ರಾಜ್ಯ

ಭಟ್ಕಳದಲ್ಲಿ ತಡರಾತ್ರಿ ಹೈಡ್ರಾಮಾ: ಮುಸ್ಲಿಂ ಯುವಕನ ಪೊಲೀಸರಿಗೊಪ್ಪಿಸಿದ್ದ ಹಿಂದೂ ಮುಖಂಡರ ಮೇಲೆ ಕೇಸ್, ಪ್ರತಿಭಟನೆ..!

ಎಲ್ಲಿ ಹೋಗುತ್ತಿದ್ದಿರಾ? ಭಟ್ಕಳದಿಂದ ಸಾಗರದ ಕಾಡಿನ ಕಡೆ ಏನ್ ಕೆಲಸ ಎಂದು ಪ್ರಶ್ನೆ ಮಾಡಿದ್ದಾರೆ. ಮುಖಂಡರ ಪ್ರಶ್ನೆಗೆ ಸರಿಯಾದ ಉತ್ತರ ನೀಡದ ಹಿನ್ನೆಲೆ ಬುದ್ದಿ ಹೇಳುವಂತೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಭಟ್ಕಳದಲ್ಲಿ ತಡರಾತ್ರಿ ಹೈಡ್ರಾಮಾ: ಮುಸ್ಲಿಂ ಯುವಕನ ಪೊಲೀಸರಿಗೊಪ್ಪಿಸಿದ್ದ ಹಿಂದೂ ಮುಖಂಡರ ಮೇಲೆ ಕೇಸ್, ಪ್ರತಿಭಟನೆ..!
ಪೊಲೀಸ್ ಠಾಣೆ ಬಳಿ ಪ್ರತಿಭಟನೆ ನಡೆಸುತ್ತಿರುವುದು.
Published On :

ಉತ್ತರ ಕನ್ನಡ: ಭಟ್ಕಳದಲ್ಲಿ ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿ ಪ್ರಯಾಣಿಸುತ್ತಿದ್ದ ಕಾರನ್ನು ತಡೆದು ವಿಚಾರಣೆ ನಡೆಸಿದ ಘಟನೆ ಹೊಸ ವಿವಾದಕ್ಕೆ ಕಾರಣವಾಗಿದ್ದು, ಪ್ರಕರಣದಲ್ಲಿ ಹಿಂದೂ ಸಂಘಟನೆಗಳ ಮುಖಂಡರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದಕ್ಕೆ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿವೆ.

ಮಾಹಿತಿಯ ಪ್ರಕಾರ, ಬುಧವಾರ ಸಂಜೆ ಭಟ್ಕಳ-ಸಾಗರ ರಸ್ತೆಯಲ್ಲಿ ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದನು. ಇದರಿಂದ ಅನುಮಾನಗೊಂಡ ಹಿಂದೂ ಸಂಘಟನೆ ಮುಖಂಡರು, ಕಾರು ಅಡ್ಡಗಟ್ಟಿ ಪ್ರಶ್ನಸಿದ್ದಾರೆ.

ಎಲ್ಲಿ ಹೋಗುತ್ತಿದ್ದಿರಾ? ಭಟ್ಕಳದಿಂದ ಸಾಗರದ ಕಾಡಿನ ಕಡೆ ಏನ್ ಕೆಲಸ ಎಂದು ಪ್ರಶ್ನೆ ಮಾಡಿದ್ದಾರೆ. ಮುಖಂಡರ ಪ್ರಶ್ನೆಗೆ ಸರಿಯಾದ ಉತ್ತರ ನೀಡದ ಹಿನ್ನೆಲೆ ಬುದ್ದಿ ಹೇಳುವಂತೆ ಪೊಲೀಸರಿಗೆ ಒಪ್ಪಿಸಿದ್ದಾರೆ. ನಂತರ ಯುವತಿಯನ್ನು ಸುರಕ್ಷಿತವಾಗಿ ಭಟ್ಕಳದಲ್ಲಿರುವ ಆಕೆಯ ನಿವಾಸಕ್ಕೆ ಕಳುಹಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಕಾರು ತಡೆದಿದ್ದ ಹಿಂದೂ ಸಂಘಟನೆಗಳ ಮುಖಂಡರ ವಿರುದ್ಧವೇ ಇದೀಗ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಕ್ರೋಶಗಳು ವ್ಯಕ್ತವಾಗುತ್ತಿವೆ.

ಪೊಲೀಸರ ಕ್ರಮವನ್ನು ವಿರೋಧಿಸಿ ನೂರಾರು ಹಿಂದೂ ಕಾರ್ಯಕರ್ತರು ಭಟ್ಕಳ ನಗರ ಪೊಲೀಸ್ ಠಾಣೆ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು.

ಯಾವುದೇ ಹಲ್ಲೆ ಅಥವಾ ಅಹಿತಕರ ಘಟನೆ ನಡೆದಿಲ್ಲ. ಯುವತಿಯನ್ನು ಕುಟುಂಬಕ್ಕೆ ಒಪ್ಪಿಸಿ, ಯುವಕನನ್ನು ಪೊಲೀಸರಿಗೆ ಹಸ್ತಾಂತರಿಸಿದ್ದರೂ ಪ್ರಕರಣ ದಾಖಲಿಸಿರುವುದು ಏಕೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ಇನ್ನೊಂದೆಡೆ, ಭಟ್ಕಳ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ತಕ್ಷಣ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಎಲ್ಲಾ ಆಯಾಮಗಳ ಬಗ್ಗೆ ತನಿಖೆ ಮುಂದುವರಿದಿದ್ದು, ಯುವಕ-ಯುವತಿಯ ನಡುವಿನ ಸಂಬಂಧ ಅಥವಾ ಎಫ್‌ಐಆರ್‌ನಲ್ಲಿರುವ ಆರೋಪಗಳ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಪ್ರಸ್ತುತ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟಿರುವ ಪೊಲೀಸರು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.