ಬೆಂಗಳೂರು: ಬಂಧಿಸಲು ಹೋದ ಪೊಲೀಸರ ಮೇಲೇ ಚಾಕು ದಾಳಿ; ದರೋಡೆ ಪ್ರಕರಣದ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧನ
ತಿರುಪಾಳ್ಯ ಸಮೀಪ ಚಹಾ ಕುಡಿಯಲು ತೆರಳಿದ್ದಾಗ, ಆರೋಪಿ ