ತುಂಗಭದ್ರೆಗೆ ಹೊಸ ಕಳೆ; ನೂತನ 33 ಕ್ರೆಸ್ಟ್ ಗೇಟ್‌ಗಳ ಲೋಕಾರ್ಪಣೆ: ಒಂದೇ ವೇದಿಕೆಯಲ್ಲಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳು..!
ಅಣೆಕಟ್ಟಿನ 18ನೇ ಗೇಟ್ ಸಮೀಪ ನಡೆದ ಪೂಜಾ ವಿಧಿಗಳ ಬಳಿಕ ನೂತನ ಗೇಟ್‌ಗಳ ಲೋಕಾರ್ಪಣೆ ನೆರವೇರಿತು. ಡಿ.ಕೆ. ಶಿವಕುಮಾರ್ ಅವರು 18ನೇ ಗೇಟ್‌ಗೆ ಚಾಲನೆ ನೀಡಿದರೆ, ಸಿ.ಆರ್. ಪಾಟೀಲ್ ಅವರು 17ನೇ ಗೇಟ್ ಉದ್ಘಾಟಿಸಿದರು.

ಹೊಸಪೇಟೆ/ಮುನಿರಾಬಾದ್ (ವಿಜಯನಗರ/ಕೊಪ್ಪಳ): ತುಂಗಭದ್ರಾ ಜಲಾಶಯದ ಇತಿಹಾಸದಲ್ಲಿ ಗುರುವಾರ ಮಹತ್ವದ ದಿನವಾಗಿ ದಾಖಲಾಗಿದೆ. ಸುಮಾರು 73 ವರ್ಷಗಳ ಬಳಿಕ ಅಣೆಕಟ್ಟಿನ ಹಳೆಯ ಕ್ರೆಸ್ಟ್ ಗೇಟ್‌ಗಳನ್ನು ಬದಲಾಯಿಸಿ ಅಳವಡಿಸಲಾದ ನೂತನ 33 ಕ್ರೆಸ್ಟ್ ಗೇಟ್‌ಗಳನ್ನು ಲೋಕಾರ್ಪಣೆಗೊಳಿಸಲಾಗಿದೆ.
ಮುನಿರಾಬಾದ್ ಸಮೀಪದ ತುಂಗಭದ್ರಾ ಅಣೆಕಟ್ಟೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್, ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹಾಗೂ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಭಾಗವಹಿಸಿದ್ದರು.
ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರು ಒಂದೇ ವೇದಿಕೆಯಲ್ಲಿ ಸೇರಿದ್ದು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.
ಅಣೆಕಟ್ಟಿನ 18ನೇ ಗೇಟ್ ಸಮೀಪ ನಡೆದ ಪೂಜಾ ವಿಧಿಗಳ ಬಳಿಕ ನೂತನ ಗೇಟ್‌ಗಳ ಲೋಕಾರ್ಪಣೆ ನೆರವೇರಿತು. ಡಿ.ಕೆ. ಶಿವಕುಮಾರ್ ಅವರು 18ನೇ ಗೇಟ್‌ಗೆ ಚಾಲನೆ ನೀಡಿದರೆ, ಸಿ.ಆರ್. ಪಾಟೀಲ್ ಅವರು 17ನೇ ಗೇಟ್ ಉದ್ಘಾಟಿಸಿದರು.
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು 19ನೇ ಗೇಟ್‌ನ್ನು ಲೋಕಾರ್ಪಣೆ ಮಾಡಿದ್ದು, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ 20ನೇ ಗೇಟ್‌ಗೆ ಚಾಲನೆ ನೀಡಿದರು.
ಬೆಳಿಗ್ಗೆ 11.15ಕ್ಕೆ ಕಾರ್ಯಕ್ರಮ ನಿಗದಿಯಾಗಿದ್ದರೂ, ಸುಮಾರು ಒಂದೂಕಾಲು ಗಂಟೆ ವಿಳಂಬವಾಗಿ ಉದ್ಘಾಟನೆ ನಡೆಯಿತು. ಬಳಿಕ ನಾಲ್ವರು ನಾಯಕರು ಕೈಎತ್ತಿ ಒಗ್ಗಟ್ಟು ಪ್ರದರ್ಶಿಸಿ, ತುಂಗಭದ್ರಾ ಜಲಾಶಯ ಮತ್ತು ನೀರಿನ ಹಂಚಿಕೆ ಸಂಬಂಧಿತ ವಿಷಯಗಳಲ್ಲಿ ಮುಂದೆಯೂ ಸಹಕಾರದಿಂದ ಕಾರ್ಯನಿರ್ವಹಿಸುವ ಸಂದೇಶ ನೀಡಿದರು.
2024ರ ಆಗಸ್ಟ್‌ನಲ್ಲಿ ತುಂಗಭದ್ರಾ ಡ್ಯಾಂನ 19ನೇ ಕ್ರೆಸ್ಟ್ ಗೇಟ್ ಕೊಚ್ಚಿ ಹೋಗಿದ್ದ ಘಟನೆ ರಾಜ್ಯ ಮಾತ್ರವಲ್ಲದೆ ದೇಶದ ಗಮನ ಸೆಳೆದಿತ್ತು. ಈ ಘಟನೆ ಬಳಿಕ ಡ್ಯಾಂ ಸುರಕ್ಷತಾ ತಜ್ಞರ ತಂಡ ಹಾಗೂ ಕೇಂದ್ರ ಜಲಶಕ್ತಿ ಆಯೋಗದಿಂದ ಸಮಗ್ರ ಪರಿಶೀಲನೆ ನಡೆಸಲಾಗಿತ್ತು. ಅದರ ಆಧಾರದ ಮೇಲೆ ಹಳೆಯ ಹಾಗೂ ಸವಕಳಿಗೊಂಡಿದ್ದ ಒಟ್ಟು 33 ಕ್ರೆಸ್ಟ್ ಗೇಟ್‌ಗಳನ್ನು ಬದಲಾಯಿಸಲು ಸೂಚನೆ ನೀಡಲಾಗಿತ್ತು.
ಸುಮಾರು ರೂ.51 ಕೋಟಿ ವೆಚ್ಚದಲ್ಲಿ ನೂತನ ಗೇಟ್‌ಗಳನ್ನು ಅಳವಡಿಸಲಾಗಿದ್ದು, 1953ರಲ್ಲಿ ಅಳವಡಿಸಿದ್ದ ಹಳೆಯ ಗೇಟ್‌ಗಳಿಗೆ ಬದಲಾಗಿ ಇವು ಸ್ಥಾಪಿಸಲ್ಪಟ್ಟಿವೆ. ಪ್ರತಿಯೊಂದು ಗೇಟ್ ಸುಮಾರು 20 ಅಡಿ ಎತ್ತರ, 60 ಅಡಿ ಅಗಲ ಮತ್ತು 48.50 ಟನ್ ತೂಕ ಹೊಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತುಂಗಭದ್ರಾ ಜಲಾಶಯಕ್ಕೆ ಸಂಬಂಧಿಸಿದಂತೆ ಮೂರು ರಾಜ್ಯಗಳ ಸಹಕಾರದ ಸಂಕೇತವಾಗಿ ಈ ಲೋಕಾರ್ಪಣೆ ಕಾರ್ಯಕ್ರಮ ಗಮನಸೆಳೆದಿದ್ದು, ಜಲಾಶಯದ ಸುರಕ್ಷತೆ ಮತ್ತು ನಿರ್ವಹಣೆಯಲ್ಲಿ ಇದು ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



