"BDA, BMRDA ವ್ಯಾಪ್ತಿ ರಹಿತ ಬೆಂಗಳೂರು ಸಚಿವರ ನೇಮಕಕ್ಕೆ ವಿರೋಧ: ಸಂಸದ Tejasvi Surya ಕಚೇರಿಯಿಂದ ಅಭಿಯಾನ
ಅಭಿಯಾನದ ಬಗ್ಗೆ ಘೋಷಿಸಿದ ಸೂರ್ಯ, ಬೆಂಗಳೂರಿಗೆ ಸಂಪೂರ್ಣ ಜವಾಬ್ದಾರಿಯುತ ಸಚಿವರನ್ನು ನೇಮಿಸುವವರೆಗೆ ತಮ್ಮ ಕಚೇರಿಯು ಪ್ರತಿದಿನ ಸಾಮಾಜಿಕ ಮಾಧ್ಯಮಗಳ ಮೂಲಕ ಮುಖ್ಯಮಂತ್ರಿಗಳಿಗೆ ನೆನಪೋಲೆಯನ್ನು ಕಳುಹಿಸಲಿದೆ ಎಂದು ಸಂಸದರು ಹೇಳಿದ್ದಾರೆ.

ಬೆಂಗಳೂರು: ಕರ್ನಾಟಕ ಸರ್ಕಾರ, ಬೆಂಗಳೂರು ನಗರಕ್ಕೆ ಸಂಪೂರ್ಣ ಅಧಿಕಾರವಿರುವ ಒಬ್ಬರೇ 'ಬೆಂಗಳೂರು ಅಭಿವೃದ್ಧಿ ಸಚಿವ'ರನ್ನು ನೇಮಿಸಬೇಕು ಎಂದು ಆಗ್ರಹಿಸಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಸೋಮವಾರ ಅಭಿಯಾನವೊಂದನ್ನು ಪ್ರಾರಂಭಿಸಿದ್ದಾರೆ.
ಸರ್ಕಾರದೊಳಗಿನ ಆಂತರಿಕ ಜಗಳದಿಂದಾಗಿ, ಮೂಲಸೌಕರ್ಯ ಮತ್ತು ನಾಗರಿಕ ಸಮಸ್ಯೆಗಳಿಂದ ಕಂಗಾಲಾಗಿರುವ ಬೆಂಗಳೂರಿಗೆ ಜವಾಬ್ದಾರಿಯುತ ನಾಯಕತ್ವ ಇಲ್ಲದಂತಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಕಳವಳ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ತೇಜಸ್ವಿ ಸೂರ್ಯ, ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು 15 ದಿನಗಳೇ ಕಳೆದಿದ್ದರೂ, ಬೆಂಗಳೂರು ನಗರದ ಅಭಿವೃದ್ಧಿಗೆ ಸಂಪೂರ್ಣ ಜವಾಬ್ದಾರರಾಗಿರುವ ಒಬ್ಬ ಸಚಿವರನ್ನು ನೇಮಿಸಿಲ್ಲ.
ಮುಖ್ಯಮಂತ್ರಿಗಳು ಬಿಡಿಎ (BDA) ಮತ್ತು ಬಿಎಂಆರ್‌ಡಿಎ (BMRDA) ಸಂಸ್ಥೆಗಳ ನೇರ ನಿಯಂತ್ರಣವನ್ನು ತಮ್ಮ ಬಳಿಯೇ ಇಟ್ಟುಕೊಂಡು, ಬೆಂಗಳೂರು ಉಸ್ತುವಾರಿ ಸಚಿವರಿಗೆ ಕೇವಲ ಜಿಬಿಎ (GBA) ಮತ್ತು ಇನ್ನೂ ಕಾರ್ಯಾರಂಭ ಮಾಡದ ಐದು ನಿಗಮಗಳ ಜವಾಬ್ದಾರಿಯನ್ನು ನೀಡಿರುವುದು ವಿಚಿತ್ರವಾಗಿದೆ ಎಂದು ತಿಳಿಸಿದರು.
