ಕರ್ನಾಟಕ ವಿಧಾನ ಪರಿಷತ್ ಚುನಾವಣೆ: 7ರಲ್ಲಿ 5 ಸ್ಥಾನ ಕಾಂಗ್ರೆಸ್ ಪಾಲು, ಬಿಜೆಪಿಗೆ 2, ಜೆಡಿಎಸ್‌ಗೆ ಅಡ್ಡ ಮತದಾನದ ಆಘಾತ
ಚುನಾವಣೆಯಲ್ಲಿ ಎನ್ ಡಿಎ ಮೈತ್ರಿ ಪಕ್ಷ ಜೆಡಿಎಸ್ ಗೆ ಭಾರಿ ಆಘಾತ ಎದುರಾಗಿದ್ದು, ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಏಕೈಕ ಅಭ್ಯರ್ಥಿ ಸೋಲುಂಡಿದ್ದಾರೆ.

ಬೆಂಗಳೂರು: ಭಾರಿ ಕುತೂಹಲ ಮೂಡಿಸಿದ್ದ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು ಅಡ್ಡ ಮತದಾನ ಆರೋಪಗಳ ನಡುವೆಯೇ ಕಾಂಗ್ರೆಸ್ 5, ಬಿಜೆಪಿಗೆ ತೆಕ್ಕೆಗೆ 2 ಸ್ಥಾನ ಲಭಿಸಿವೆ.
ಕರ್ನಾಟಕ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿದೆ.
ಬಿಜೆಪಿ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಜೆಡಿಎಸ್‌ನ ಏಕೈಕ ಅಭ್ಯರ್ಥಿ ಕಾಂಗ್ರೆಸ್‌ನ ಐದನೇ ಅಭ್ಯರ್ಥಿಯ ವಿರುದ್ಧದ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಸೋಲು ಕಂಡಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಶಾಸಕರ ಅಡ್ಡ ಮತದಾನ ಕಾಂಗ್ರೆಸ್‌ಗೆ ಲಾಭವಾಗಿರುವುದು ಫಲಿತಾಂಶದ ಪ್ರಮುಖ ಅಂಶವಾಗಿ ಹೊರಹೊಮ್ಮಿದೆ.
ಅಧಿಕೃತ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್‌ಗೆ 135 ಶಾಸಕರ ಬಲವಿದ್ದರೂ, ಪಕ್ಷವು ಒಟ್ಟು 151 ಮತಗಳನ್ನು ಪಡೆದು ತನ್ನ ಸಂಖ್ಯಾಬಲಕ್ಕಿಂತ 16 ಮತಗಳನ್ನು ಹೆಚ್ಚುವರಿಯಾಗಿ ಗಳಿಸಿದೆ. ಕಾಂಗ್ರೆಸ್‌ನ ಐವರು ಅಭ್ಯರ್ಥಿಗಳು ಮೊದಲ ಸುತ್ತಿನಲ್ಲೇ ಆಯ್ಕೆಯಾಗಿದ್ದಾರೆ.
ಬಿಜೆಪಿಗೆ 64 ಶಾಸಕರ ಬಲವಿದ್ದರೂ, ಅದರ ಇಬ್ಬರು ಅಭ್ಯರ್ಥಿಗಳು ಒಟ್ಟಾರೆ 56 ಮತಗಳನ್ನು ಮಾತ್ರ ಪಡೆದಿದ್ದು, ಪಕ್ಷಕ್ಕೆ ಎಂಟು ಮತಗಳ ಕೊರತೆ ಉಂಟಾಗಿದೆ. ಬಿಜೆಪಿ ಅಭ್ಯರ್ಥಿ ಲಿಂಗರಾಜ ಪಾಟೀಲ್ ಅವರಿಗೆ ನಿಗದಿಪಡಿಸಿದ್ದ 30 ಮತಗಳ ಬದಲಿಗೆ 27 ಮತಗಳು ಲಭಿಸಿದ್ದರೆ, ರಘು ಕೆ. ಅವರಿಗೆ ಅಗತ್ಯ ಕೋಟಾದಿಂದ ಒಂದು ಮತ ಕಡಿಮೆಯಾಗಿ 29 ಮತಗಳು ಬಂದಿವೆ.
ಜೆಡಿಎಸ್‌ಗೆ 18 ಶಾಸಕರಿದ್ದರೂ, ಅದರ ಅಭ್ಯರ್ಥಿಗೆ ಕೇವಲ 14 ಮತಗಳು ಮಾತ್ರ ದೊರೆತಿವೆ. ಎನ್‌ಡಿಎ ಮೈತ್ರಿ ಒಪ್ಪಂದದ ಭಾಗವಾಗಿ ಬಿಜೆಪಿ ತನ್ನ ಮೂವರು ಶಾಸಕರ ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ನೀಡಲು ನಿರ್ಧರಿಸಿತ್ತು. ಹೀಗಾಗಿ ಜೆಡಿಎಸ್ ಅಭ್ಯರ್ಥಿಗೆ ಒಟ್ಟು 21 ಮತಗಳು ಸಿಗಬೇಕಾಗಿತ್ತು. ಆದರೆ ಅಂತಿಮವಾಗಿ ಅವರಿಗೆ ಕೇವಲ 14 ಮತಗಳು ಮಾತ್ರ ಲಭಿಸಿದ್ದು, ಏಳು ಮತಗಳ ಕೊರತೆ ಕಂಡುಬಂದಿದೆ.
