ಸರ್ಕಾರಿ ನೌಕರರ ಮೇಲೆ ಡಿಜಿಟಲ್ ಕಣ್ಗಾವಲು: ಜಿಯೋ-ಟ್ಯಾಗ್ ಹಾಜರಾತಿ ವ್ಯವಸ್ಥೆ ಜಾರಿ; ಇನ್ಮುಂದೆ 10 ಗಂಟೆ ಬಳಿಕ ಹಾಜರಾತಿಗೆ ಅವಕಾಶವಿಲ್ಲ..!
ಹೊಸ ವ್ಯವಸ್ಥೆಯಲ್ಲಿ ನೌಕರರು ಕಚೇರಿಗೆ ಬಂದ ಬಳಿಕವೇ ಹಾಜರಾತಿ ದಾಖಲಿಸಬಹುದಾಗಿದೆ. ಜಿಯೋ-ಕೋಆರ್ಡಿನೇಟ್ ತಂತ್ರಜ್ಞಾನದ ಮೂಲಕ ನೌಕರರು ನಿಗದಿತ ಕಚೇರಿ ಸ್ಥಳದಲ್ಲಿದ್ದಾರೆಯೇ ಎಂಬುದನ್ನು ವ್ಯವಸ್ಥೆ ದೃಢಪಡಿಸಲಿದೆ.

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಇನ್ನು ಮುಂದೆ ಪ್ರತಿದಿನ ಬೆಳಿಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗಿ ‘ಕರ್ತವ್ಯ’ (Kartavya) ಆ್ಯಪ್ ಮೂಲಕ ಹಾಜರಾತಿ ದಾಖಲಿಸುವುದು ಕಡ್ಡಾಯವಾಗಿದೆ.
ನೌಕರರು ಕಚೇರಿಯಲ್ಲೇ ಇದ್ದು ಹಾಜರಾತಿ ಗುರುತಿಸಬೇಕೆಂಬ ಉದ್ದೇಶದಿಂದ ಸರ್ಕಾರ ಜಿಯೋ-ಟ್ಯಾಗ್ಡ್ (Geo-tagged) ಹಾಜರಾತಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
ರಾಜ್ಯದ ಎಲ್ಲ ಇಲಾಖೆಗಳ ಮುಖ್ಯಸ್ಥರು, ಡ್ರಾಯಿಂಗ್ ಮತ್ತು ಡಿಸ್ಬರ್ಸಿಂಗ್ ಅಧಿಕಾರಿಗಳಿಗೆ ಹಣಕಾಸು ಇಲಾಖೆಯ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (HRMS) ವಿಭಾಗ ಸುತ್ತೋಲೆ ಹೊರಡಿಸಿದೆ.
ಇದರಂತೆ, ಪ್ರತಿಯೊಂದು ಸರ್ಕಾರಿ ಕಚೇರಿಯ ಭೌಗೋಳಿಕ ಸ್ಥಳಾಂಕಗಳ (Geo-coordinates) ಪರಿಶೀಲನೆ ಮತ್ತು ದೃಢೀಕರಣ ಮಾಡಬೇಕಾಗಿದೆ.
ಕಚೇರಿಯಲ್ಲೇ ಇದ್ದು ಹಾಜರಾತಿ ಕಡ್ಡಾಯ
ಹೊಸ ವ್ಯವಸ್ಥೆಯಲ್ಲಿ ನೌಕರರು ಕಚೇರಿಗೆ ಬಂದ ಬಳಿಕವೇ ಹಾಜರಾತಿ ದಾಖಲಿಸಬಹುದಾಗಿದೆ. ಜಿಯೋ-ಕೋಆರ್ಡಿನೇಟ್ ತಂತ್ರಜ್ಞಾನದ ಮೂಲಕ ನೌಕರರು ನಿಗದಿತ ಕಚೇರಿ ಸ್ಥಳದಲ್ಲಿದ್ದಾರೆಯೇ ಎಂಬುದನ್ನು ವ್ಯವಸ್ಥೆ ದೃಢಪಡಿಸಲಿದೆ.
