ಬಡಜನರ ಭೂಮಿ ರಿಯಲ್ ಎಸ್ಟೇಟ್ ದಂಧೆಗೆ ಬಳಕೆ; ವಿಧಾನಸೌಧವನ್ನು ಏನು ಮಾಡುತ್ತಾರೋ ಎಂಬ ದಿಗಿಲು: HDK; Video
ಭೂಮಿ ಕಳೆದುಕೊಳ್ಳುತ್ತಿರುವ ಆ ಜನರು ರೈತರೋ ಅಲ್ಲವೋ ಎನ್ನುವುದು ಆ ಹಳ್ಳಿಗಳಲ್ಲಿಯೇ ತೀರ್ಮಾನ ಆಗಲಿ ಎಂದು ಹೇಳಿದರು. ಈ ರೈತದ್ರೋಹದ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು.

ಬೆಂಗಳೂರು: ಬಿಡದಿ ಭಾಗದ ಭೂ ಮಾಲೀಕರು ಅಸಲಿ ರೈತರೋ ಅಲ್ಲವೋ ಎಂಬುದನ್ನು ತೀರ್ಮಾನಿಸಲು ಸ್ವತಃ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ನನ್ನೊಂದಿಗೆ ಹಳ್ಳಿಗಳಿಗೆ ಬರಲಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂಮಿ ಕಳೆದುಕೊಳ್ಳುತ್ತಿರುವ ಆ ಜನರು ರೈತರೋ ಅಲ್ಲವೋ ಎನ್ನುವುದು ಆ ಹಳ್ಳಿಗಳಲ್ಲಿಯೇ ತೀರ್ಮಾನ ಆಗಲಿ ಎಂದು ಹೇಳಿದರು. ಈ ರೈತದ್ರೋಹದ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು.
ಭೂಮಿ ಕಳೆದುಕೊಳ್ಳುತ್ತಿರುವ ಅನ್ನದಾತ ಪರವಾಗಿ ನಾನು ಹೋರಾಡುತ್ತೇನೆ. ರೈತರನ್ನು ರೈತರೇ ಅಲ್ಲ ಎಂದು ಹೇಳುತ್ತಿರುವುದು ಅಹಂಕಾರದ ಪರಮಾವಧಿ. ಅನ್ನ ಕೊಡುವ ರೈತನಿಗೆ ಮಾಡುವ ಘೋರ ಅಪಮಾನ ಇದಾಗಿದೆ. ಒಟ್ಟಾರೆ ಸರಕಾರ ಅಂತಿಮ ಅಧಿಸೂಚನೆ ಹೊರಡಿಸಿರುವುದು ಸರಿಯಲ್ಲ ಎಂದು ಅವರು ತಿಳಿಸಿದರು.
ಬರೋಬ್ಬರಿ 470 ದಿನಗಳಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಅಲ್ಲಿರುವುದು ಫಲವತ್ತಾದ ಕೃಷಿ ಭೂಮಿ. ಅದನ್ನು ಕಸಿದುಕೊಂಡು ರಿಯಲ್ ಎಸ್ಟೇಟ್ ದಂಧೆ ಮಾಡಲು ಈ ಸರಕಾರ ಹೊರಟಿದೆ. ಈಗ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಸರಕಾರ ಮಾಡುತ್ತಿದೆ.