ಯಾರಿಗೆಷ್ಟು ಮತಗಳು?
ಕಾಂಗ್ರೆಸ್ ಪಕ್ಷ
ಬಿ.ಕೆ. ಹರಿಪ್ರಸಾದ್ -30 ಮತಗಳು, ತಿಪ್ಪಣ್ಣಪ್ಪ ಕಮಕನೂರು-30 ಮತಗಳು, ಪಿ.ವಿ.ಮೋಹನ್-29 ಮತಗಳು, ಬಿ.ಎಸ್.ಶಿವಣ್ಣ-30 ಮತಗಳು ಮತ್ತು 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ಗೆ 32 ಮತಗಳು ಲಭಿಸಿವೆ ಎಂದು ತಿಳಿದುಬಂದಿದೆ.
ಇತ್ತ ಬಿಜೆಪಿಯ ಅಭ್ಯರ್ಥಿಗಳಾದ ಆರ್.ರಘುಗೆ 29 ಮತಗಳು ಮತ್ತು ಲಿಂಗರಾಜು ಪಾಟೀಲ್ಗೆ 27 ಮತಗಳು ಲಭಿಸಿವೆ. ಅಂತೆಯೇ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜುಗೆ 14 ಮತಗಳನ್ನು ಪಡೆದಿದ್ದಾರೆ.
ಅಡ್ಡಮತದಾನ
ಮತ ಎಣಿಕೆ ಮುಗಿದ ಬಳಿಕ "ಎನ್‌ಡಿಎಯ 12 ಮತಗಳು ಎಲ್ಲಿಗೆ ಹೋದವು?" ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಯಿತು. ಈ ಕುರಿತು ಪ್ರತಿಕ್ರಿಯಿಸಿದ ಕರ್ನಾಟಕ ಬಿಜೆಪಿ, ಅಡ್ಡ ಮತದಾನ ಮಾಡಿದವರು ಯಾರೆಂಬುದು ಶೀಘ್ರದಲ್ಲೇ ತಿಳಿಯಲಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಎನ್‌ಡಿಎ ಮೈತ್ರಿಕೂಟದ ಒಟ್ಟು ಕೊರತೆ 12 ಮತಗಳಾಗಿದ್ದು, ಅದರಲ್ಲಿ ಬಿಜೆಪಿಯಿಂದ ಎಂಟು ಮತ್ತು ಜೆಡಿಎಸ್‌ನಿಂದ ನಾಲ್ಕು ಮತಗಳು ಕಡಿಮೆಯಾಗಿವೆ. ಈ ಮತಗಳಲ್ಲಿ ಎಷ್ಟು ಕಾಂಗ್ರೆಸ್ ಪರ ಅಡ್ಡ ಮತದಾನವಾಗಿವೆ ಮತ್ತು ಎಷ್ಟು ಮತಗಳು ಅಮಾನ್ಯಗೊಂಡಿವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಚುನಾವಣಾಧಿಕಾರಿಗಳಿಂದ ಅಧಿಕೃತ ವಿವರ ನಿರೀಕ್ಷಿಸಲಾಗಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಡ್ಡ ಮತದಾನದ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. "ಕೆಲವರು ತಮ್ಮ ಆತ್ಮಸಾಕ್ಷಿಯ ಮತ ಚಲಾಯಿಸಿರಬಹುದು. ಬಿಜೆಪಿ ಮತ್ತು ಜೆಡಿಎಸ್ ಮಾಡುತ್ತಿರುವ ಆರೋಪಗಳು ಅವರ ನಿರಾಶೆಯನ್ನು ಪ್ರತಿಬಿಂಬಿಸುತ್ತವೆ" ಎಂದು ಅವರು ಹೇಳಿದರು.
ಬಿಜೆಪಿಯಿಂದ ಉಚ್ಛಾಟನೆಗೊಂಡಿದ್ದ ಶಿವರಾಮ ಹೆಬ್ಬಾರ್ ಮತ್ತು ಎಸ್.ಟಿ. ಸೋಮಶೇಖರ್ ಅವರಿಗೆ ಕಾಂಗ್ರೆಸ್ ಅವಕಾಶ ನೀಡಿದ್ದು, ಅವರು ತಮ್ಮ ಆತ್ಮಸಾಕ್ಷಿಯಂತೆ ಮತ ಚಲಾಯಿಸಿದ್ದಾರೆ ಎಂದು ಶಿವಕುಮಾರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



