ಬೆಂಗಳೂರಿನಲ್ಲಿ ಒಂದೇ ದಿನ ಆರು ಭೀಕರ ಅಪಘಾತ: 3 ವರ್ಷದ ಮಗು ಸೇರಿ 8 ಮಂದಿ ದುರ್ಮರಣ
ಅತಿವೇಗ, ನಿರ್ಲಕ್ಷ್ಯ ಚಾಲನೆ, ರಸ್ತೆ ಗುಂಡಿಗಳು ಹಾಗೂ ಸಂಚಾರ ನಿಯಮ ಉಲ್ಲಂಘನೆಗಳು ಈ ದುರಂತಗಳಿಗೆ ಪ್ರಮುಖ ಕಾರಣಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಭವಿಸಿದ ಆರು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಮೂರು ವರ್ಷದ ಬಾಲಕ ಸೇರಿದಂತೆ ಒಟ್ಟು ಎಂಟು ಮಂದಿ ಮೃತಪಟ್ಟಿರುವ ದುರ್ಘಟನೆಗಳು ವರದಿಯಾಗಿವೆ.
ಅತಿವೇಗ, ನಿರ್ಲಕ್ಷ್ಯ ಚಾಲನೆ, ರಸ್ತೆ ಗುಂಡಿಗಳು ಹಾಗೂ ಸಂಚಾರ ನಿಯಮ ಉಲ್ಲಂಘನೆಗಳು ಈ ದುರಂತಗಳಿಗೆ ಪ್ರಮುಖ ಕಾರಣಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸರ್ಜಾಪುರ-ಅತ್ತಿಬೆಲೆ ರಸ್ತೆಯ ಎಂಆರ್‌ಪಿಎಲ್ ಪೆಟ್ರೋಲ್ ಬಂಕ್ ಸಮೀಪ ಬುಧವಾರ ಬೆಳಿಗ್ಗೆ ನಡೆದ ಅಪಘಾತದಲ್ಲಿ ಮೂರು ವರ್ಷದ ಬಾಲಕ ಇಝಾ ಆದಿಲ್ ಮೃತಪಟ್ಟಿದ್ದು, ಆತನ ತಾಯಿ ಶಹೀಬಾ ಗಂಭೀರವಾಗಿ ಗಾಯಗೊಂಡಿದ್ದಾರೆ.
ನೆರೆಮನೆಯವರ ಸ್ಕೂಟರ್‌ನಲ್ಲಿ ಮಗನೊಂದಿಗೆ ತೆರಳುತ್ತಿದ್ದ ವೇಳೆ ಸರಕು ಸಾಗಣೆ ಆಟೋ ಏಕಾಏಕಿ ಪೆಟ್ರೋಲ್ ಬಂಕ್ ಕಡೆ ತಿರುಗಿದ ಪರಿಣಾಮ ಸ್ಕೂಟರ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ತೀವ್ರ ತಲೆಗಾಯಗೊಂಡ ತಾಯಿ-ಮಗನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಸಂಬಂಧ ಆಟೋ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಮತ್ತೊಂದು ಭೀಕರ ಅಪಘಾತದಲ್ಲಿ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯ ದೊಡ್ಡ ಹುಲ್ಲೂರು ಸೇತುವೆ ಬಳಿ ಮರ್ಸಿಡಿಸ್ ಬೆಂಜ್ ಕಾರು ನಿಯಂತ್ರಣ ತಪ್ಪಿ ಕಾಂಕ್ರೀಟ್ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.
ಬಾಣಸವಾಡಿಯ ಶಾಜಿಯಾ ಸ್ಥಳದಲ್ಲೇ ಮೃತಪಟ್ಟರೆ, ಕಾರು ಚಾಲಕ ಹಾಗೂ ಸೆಕೆಂಡ್ ಹ್ಯಾಂಡ್ ಕಾರು ವ್ಯಾಪಾರಿಯಾಗಿದ್ದ ರಿಜ್ವಾನ್ ಅವರ ಮೃತದೇಹ ಸೇತುವೆ ಕೆಳಗಿನ ನೀರಿನ ಪ್ರದೇಶದಲ್ಲಿ ಪತ್ತೆಯಾಗಿದೆ. ಡಿಕ್ಕಿಯ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಕೆಂಗೇರಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.
