ನಮ್ಮ ಮೆಟ್ರೋ ಗಡುವು ಮತ್ತೆ ವಿಸ್ತರಣೆ: ಆಗಸ್ಟ್‌ಗೆ Pink Line; ಪೂರ್ಣ ಸೇವೆಗೆ 2027ರ ಮಾರ್ಚ್ ಗುರಿ..!
ಬ್ಲೂ ಲೈನ್ ಯೋಜನೆಯಲ್ಲೂ ಹೊಸ ಗಡುವು ನಿಗದಿಯಾಗಿದೆ. ಕೆ.ಆರ್.ಪುರಂ–ಮಾರತಹಳ್ಳಿ–ಎಚ್‌ಎಸ್‌ಆರ್ ಲೇಔಟ್ ಮಾರ್ಗದಲ್ಲಿ 2026ರ ಅಕ್ಟೋಬರ್ ವೇಳೆಗೆ ಪ್ರಯೋಗಾತ್ಮಕ ಸಂಚಾರ ನಡೆಸುವ ಗುರಿ ಹೊಂದಲಾಗಿದೆ.

ಬೆಂಗಳೂರು: ನಗರದ ಜನರು ಬಹಳ ನಿರೀಕ್ಷೆಯಿಂದ ಕಾಯುತ್ತಿರುವ ನಮ್ಮ ಮೆಟ್ರೋ ಪಿಂಕ್ ಮತ್ತು ಬ್ಲೂ ಲೈನ್ ಯೋಜನೆಗಳ ಗಡುವು ಮತ್ತೊಮ್ಮೆ ಮುಂದೂಡಲ್ಪಟ್ಟಿದೆ.
ಪಿಂಕ್ ಲೈನ್‌ನ ಎಲಿವೇಟೆಡ್ ಮಾರ್ಗವನ್ನು ಆಗಸ್ಟ್ 15ರೊಳಗೆ ಸಾರ್ವಜನಿಕ ಸೇವೆಗೆ ಆರಂಭಿಸುವ ಗುರಿ ಹೊಂದಲಾಗಿದ್ದು, ನಾಗವಾರವರೆಗಿನ ಭೂಗತ ಮಾರ್ಗ ಸೇರಿ ಸಂಪೂರ್ಣ ಪಿಂಕ್ ಲೈನ್ ಕಾಮಗಾರಿ 2027ರ ಮಾರ್ಚ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಬಿಎಂಆರ್‌ಸಿಎಲ್ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಬಳಿಕ ಈ ಮಾಹಿತಿ ನೀಡಿದರು.
ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಮೇಲ್ದರ್ಜೆ ಮಾರ್ಗ ಆಗಸ್ಟ್‌ನಲ್ಲಿ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ ಎಂದು ಹೇಳಿದರು.
ಬ್ಲೂ ಲೈನ್ ಯೋಜನೆಯಲ್ಲೂ ಹೊಸ ಗಡುವು ನಿಗದಿಯಾಗಿದೆ. ಕೆ.ಆರ್.ಪುರಂ–ಮಾರತಹಳ್ಳಿ–ಎಚ್‌ಎಸ್‌ಆರ್ ಲೇಔಟ್ ಮಾರ್ಗದಲ್ಲಿ 2026ರ ಅಕ್ಟೋಬರ್ ವೇಳೆಗೆ ಪ್ರಯೋಗಾತ್ಮಕ ಸಂಚಾರ ನಡೆಸುವ ಗುರಿ ಹೊಂದಲಾಗಿದೆ.
ಹೆಬ್ಬಾಳ–ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗ 2027ರ ಜೂನ್ ವೇಳೆಗೆ ಕಾರ್ಯಾಚರಣೆಗೆ ಬರಲಿದ್ದು, ಕೆ.ಆರ್.ಪುರಂ–ಹೆಬ್ಬಾಳ ಮಾರ್ಗ 2027ರ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಇದೇ ವೇಳೆ ಮೆಟ್ರೋ ಯೋಜನೆಗಳು ಪದೇ ಪದೇ ಗಡುವು ತಪ್ಪುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, "ಒಂದು ಅಥವಾ ಎರಡು ವರ್ಷಗಳ ವಿಳಂಬಕ್ಕೆ ಯಾವುದೇ ಸಮರ್ಥನೆ ಇಲ್ಲ. ಈ ಸಂಸ್ಕೃತಿ ಬದಲಾಗಬೇಕು. ಇದು ಎಂಜಿನಿಯರಿಂಗ್ ಕೆಲಸ. ಸಾಧ್ಯವಿಲ್ಲ ಎಂಬ ಮಾತನ್ನು ಬಿಟ್ಟು ಪರಿಹಾರ ಕಂಡುಹಿಡಿಯುವತ್ತ ಅಧಿಕಾರಿಗಳು ಗಮನ ಹರಿಸಬೇಕು. ಬೆಂಗಳೂರಿನ ಜನರ ನಿರೀಕ್ಷೆಗಳಿಗೆ ತಕ್ಕಂತೆ ಯೋಜನೆಗಳ ವೇಗ ಹೆಚ್ಚಬೇಕು" ಎಂದು ಸೂಚಿಸಿದರು.
ಹೊಸ ಗಡುವುಗಳ ಪ್ರಕಾರ 2028ರ ವೇಳೆಗೆ ಬೆಂಗಳೂರಿನ ಮೆಟ್ರೋ ಜಾಲವು 175 ಕಿಲೋಮೀಟರ್ ಉದ್ದಕ್ಕೆ ವಿಸ್ತರಿಸುವ ನಿರೀಕ್ಷೆಯಿದೆ. ಇದೇ ವೇಳೆ ಮೆಟ್ರೋ ಫೇಸ್-3ರ ಆರೆಂಜ್ ಲೈನ್ ಡಬಲ್ ಡೆಕ್ಕರ್ ಕಾರಿಡಾರ್ ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆ ಇನ್ನೂ ಬಾಕಿಯಿದ್ದು, ಮುಂದಿನ ಕೆಲ ವಾರಗಳಲ್ಲಿ ಅನುಮತಿ ಸಿಗುವ ವಿಶ್ವಾಸವಿದೆ ಎಂದು ಸಚಿವರು ಹೇಳಿದರು.
ಮೆಟ್ರೋ ಕಾಮಗಾರಿ ನಡೆಯುವ ಪ್ರದೇಶಗಳಲ್ಲಿ ಅನಗತ್ಯವಾಗಿ ಹೆಚ್ಚು ಜಾಗವನ್ನು ವಶಪಡಿಸಿಕೊಳ್ಳದಂತೆ ಹಾಗೂ ಸಾರ್ವಜನಿಕರಿಗೆ ತೊಂದರೆ ಕಡಿಮೆ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಕಾಮಗಾರಿ ಪ್ರದೇಶಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದು, ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದು ಮತ್ತು ಉತ್ತಮ ನಿರ್ವಹಣಾ ವ್ಯವಸ್ಥೆ ಅಳವಡಿಸಿಕೊಳ್ಳುವಂತೆಯೂ ನಿರ್ದೇಶನ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



