ಮೈಸೂರಿನಲ್ಲಿ ಜೀತಪದ್ಧತಿ ಇನ್ನೂ ಜೀವಂತ: 75 ಸಾವಿರ ರೂ ಸಾಲಕ್ಕಾಗಿ 8 ವರ್ಷಗಳಿಂದ ಜೀತ ಕೆಲಸ; ಬಾಲ ಕಾರ್ಮಿಕರೂ ಸೇರಿ 18 ಮಂದಿ ರಕ್ಷಣೆ..!
ರಕ್ಷಿಸಲ್ಪಟ್ಟವರಲ್ಲಿ 16 ಮಂದಿ ಸಮೀಪದ ಗ್ರಾಮಗಳ ನಿವಾಸಿಗಳಾಗಿದ್ದು, ಇಬ್ಬರು ತಮಿಳುನಾಡಿನ ವೇಲೂರು ಜಿಲ್ಲೆಯವರಾಗಿದ್ದಾರೆಂದು ತಿಳಿದುಬಂದಿದೆ.

ಮೈಸೂರು: ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ಬೇವನಹಳ್ಳಿ ಗ್ರಾಮದಲ್ಲಿರುವ ಇಟ್ಟಿಗೆ ಕಾರ್ಖಾನೆಯೊಂದರಲ್ಲಿ ಕಾರ್ಮಿಕರನ್ನು ಬಂಧಿಸಿ, ಜೀತ ಮಾಡಿಸಿಕೊಳ್ಳುತ್ತಿದ್ದ 18 ಮಂದಿಯನ್ನು ಅಧಿಕಾರಿಗಳು ರಕ್ಷಣೆ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಮಾಲೀಕರನ್ನು ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತರನ್ನು ಯತಿರಾಜ್, ಗಿರೀಶ್ ಮತ್ತು ಮಹದೇವ್ ಎಂದು ಗುರುತಿಸಲಾಗಿದೆ. ಆರೋಪಿಗಳು ಕಾರ್ಮಿಕರನ್ನು 4ರಿಂದ 20 ವರ್ಷಗಳವರೆಗೆ ಬಂಧಿಸಿ, ಜೀತ ಕಾರ್ಮಿಕರಂತೆ ದುಡಿಸಿಕೊಂಡಿದ್ದರೆಂದು ಆರೋಪಿಸಲಾಗಿದೆ.
ರಕ್ಷಿಸಲ್ಪಟ್ಟವರಲ್ಲಿ 16 ಮಂದಿ ಸಮೀಪದ ಗ್ರಾಮಗಳ ನಿವಾಸಿಗಳಾಗಿದ್ದು, ಇಬ್ಬರು ತಮಿಳುನಾಡಿನ ವೇಲೂರು ಜಿಲ್ಲೆಯವರಾಗಿದ್ದಾರೆಂದು ತಿಳಿದುಬಂದಿದೆ,
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಹಶೀಲ್ದಾರ್, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಕಾರ್ಮಿಕರನ್ನು ರಕ್ಷಿಸಿದ್ದಾರೆ. ವಿಕಾಸನ ಮತ್ತು ಮಡಿಲು ಎಂಬ ಸ್ವಯಂಸೇವಾ ಸಂಸ್ಥೆಗಳು ಈ ಪ್ರಕರಣವನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದವು.
ಈ ಸಂಬಂಧ ಮೈಸೂರಿನ ಬನ್ನೂರು ಪೊಲೀಸ್ ಠಾಣೆಯಲ್ಲಿ ಜೀತ ಪದ್ಧತಿ (ನಿರ್ಮೂಲನೆ) ಕಾಯ್ದೆ, ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 143 (ವ್ಯಕ್ತಿಗಳ ಕಳ್ಳಸಾಗಣೆ), 127, 74 ಮತ್ತು 115 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ರಕ್ಷಿಸಲ್ಪಟ್ಟ ಎಲ್ಲ ಕಾರ್ಮಿಕರಿಗೆ ಜಿಲ್ಲಾಡಳಿತ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಿದೆ. ಪ್ರತಿಯೊಬ್ಬರಿಗೂ ಬಿಡುಗಡೆ ಪ್ರಮಾಣಪತ್ರ ಮತ್ತು ಆರಂಭಿಕ ಪರಿಹಾರವಾಗಿ ರೂ.30 ಸಾವಿರ ನೀಡುವ ಪ್ರಕ್ರಿಯೆ ಆರಂಭಿಸಿದೆ.