ಪ್ರತಿಭಟನೆ ಮಾಡುತ್ತಿರುವ ರೈತರ ಮೇಲೆ ಎಫ್‍ಐಆರ್ ಹಾಕಲಾಗುತ್ತಿದೆ. ಗೃಹ ಸಚಿವರು ನೋಡಿದರೆ ಯಾವುದೇ ಎಫ್‍ಐಆರ್ ಹಾಕಿಲ್ಲ ಎಂದು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಸರಕಾರವೇ ದೌರ್ಜನ್ಯ ದರ್ಪ ನಡೆಸುತ್ತಿದೆ ಎಂದು ಆರೋಪ ಮಾಡಿದರು. ದುರಂತ ಎಂದರೆ ಈ ದಂಧೆಯಲ್ಲಿ ಈ ಹಳ್ಳಿಗಳ ಜನ ಮತ ಕೊಟ್ಟು ಗೆಲ್ಲಿಸಿದ ಜನಪ್ರತಿನಿಧಿಗಳು ಕೂಡ ಸೇರಿಕೊಂಡಿದ್ದಾರೆ. ಅಲ್ಲಿ ಶೇ.90ರಷ್ಟು ರೈತರು ಯೋಜನೆಯನ್ನು ವಿರೋಧ ಮಾಡುತ್ತಿದ್ದಾರೆ. ಕೆಲವು ದಂಧೆಕೋರರರಿಗೆ ಮಾತ್ರ ಬಿಡದಿ ಯೋಜನೆ ಬೇಕಾಗಿದೆ. ಭೂಮಿ ಕೊಡುವುದಿಲ್ಲ ಎಂದು ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ಪೊಲೀಸರು ಮತ್ತು ಗುಂಡಾಗಳನ್ನು ಬಿಟ್ಟು ದೌರ್ಜನ್ಯ ಎಸಗಲಾಗುತ್ತಿದೆ.
ಬೇಕಾದಷ್ಟು ಕಡೆ ಒಣ ಭೂಮಿ ಸಿಗುತ್ತದೆ ಅಲ್ಲಿ ಬೇಕಾದರೆ ಟೌನ್ ಶಿಫ್‍ಗಳನ್ನು ನಿರ್ಮಾಣ ಮಾಡಲಿ. ಅದು ಬಿಟ್ಟು ನಿರ್ದಿಷ್ಟವಾಗಿ ಬಿಡದಿ ಜನರ ಭೂಮಿಯೇ ಬೇಕೆಂದು ಇವರು ಷಡ್ಯಂತ್ರ ಮಾಡಿ ಕಿತ್ತುಕೊಳ್ಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.
2006ರಲ್ಲಿ ಬಿಡದಿ ಸೇರಿ ಐದು ಟೌನ್ ಶಿಪ್ ಗಳನ್ನು ಮಾಡಬೇಕೆಂದು ನಾನು ತೀರ್ಮಾನ ಮಾಡಿದ್ದೆ. ಅದಕ್ಕೆ ರೈತರಿಂದ ತೀವ್ರ ವಿರೋಧ ಬಂದಿದ್ದರಿಂದ ನಾನು ಆ ಯೋಜನೆಯನ್ನು ಮುಲಾಜಿಲ್ಲದೆ ಅಲ್ಲಿಗೆ ಕೈಬಿಟ್ಟೆ. ನಾನು ಜನರ ಹಿತಕ್ಕಾಗಿ ಕೈ ಬಿಟ್ಟ ಯೋಜನೆಯನ್ನು ಇವರು ತಮ್ಮ ಸ್ವಾರ್ಥಕ್ಕಾಗಿ ಮತ್ತೆ ಕೈಗೆತ್ತಿಕೊಂಡಿದ್ದಾರೆ. ಬಡಜನರ ಭೂಮಿಯನ್ನು ರಿಯಲ್ ಎಸ್ಟೇಟ್ ದಂಧೆಗೆ ಬಳಕೆ ಮಾಡಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಪಾರಂಪರಿಕ ಕಟ್ಟಡ ಕುಮಾರ ಕೃಪ ಅತಿಥಿಗೃಹ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಎಚ್.ಡಿ.ಕುಮಾರಸ್ವಾಮಿ, ಮುಂದಿನ ಐದು ವರ್ಷ ಇವರೇ ಮುಂದುವರೆದರೆ ಕೆಂಗಲ್ ಹನುಮಂತಯ್ಯ ಕಟ್ಟಿದ ವಿಧಾನಸೌಧವನ್ನು ಏನು ಮಾಡುತ್ತಾರೋ ಎಂದು ಗಾಬರಿಯಾಗುತ್ತದೆ ಎಂದು ವ್ಯಂಗ್ಯವಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