ಇದಕ್ಕಾಗಿ ರಾಜ್ಯದ ಇ-ಆಡಳಿತ ಇಲಾಖೆ ಅಭಿವೃದ್ಧಿಪಡಿಸಿರುವ ‘ಕರ್ತವ್ಯ’ ಆ್ಯಪ್ ಅನ್ನು ಎಲ್ಲಾ ಸರ್ಕಾರಿ ನೌಕರರು ಡೌನ್‌ಲೋಡ್ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಬೇಕಾಗಿದೆ.
ಹಣಕಾಸು ಇಲಾಖೆಯ ಮೂಲಗಳ ಪ್ರಕಾರ, ಈ ಹಿಂದೆ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಇದ್ದರೂ ಅದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಕೆಲವು ಕಡೆಗಳಲ್ಲಿ ಯಂತ್ರಗಳು ದುರಸ್ತಿಯಲ್ಲಿವೆ ಎಂದು ಹೇಳಿ ಹಾಜರಾತಿ ವ್ಯವಸ್ಥೆಯನ್ನು ನಿರ್ಲಕ್ಷಿಸಲಾಗುತ್ತಿತ್ತು.
ಆದರೆ, ಹೊಸ ಜಿಯೋ-ಟ್ಯಾಗ್ಡ್ ವ್ಯವಸ್ಥೆಯಲ್ಲಿ ನೌಕರರು ಬೇರೆ ಸ್ಥಳದಿಂದ ಹಾಜರಾತಿ ದಾಖಲಿಸಲು ಸಾಧ್ಯವಿಲ್ಲ. ಕಚೇರಿಯಲ್ಲೇ ಹಾಜರಿದ್ದು, ನೈಜ ಸಮಯದಲ್ಲಿ (Real-time) ಹಾಜರಾತಿ ಗುರುತಿಸಬೇಕಾಗುತ್ತದೆ.
ಆರೋಗ್ಯ ಇಲಾಖೆಯಲ್ಲಿ ಯಶಸ್ವಿ ಪ್ರಯೋಗ
ಈ ವ್ಯವಸ್ಥೆಯನ್ನು ಮೊದಲಿಗೆ ಆರೋಗ್ಯ ಇಲಾಖೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಅಲ್ಲಿ ಉತ್ತಮ ಫಲಿತಾಂಶ ಕಂಡುಬಂದ ಹಿನ್ನೆಲೆಯಲ್ಲಿ ಈಗ ರಾಜ್ಯದ ಎಲ್ಲ ಸರ್ಕಾರಿ ಇಲಾಖೆಗಳಿಗೂ ವಿಸ್ತರಿಸಲಾಗಿದೆ.
ಮುಖ್ಯ ಕಾರ್ಯದರ್ಶಿ ಕಟ್ಟುನಿಟ್ಟಿನ ಸೂಚನೆ
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೆಳಿಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗಿ ‘ಕರ್ತವ್ಯ’ ಆ್ಯಪ್‌ನಲ್ಲಿ ಹಾಜರಾತಿ ದಾಖಲಿಸಬೇಕು ಎಂದು ಸೂಚಿಸಿದ್ದಾರೆ. ಹಾಜರಾತಿ ದಾಖಲಿಸದ ನೌಕರರ ಕುರಿತು ವರದಿ ಸಲ್ಲಿಸಲಾಗುವುದು ಎಂದೂ ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅಧಿಕಾರ ಸ್ವೀಕರಿಸಿದ ಬಳಿಕ ನಡೆದ ಮೊದಲ ಹಿರಿಯ ಅಧಿಕಾರಿಗಳ ಸಭೆಯಲ್ಲೇ ಸರ್ಕಾರಿ ನೌಕರರು ಸಮಯ ಪಾಲನೆ ಕಡ್ಡಾಯವಾಗಿ ಮಾಡಬೇಕು ಎಂದು ಸೂಚಿಸಿದ್ದರು. ಅದರ ಬೆನ್ನಲ್ಲೇ ಸರ್ಕಾರ ಈ ಹೊಸ ಡಿಜಿಟಲ್ ಹಾಜರಾತಿ ವ್ಯವಸ್ಥೆಯನ್ನು ರಾಜ್ಯಾದ್ಯಂತ ಜಾರಿಗೆ ತಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