ಮೈಸೂರು ರಸ್ತೆಯ ಚಳ್ಳಘಟ್ಟದ ಆರ್‌ಆರ್ ಡೆಂಟಲ್ ಕಾಲೇಜು ಸಮೀಪ ದ್ವಿಚಕ್ರ ವಾಹನ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕೇರಳ ಮೂಲದ ಅಂತಿಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳಾದ ಅತುಲ್ ಸಿಬಿ ಮತ್ತು ಗೌರಿ ಶಂಕರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಮೈಸೂರು ರಸ್ತೆಯ ಮೈಲಸಂದ್ರ ಗೇಟ್ ಬಳಿ ಅತಿವೇಗದಲ್ಲಿ ಚಲಿಸುತ್ತಿದ್ದ ಕಾರು ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ 45 ವರ್ಷದ ಸುಖದೇವ್ ಎಂಬುವವರು ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಇನ್ನೂ ಆರು ಮಂದಿ ಗಾಯಗೊಂಡಿದ್ದಾರೆ.
ವೈಟ್‌ಫೀಲ್ಡ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ದಾಪುರದ ಮೀನಾಕ್ಷಿ ಲೇಔಟ್ ಬಳಿ ರಸ್ತೆ ಗುಂಡಿಯನ್ನು ತಪ್ಪಿಸಲು ಯತ್ನಿಸಿದ ಮಹಿಳೆಯೊಬ್ಬರು ಬಸ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.
42 ವರ್ಷದ ಕಾಂತಾ ಅವರು ತಮ್ಮ ಪುತ್ರಿ ನೇಹಾಳನ್ನು ಕಾಲೇಜಿಗೆ ಬಿಡಲು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ನೀರು ತುಂಬಿದ್ದ ಗುಂಡಿಯನ್ನು ತಪ್ಪಿಸಲು ಯತ್ನಿಸಿ ಸ್ಕಿಡ್ ಆಗಿ ಬಿದ್ದಿದ್ದಾರೆ. ಈ ವೇಳೆ ಹಿಂಬದಿಯಿಂದ ಬರುತ್ತಿದ್ದ ಶಾಲಾ ಬಸ್ ಅವರ ಮೇಲೆ ಹರಿದ ಪರಿಣಾಮ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಪುತ್ರಿಯ ಕಣ್ಣೆದುರೇ ಈ ದುರಂತ ಸಂಭವಿಸಿದೆ.
ನಗರದ ಹೊರವಲಯದ ದೇವನಹಳ್ಳಿ ಸಮೀಪದ ರಾಣಿ ಕ್ರಾಸ್ ಬಳಿ ನಡೆದ ಮತ್ತೊಂದು ಅಪಘಾತದಲ್ಲಿ ಆಂಧ್ರಪ್ರದೇಶದ ಧರ್ಮಾವರಂ ಮೂಲದ 25 ವರ್ಷದ ಕೆ. ಜಯಪ್ರಕಾಶ್ ಮೃತಪಟ್ಟಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿಯಿಂದ ಮನೆಗೆ ಮರಳುತ್ತಿದ್ದ ವೇಳೆ ಕಂಟೇನರ್ ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಿಂಬದಿಯ ಸವಾರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಂದೇ ದಿನದಲ್ಲಿ ನಡೆದ ಈ ಸರಣಿ ಅಪಘಾತಗಳು ರಸ್ತೆ ಸುರಕ್ಷತೆ, ಅತಿವೇಗ ಚಾಲನೆ ಮತ್ತು ಸಂಚಾರ ನಿಯಮ ಪಾಲನೆಯ ಅಗತ್ಯತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿವೆ. ಪೊಲೀಸರು ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




