾತೆಗಳಿಗೆ ಹಣ ಜಮೆಯಾಗುವ ಸಾಧ್ಯತೆಯಿದೆ. ಆದರೆ, ಒಂದೇ ತಿಂಗಳಲ್ಲಿ ಒಬ್ಬ ಫಲಾನುಭವಿಗೆ ಎರಡು ಖಾತೆಗಳಿಗೆ ಹಣ ಜಮೆಯಾಗಲು ಅವಕಾಶವಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಏಪ್ರಿಲ್ 2026ರ ಅಂತ್ಯದ ವೇಳೆಗೆ ರಾಜ್ಯದಲ್ಲಿ ಒಟ್ಟು 1,30,35,318 ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ ಸಾಮಾನ್ಯ ವರ್ಗದ 95,66,679, ಪರಿಶಿಷ್ಟ ಜಾತಿಯ 24,95,604 ಹಾಗೂ ಪರಿಶಿಷ್ಟ ಪಂಗಡದ 9,73,035 ಫಲಾನುಭವಿಗಳಿದ್ದಾರೆ. ಪ್ರತಿ ತಿಂಗಳು ಕುಟುಂಬದ ಮುಖ್ಯಸ್ಥೆಯ ಬ್ಯಾಂಕ್ ಖಾತೆಗೆ ರೂ.2,000 ನೇರ ನಗದು ವರ್ಗಾವಣೆ (DBT) ಮೂಲಕ ಜಮೆ ಮಾಡಲಾಗುತ್ತಿದೆ. ಯೋಜನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಮತ್ತು ಮಾಧ್ಯಮಗಳಲ್ಲಿ ಬರುವ ತಪ್ಪು ಮಾಹಿತಿಯಿಂದ ಗೊಂದಲಕ್ಕೀಡಾಗಬಾರದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