ಇದು ಯಾರಿಗಾದರೂ ಕಾರು ಚಲಾಯಿಸಲು ಕೊಟ್ಟು, ಅದರ ಇಂಜಿನ್ ನ್ನು ತಾವೇ ಇಟ್ಟುಕೊಂಡ ಹಾಗೆ. ಬೆಂಗಳೂರಿನ ಯೋಜನೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಅತ್ಯಂತ ಪ್ರಮುಖವಾಗಿರುವ ಬಿಡಿಎ ಮತ್ತು ಬಿಎಂಆರ್‌ಡಿಎ ಸಂಸ್ಥೆಗಳನ್ನು ಮುಖ್ಯಮಂತ್ರಿಗಳು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಇನ್ನು ಕಾರ್ಯರೂಪಕ್ಕೆ ಬಾರದ ಸಂಸ್ಥೆಗಳ ಜವಾಬ್ದಾರಿಯನ್ನು ಬೆಂಗಳೂರು ಸಚಿವರಿಗೆ ನೀಡಿದ್ದಾರೆ. ಹೀಗಾದರೆ ಆ ಸಚಿವರು ಹೇಗೆ ತಾನೇ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯ?" ಎಂದು ತೇಜಸ್ವಿ ಸೂರ್ಯ ಪ್ರಶ್ನಿಸಿದರು.
ಇದು ಯಾವುದೇ ವೈಯಕ್ತಿಕ ವಿಷಯವಲ್ಲ, ಬದಲಿಗೆ ಇದು ಆಡಳಿತ, ಹೊಣೆಗಾರಿಕೆ ಮತ್ತು ಸ್ಪಷ್ಟತೆಯ ವಿಷಯ ಎಂದು ಸಂಸದ ತೇಜಸ್ವಿ ಸೂರ್ಯ ಸ್ಪಷ್ಟಪಡಿಸಿದ್ದಾರೆ.
"ಮುಖ್ಯಮಂತ್ರಿಗಳು ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ ಅಥವಾ ಬೇರೆ ಯಾರನ್ನಾದರೂ ನೇಮಿಸಲಿ, ಅದು ಅವರ ವಿವೇಚನೆಗೆ ಬಿಟ್ಟಿದ್ದು. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಬೆಂಗಳೂರಿನ ಬಗ್ಗೆ ಗಮನಹರಿಸಲು ಒಬ್ಬ ಶಕ್ತಿಶಾಲಿ ಸಚಿವರ ಅಗತ್ಯವಿದೆ, ಆಗ ಮಾತ್ರ ಜನ ಅವರನ್ನು ಪ್ರಶ್ನಿಸಲು ಸಾಧ್ಯವಾಗುತ್ತದೆ. ಮುಖ್ಯಮಂತ್ರಿಗಳು ಮತ್ತು ಬೆಂಗಳೂರು ಸಚಿವರ ನಡುವೆ ಜವಾಬ್ದಾರಿಗಳನ್ನು ಹಂಚುವುದರಿಂದ ಗೊಂದಲ ಉಂಟಾಗುತ್ತದೆ ಮತ್ತು ಆಡಳಿತ ಕುಂಠಿತಗೊಳ್ಳುತ್ತದೆ" ಎಂದು ಅವರು ಹೇಳಿದರು.
ಇತ್ತೀಚಿನ ಮಳೆಯಿಂದಾಗಿ ಬೆಂಗಳೂರಿನ ಹಲವು ಭಾಗಗಳಲ್ಲಿ ಪ್ರವಾಹ, ಕಾಂಪೌಂಡ್ ಗೋಡೆ ಕುಸಿತ ಮತ್ತು ರಸ್ತೆಗಳು ಹಾಳಾಗಿರುವ ಉದಾಹರಣೆಗಳನ್ನು ನೀಡಿದ ಸಂಸದರು, ಮೆಟ್ರೋ ಸೇರಿದಂತೆ ದೊಡ್ಡ ಮೂಲಸೌಕರ್ಯ ಯೋಜನೆಗಳು ತಡವಾಗುತ್ತಿರುವುದನ್ನು ಪ್ರಸ್ತಾಪಿಸಿದರು.
ಬೆಂಗಳೂರಿನ ಪ್ರತಿಯೊಂದು ಮೆಟ್ರೋ ಯೋಜನೆಯೂ ತಡವಾಗುತ್ತಿದೆ. ಪ್ರಮುಖ ಮೆಟ್ರೋ ಮಾರ್ಗಗಳು ಯಾವಾಗ ಆರಂಭವಾಗುತ್ತವೆ ಎಂಬ ಸ್ಪಷ್ಟತೆ ಇಲ್ಲ. ವಿಮಾನ ನಿಲ್ದಾಣದ ಮೆಟ್ರೋ ಮಾರ್ಗದ ಕೆಲಸ ಸ್ಥಗಿತಗೊಂಡಿದೆ. ವಿಧಾನಸೌಧದ ಸುತ್ತಮುತ್ತಲಿನ ರಸ್ತೆಗಳಲ್ಲೇ ಗುಂಡಿಗಳು ಬಿದ್ದಿವೆ. ಇಂತಹ ಸಮಯದಲ್ಲಿ ಬೆಂಗಳೂರು ನಗರ ಆಡಳಿತದ ನಿರಾಸಕ್ತಿಯನ್ನು ಸಹಿಸಲು ಸಾಧ್ಯವಿಲ್ಲ.