ಕಳೆದ ಶುಕ್ರವಾರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ದಂಪತಿಯೊಬ್ಬರು ಮಾಲೀಕರ ಕಿರುಕುಳದಿಂದ ತಪ್ಪಿಸಿಕೊಂಡು ಮೈಸೂರಿನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಆದರೆ, ಭಾನುವಾರ ಅವರನ್ನು ಪತ್ತೆ ಹಚ್ಚಿದ ಮಾಲೀಕರು ಮತ್ತೆ ಕರೆತಂದು, ಹಲ್ಲೆ ನಡೆಸಿ ಕೊಠಡಿಯಲ್ಲಿ ಕೂಡಿ ಹಾಕಿದ್ದರು. ಸೋಮವಾರ ನಡೆದ ಕಾರ್ಯಾಚರಣೆಯಲ್ಲಿ ಇವರನ್ನೂ ರಕ್ಷಿಸಲಾಗಿದೆ.
ರೂ.75 ಸಾವಿರ ಮುಂಗಡ ಪಡೆದು 8 ವರ್ಷಗಳಿಂದ ದುಡಿಮೆ
ರಕ್ಷಿಸಲ್ಪಟ್ಟ ಕುಟುಂಬವೊಂದು ಎಂಟು ವರ್ಷಗಳ ಹಿಂದೆ ರೂ.75 ಸಾವಿರ ಮುಂಗಡ ಹಣ ಪಡೆದಿದ್ದು, ಅಂದಿನಿಂದ ನಿರಂತರವಾಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿತ್ತು. ಅವರ 9 ಮತ್ತು 13 ವರ್ಷದ ಇಬ್ಬರು ಮಕ್ಕಳನ್ನೂ ಕೆಲಸಕ್ಕೆ ಬಳಸಲಾಗುತ್ತಿತ್ತು. ಕಿರಿಯ ಮಗ ಶಾಲೆಗೆ ಹೋಗುತ್ತಿದ್ದರೂ, ಶಾಲೆಗೆ ಹೋಗುವ ಮೊದಲು ಮತ್ತು ನಂತರ ಕೆಲಸ ಮಾಡಬೇಕಾಗಿತ್ತು.
ಕಾರ್ಮಿಕರು ಪ್ರತಿದಿನ ಬೆಳಿಗ್ಗೆ 5 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ದುಡಿಯುತ್ತಿದ್ದರು. ಕುಟುಂಬವೊಂದಕ್ಕೆ ವಾರಕ್ಕೆ ರೂ.500ರಿಂದ ರೂ.1,000 ಮಾತ್ರ ಸಂಬಳ ನೀಡಲಾಗುತ್ತಿತ್ತು. ಮಾಲೀಕರು ನೀಡುತ್ತಿದ್ದ ಅಕ್ಕಿಯ ಹಣವನ್ನೂ ಕಾರ್ಮಿಕರ ಸಂಬಳದಿಂದಲೇ ಕಡಿತಗೊಳಿಸಲಾಗುತ್ತಿತ್ತು.
ಕುಟುಂಬದ ಎಲ್ಲ ಸದಸ್ಯರು ಒಟ್ಟಿಗೆ ಹೊರಗೆ ಹೋಗಲು ಅವಕಾಶ ಇರಲಿಲ್ಲ. ಸಂಬಂಧಿಕರ ಮನೆಗೆ ಅಥವಾ ಕುಟುಂಬದ ಕಾರ್ಯಕ್ರಮಗಳಿಗೆ ತೆರಳುವುದಕ್ಕೂ ನಿರ್ಬಂಧ ವಿಧಿಸಲಾಗಿತ್ತು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಕಾರ್ಮಿಕರು ಕೆಲಸ ಬಿಡಲು ಅಥವಾ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಯತ್ನಿಸಿದರೆ ಕೋಲುಗಳಿಂದ ಹೊಡೆದು ಹಲ್ಲೆ ಮಾಡಲಾಗುತ್ತಿತ್ತು. ಕೆಲವರಿಗೆ ನಡೆದಾಡಲೂ ಕಷ್ಟವಾಗುವಷ್ಟು ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



