ರಾಜ್ಯ

ಬೆಂಗಳೂರು-ತುಮಕೂರು ಪ್ರಯಾಣಿಕರಿಗೆ ಗುಡ್ ನ್ಯೂಸ್: ಶೀಘ್ರದಲ್ಲೇ ಚತುಷ್ಪಥ ರೈಲು ಮಾರ್ಗ ಕಾಮಗಾರಿ ಆರಂಭ

ಬೆಂಗಳೂರು ಮತ್ತು ತುಮಕೂರು ನಡುವೆ ಸದ್ಯ ಕೇವಲ ಎರಡು ಪಥಗಳ ರೈಲ್ವೆ ಹಳಿ ಇರುವುದರಿಂದ ರೈಲುಗಳ ಸಂಚಾರ ವಿಳಂಬವಾಗುತ್ತಿದ್ದು, ಇದನ್ನು ನಾಲ್ಕು ಪಥಗಳ ರೈಲು ಮಾರ್ಗವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

ಬೆಂಗಳೂರು-ತುಮಕೂರು ಪ್ರಯಾಣಿಕರಿಗೆ ಗುಡ್ ನ್ಯೂಸ್: ಶೀಘ್ರದಲ್ಲೇ ಚತುಷ್ಪಥ ರೈಲು ಮಾರ್ಗ ಕಾಮಗಾರಿ ಆರಂಭ
ಕೇಂದ್ರ ಸಚಿವ ವಿ. ಸೋಮಣ್ಣ
Published On :

ತುಮಕೂರು: ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಬೆಂಗಳೂರು-ತುಮಕೂರು ನಡುವೆ ನಿತ್ಯ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಶನಿವಾರ ಸಿಹಿ ಸುದ್ದಿ ನೀಡಿದ್ದು, ಶೀಘ್ರದಲ್ಲೇ ಉಭಯ ನಗರಗಳ ನಡುವೆ ಚತುಷ್ಪಥ ರೈಲು ಮಾರ್ಗ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದ್ದಾರೆ.

ಬೆಂಗಳೂರು ಮತ್ತು ತುಮಕೂರು ನಡುವೆ ಸದ್ಯ ಕೇವಲ ಎರಡು ಪಥಗಳ ರೈಲ್ವೆ ಹಳಿ ಇರುವುದರಿಂದ ರೈಲುಗಳ ಸಂಚಾರ ವಿಳಂಬವಾಗುತ್ತಿದ್ದು, ಇದನ್ನು ನಾಲ್ಕು ಪಥಗಳ ರೈಲು ಮಾರ್ಗವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

ಬೆಂಗಳೂರು-ತುಮಕೂರು ನಡುವೆ ಚತುಷ್ಪಥ ರೈಲು ಮಾರ್ಗ ನಿರ್ಮಾಣದ ಪೂರ್ವ ಸಿದ್ಧತೆ ಕಾರ್ಯಗಳು ಚುರುಕಾಗಿವೆ ಎಂದು ಸೋಮಣ್ಣ ಹೇಳಿದ್ದಾರೆ.

ಈ ಉದ್ದೇಶಿತ ಬೃಹತ್ ಯೋಜನೆಗಾಗಿ ಈಗಾಗಲೇ ವಿಸ್ತೃತ ಯೋಜನಾ ವರದಿಯನ್ನು(DPR) ಸಲ್ಲಿಸಲಾಗಿದೆ. ಅಲ್ಲದೆ, ರೈಲ್ವೆ ಇಲಾಖೆಯ ಅತ್ಯುನ್ನತ ತಾಂತ್ರಿಕ ಸಮಿತಿಯು ಈ ವರದಿಯನ್ನು ಪರಿಶೀಲಿಸಿ ಅನುಮೋದನೆ ನೀಡಿದೆ. ಸದ್ಯ ಈ ಪ್ರಕ್ರಿಯೆಯು ರೈಲ್ವೆ ಮಂಡಳಿಯ ಅಂತಿಮ ಒಪ್ಪಿಗೆಯ ಹಂತದಲ್ಲಿದ್ದು, ಬೋರ್ಡ್ ಮುದ್ರೆ ಬೀಳುತ್ತಿದ್ದಂತೆ ಯೋಜನೆ ಅಧಿಕೃತವಾಗಿ ಕಾರ್ಯರೂಪಕ್ಕೆ ಬರಲಿದೆ ಎಂದು ಸಚಿವರು ತಿಳಿಸಿದರು.

ಅಂದಾಜು 6,000 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಈ ಚತುಷ್ಪಥ ರೈಲು ಮಾರ್ಗದ ಬೃಹತ್ ಮೂಲಸೌಕರ್ಯ ಕಾಮಗಾರಿ ನಡೆಯಲಿದೆ. ಯೋಜನೆಗೆ ಅಗತ್ಯವಿರುವ ಹೆಚ್ಚುವರಿ ಭೂಮಿಯನ್ನು ಗುರುತಿಸುವ ಕಾರ್ಯ ಭರದಿಂದ ಸಾಗುತ್ತಿದ್ದು, ಮುಂದಿನ ಐದಾರು ತಿಂಗಳುಗಳ ಅವಧಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯು ಸಹ ಅಧಿಕೃತವಾಗಿ ಆರಂಭವಾಗಲಿದೆ ಎಂದು ವಿ. ಸೋಮಣ್ಣ ಹೇಳಿದ್ದಾರೆ.

ಈ ನಾಲ್ಕು ಪಥಗಳ ಮಾರ್ಗ ಪೂರ್ಣಗೊಂಡರೆ, ಎಕ್ಸ್‌ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳು ಯಾವುದೇ ಸಿಗ್ನಲ್ ಕಾಯುವಿಕೆಯಿಲ್ಲದೆ ಸಂಚರಿಸಬಹುದಾಗಿದ್ದು, ಬೆಂಗಳೂರು-ತುಮಕೂರು ನಡುವಿನ ಪ್ರಯಾಣದ ಸಮಯ ಅರ್ಧಕ್ಕರ್ಧ ಕಡಿಮೆ ಆಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.