ಬಿಡಿಎ ಸಂಸ್ಥೆಯು ಬೆಂಗಳೂರಿನ ಪ್ರಮುಖ ಯೋಜನೆಗಳನ್ನು ನಿಯಂತ್ರಿಸಿದರೆ, ಬಿಎಂಆರ್‌ಡಿಎ ಸಂಸ್ಥೆಯು ನಗರದ ಸುತ್ತಮುತ್ತ ವೇಗವಾಗಿ ಬೆಳೆಯುತ್ತಿರುವ ಪ್ರದೇಶಗಳ ಅಭಿವೃದ್ಧಿಯನ್ನು ನೋಡಿಕೊಳ್ಳುತ್ತದೆ ಎಂದು ಸಂಸದರು ವಿವರಿಸಿದರು.
"ಬಿಡಿಎ ಮತ್ತು ಬಿಎಂಆರ್‌ಡಿಎ ಸಂಸ್ಥೆಗಳು ಬೆಂಗಳೂರು ಸಚಿವರ ಅಡಿಯಲ್ಲಿ ಬರದಿದ್ದರೆ, ಅವರು ನಗರದ ಅಭಿವೃದ್ಧಿಯ ಬಗ್ಗೆ ಹೇಗೆ ತಾನೇ ಪೂರ್ಣ ಪರಿಶೀಲನೆ ನಡೆಸಲು ಸಾಧ್ಯ? ಪ್ರಮುಖ ಅಧಿಕಾರಗಳೇ ಬೇರೆ ಬೇರೆ ಕಡೆ ಹಂಚಿಹೋಗಿರುವಾಗ, ಸಚಿವರನ್ನು ಜನರು ಹೇಗೆ ಹೊಣೆಗಾರರನ್ನಾಗಿ ಮಾಡಲು ಸಾಧ್ಯ?" ಎಂದು ತೇಜಸ್ವಿ ಸೂರ್ಯ ಪ್ರಶ್ನಿಸಿದ್ದಾರೆ.
ಸಂಸದರ ಕಚೇರಿಯಿಂದ ಅಭಿಯಾನ
ಅಭಿಯಾನದ ಬಗ್ಗೆ ಘೋಷಿಸಿದ ಸೂರ್ಯ, ಬೆಂಗಳೂರಿಗೆ ಸಂಪೂರ್ಣ ಜವಾಬ್ದಾರಿಯುತ ಸಚಿವರನ್ನು ನೇಮಿಸುವವರೆಗೆ ತಮ್ಮ ಕಚೇರಿಯು ಪ್ರತಿದಿನ ಸಾಮಾಜಿಕ ಮಾಧ್ಯಮಗಳ ಮೂಲಕ ಮುಖ್ಯಮಂತ್ರಿಗಳಿಗೆ ನೆನಪೋಲೆಯನ್ನು ಕಳುಹಿಸಲಿದೆ.
ಮುಂಗಾರು ಮಳೆ ಆರಂಭವಾಗುವ ಮುನ್ನ ಬೆಂಗಳೂರಿಗೆ ಸರಿಯಾದ ನಾಯಕತ್ವ ಮತ್ತು ತುರ್ತು ಕ್ರಮಗಳ ಅಗತ್ಯವಿದೆ. ಜನರ ಸಮಸ್ಯೆಗಳನ್ನು ಆಲಿಸಲು ಒಬ್ಬ ಸಚಿವರೇ ಇಲ್ಲದಿದ್ದರೆ, ಸಾರ್ವಜನಿಕರು ಪರಿಹಾರಕ್ಕಾಗಿ ಯಾರನ್ನು ಸಂಪರ್ಕಿಸಬೇಕು?" ಎಂದು ತೇಜಸ್ವಿ ಸೂರ್ಯ ಪ್ರಶ್ನಿಸಿದರು.
ಸರ್ಕಾರ ತಕ್ಷಣವೇ ಈ ಗೊಂದಲವನ್ನು ಬಗೆಹರಿಸಿ, ಆಂತರಿಕ ರಾಜಕೀಯ ಭಿನ್ನಾಭಿಪ್ರಾಯಗಳಿಂದ ಬೆಂಗಳೂರಿನ ಅಭಿವೃದ್ಧಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




