9 TMC ನೀರಿಗೆ ತಮಿಳುನಾಡು ಪಟ್ಟು: ಮುಂಗಾರು ಕೊರತೆ ಉಲ್ಲೇಖಿಸಿದ ಕರ್ನಾಟಕ ಆಕ್ಷೇಪ; ನಿರ್ಧಾರ ಮುಂದೂಡಿಕೆ..!
ದೆಹಲಿಯಲ್ಲಿ ನಡೆದ ಸಭೆಯಲ್ಲಿ ಕಾವೇರಿ ಜಲಾನಯನ ಪ್ರದೇಶದ ರಾಜ್ಯಗಳ ಜಲಾಶಯಗಳ ನೀರಿನ ಸಂಗ್ರಹ, ಒಳಹರಿವು, ಹೊರಹರಿವು ಹಾಗೂ ಮಳೆಯ ಪರಿಸ್ಥಿತಿಯನ್ನು ಪರಿಶೀಲಿಸಲಾಯಿತು.

ಬೆಂಗಳೂರು: ತಮಿಳುನಾಡು ತನ್ನ ಪಾಲಿನ 9 ಟಿಎಂಸಿ ನೀರು ಬಿಡುಗಡೆಗೆ ಒತ್ತಾಯಿಸಿದರೂ, ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) ಯಾವುದೇ ಅಂತಿಮ ತೀರ್ಮಾನ ಕೈಗೊಳ್ಳದೆ ವಿಷಯವನ್ನು ಮುಂದಿನ ಸಭೆಗೆ ಮುಂದೂಡಿದೆ.
ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) ಮಂಗಳವಾರ ನಡೆದ 52ನೇ ಸಭೆಯಲ್ಲಿ ನೀರು ಬಿಡುಗಡೆ ಕುರಿತ ಯಾವುದೇ ಅಂತಿಮ ತೀರ್ಮಾನ ಕೈಗೊಳ್ಳದೆ ಮುಂದಿನ ಸಭೆಗೆ ವಿಷಯವನ್ನು ಮುಂದೂಡಿದೆ.
ದೆಹಲಿಯಲ್ಲಿ ನಡೆದ ಸಭೆಯಲ್ಲಿ ಕಾವೇರಿ ಜಲಾನಯನ ಪ್ರದೇಶದ ರಾಜ್ಯಗಳ ಜಲಾಶಯಗಳ ನೀರಿನ ಸಂಗ್ರಹ, ಒಳಹರಿವು, ಹೊರಹರಿವು ಹಾಗೂ ಮಳೆಯ ಪರಿಸ್ಥಿತಿಯನ್ನು ಪರಿಶೀಲಿಸಲಾಯಿತು.
ಮುಂಗಾರು ಮಳೆ ಮುಂದಿನ ದಿನಗಳಲ್ಲಿ ಚೇತರಿಸಿಕೊಳ್ಳುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಮುಂದಿನ ಸಭೆಯಲ್ಲಿ ಮರುಪರಿಶೀಲಿಸಲು ಪ್ರಾಧಿಕಾರ ನಿರ್ಧರಿಸಿದೆ.
ಸಭೆಯಲ್ಲಿ ತಮಿಳುನಾಡು ತನ್ನ ಪಾಲಿನ 9 ಟಿಎಂಸಿ ಅಡಿ ನೀರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿತು. ಅಲ್ಲದೆ, ಬರ ಪರಿಸ್ಥಿತಿಯಲ್ಲಿ ನೀರು ಹಂಚಿಕೆ ಮಾಡುವ ಕುರಿತು ವಿಶೇಷ ಸೂತ್ರ (Distress Sharing Formula) ರೂಪಿಸಬೇಕೆಂದು ಆಗ್ರಹಿಸಿತು.
ಇದರ ಜೊತೆಗೆ ಕರ್ನಾಟಕ ಸರ್ಕಾರವು ಸಣ್ಣ ನೀರಾವರಿ ಕೆರೆಗಳ ಭರ್ತಿ ಯೋಜನೆಗಳು ಹಾಗೂ ನದಿಗಳು ಮತ್ತು ಕಾಲುವೆಗಳಿಂದ ನೇರವಾಗಿ ನೀರು ಪಡೆಯುವ ಏತ ನೀರಾವರಿ ಯೋಜನೆಗಳ ವಿವರಗಳನ್ನು ಸಲ್ಲಿಸುವಂತೆ CWMA ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿತು.
ಬೆಂಗಳೂರು ನಗರಕ್ಕೆ ಕಾವೇರಿ ಜಲಾನಯನ ಪ್ರದೇಶದಿಂದ ಪೂರೈಸುವ ನೀರನ್ನು ಕರ್ನಾಟಕದ ಶೇ.100ರಷ್ಟು ಬಳಕೆಯಾಗಿ ಪರಿಗಣಿಸಿ ಲೆಕ್ಕಾಚಾರದಲ್ಲಿ ಸೇರಿಸಬೇಕು ಎಂಬ ಬೇಡಿಕೆಯನ್ನು ಕೂಡ ತಮಿಳುನಾಡು ಮುಂದಿಟ್ಟಿತು.
ಇದಕ್ಕೆ ಪ್ರತಿಕ್ರಿಯಿಸಿದ ಕರ್ನಾಟಕ, ಮುಂಗಾರು ಮಳೆ ವಿಳಂಬವಾಗಿರುವುದರಿಂದ ಜಲಾಶಯಗಳಿಗೆ ನಿರೀಕ್ಷಿತ ಪ್ರಮಾಣದ ನೀರು ಹರಿದುಬರದೆ ಸಂಗ್ರಹ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿಸಿತು. ಇದರಿಂದ ಜಲಾಶಯಗಳಿಂದ ಹೊರಹರಿವೂ ಕಡಿಮೆಯಾಗಿದೆ ಎಂದು ವಿವರಿಸಿತು.
ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿಯೂ ಎಲ್ ನಿನೊ ಪರಿಣಾಮದಿಂದ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿತು.
ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದ CWMA, ಕಾವೇರಿ ಜಲಾನಯನ ಪ್ರದೇಶದ ಎಲ್ಲಾ ರಾಜ್ಯಗಳು ಲಭ್ಯವಿರುವ ನೀರನ್ನು ವಿವೇಚನೆಯಿಂದ ಬಳಸಬೇಕು ಎಂದು ಸೂಚಿಸಿದೆ. ವಿಶೇಷವಾಗಿ ಕುಡಿಯುವ ನೀರಿನ ಅಗತ್ಯಕ್ಕೆ ಮೊದಲ ಆದ್ಯತೆ ನೀಡುವಂತೆ ನಿರ್ದೇಶನ ನೀಡಿತು. ಅಲ್ಲದೆ, ಮುಂದಿನ ಸಭೆಯಲ್ಲಿ ಈ ವಿಷಯವನ್ನು ಪರಿಶೀಲಿಸುವುದಾಗಿ ನಿರ್ಧರಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



