'ನಮ್ಮದು ಅಂಬೇಡ್ಕರ್ ರಕ್ತ; ಭಯಪಡುವ ಜಾಯಮಾನ ನನ್ನದಲ್ಲ': ರಮೇಶ್ ಜಿಗಜಿಣಗಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು!
ನಾನು ಬಾಬಾ ಸಾಹೇಬರ ಸಿದ್ಧಾಂತದವನು. ಪ್ರಶ್ನಿಸುವ ಧೈರ್ಯ ಮತ್ತು ವೈಚಾರಿಕತೆ ಅವರಿಂದಲೇ ಬಂದಿರುವುದು. ಬಾಬಾ ಸಾಹೇಬರನ್ನು ನಂಬಿದವರಿಗೆ ಭಯ ಇಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಬೆಂಗಳೂರು: ದಲಿತ ವ್ಯಕ್ತಿಗೆ ಆರ್ ಎಸ್ ಎಸ್ ಉಸಾಬರಿ ಯಾಕೆ? ಆರ್ ಎಸ್ ಎಸ್ ತಂಟೆಗೆ ಬಂದವರು ಉಳಿದಿಲ್ಲ ಎಂಬ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಹೇಳಿಕೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಅನುಯಾಯಿಯಾಗಿ ಯಾರಿಗೂ ಭಯಪಡುವುದಿಲ್ಲ ಎಂದಿದ್ದಾರೆ.
ರಮೇಶ್ ಜಿಗಜಿಣಗಿ ಕುರಿತ ಹೇಳಿಕೆ ಕುರಿತು ಎಕ್ಸ್ ಪೋಸ್ಟ್ ನಲ್ಲಿ ಉತ್ತರಿಸಿರುವ ಪ್ರಿಯಾಂಕ್ ಖರ್ಗೆ, ಜಿಗಜಣಗಿ ಅವರ ಪ್ರಶ್ನೆಯನ್ನು ವಿವಿಧ ಆಯಾಮಗಳಿಂದ ವಿಮರ್ಶಿಸಬೇಕಾಗಿದೆ. ದಲಿತ ಸಮುದಾಯದವರೇ ಆಗಿರುವ ರಮೇಶ್ ಜಿಗಜಿಣಗಿಯವರಿಗೆ ಆರ್ ಎಸ್ ಎಸ್ ಗರ್ಭಗುಡಿಯೊಳಗೆ ಪ್ರವೇಶ ಸಿಗದಿರುವ ಹತಾಶೆಯ ಮಾತೇ? ಎಂದು ಪ್ರಶ್ನಿಸಿದ್ದಾರೆ.
ದಲಿತರಿಗೆ ಆರ್ ಎಸ್ ಎಸ್ ವಿಷಯ ಯಾಕೆ ಬೇಕು ಎಂಬ ರಮೇಶ್ ಜಿಗಜಿಣಗಿಯವರು ನನಗೆ ಹೇಳಿರುವ ಮತ್ತು ಕೇಳಿರುವ ಪ್ರಶ್ನೆಗೆ ಉತ್ತರ ಎಂದು ಅವರು ಬರೆದುಕೊಂಡಿದ್ದು, ಶ್ರೇಣಿಕೃತ ವ್ಯವಸ್ಥೆಯ ಮೂಲಭೂತವಾದವನ್ನು ನಂಬಿರುವ ಆರ್ ಎಸ್ ಎಸ್ ಸಹವಾಸಕ್ಕೆ ದಲಿತರು ಹೋಗಬೇಡಿ ಎಂದ ಎಚ್ಚರಿಕೆಯ ಮಾತುಗಳೇ? ಎಂದಿದ್ದಾರೆ.
ಸಮಾಜದಲ್ಲಿ ಶ್ರೇಷ್ಟತೆ ಭಾವನೆ ಹೊಂದಿರುವ ಜನರ ಹಿತಾಸಕ್ತಿ ಕಾಯಲು ರೂಪುಗೊಂಡಿರುವ ಆರ್ ಎಸ್ ಎಸ್ ಅನ್ನು ಪ್ರಶ್ನೆ ಮಾಡಲು ದಲಿತನಾಗಿ ನಿನಗೆ ಅರ್ಹತೆ ಇಲ್ಲ ಎಂದು ನನಗೆ ಹೇಳಿರುವ ಕುಹುಕುದ ಮಾತುಗಳೇ? ಆರ್ ಎಸ್ ಎಸ್ ನಂತಹ ವ್ಯವಸ್ಥೆಯನ್ನು ಸಂವಿಧಾನದ ಹಾದಿಗೆ ತರಲು ದಲಿತರಿಗೆ ಸಾಧ್ಯವಿಲ್ಲ ಎಂಬ ಹತಾಶೆಯ ಮಾತುಗಳೇ? ಎಂದು ಪ್ರಶ್ನಿಸಿದ್ದಾರೆ. ಈ ಬೆದರಿಕೆ ಹಿಂದಿರುವ ಕಾರಣಗಳೇನು? ಯಾರು ಉಳಿದಿಲ್ಲ ಎಂದರೆ ಏನರ್ಥ, ಆರ್ ಎಸ್ ಎಸ್ ಭಯೋತ್ಪಾದಕ ಸಂಘಟನೆಯೇ? ಪ್ರಶ್ನಿಸುವವರನ್ನು ಮುಗಿಸುತ್ತದೆಯೇ ಎಂದು ಕೇಳಿದ್ದಾರೆ.
ನಾನು ಬಾಬಾ ಸಾಹೇಬರ ಸಿದ್ಧಾಂತದವನು. ಪ್ರಶ್ನಿಸುವ ಧೈರ್ಯ ಮತ್ತು ವೈಚಾರಿಕತೆ ಅವರಿಂದಲೇ ಬಂದಿರುವುದು. ಬಾಬಾ ಸಾಹೇಬರನ್ನು ನಂಬಿದವರಿಗೆ ಭಯ ಇಲ್ಲ. ನಾನು ಸಂವಿಧಾನದ ರಕ್ಷಣೆಯ ನೆರಳಿನಲ್ಲಿರುವವನು. ಸಂವಿಧಾನದಡಿಯಲ್ಲಿ ಮಾನ್ಯತೆಯೇ ಇಲ್ಲದವರಿಗೆ ಭಯಪಡುವ ಜಾಯಮಾನ ನನ್ನದಲ್ಲ ಎಂದು ತಿರುಗೇಟು ನೀಡಿದ್ದಾರೆ. ನಾನು ಅಂಜುವುದು ನೈತಿಕತೆಗೆ ಹೊರತು, ಬೆದರಿಕೆಗಳಿಗಲ್ಲ, ಏಕೆಂದರೆ ನಮ್ಮದು ಅಂಬೇಡ್ಕರ್ ರಕ್ತ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


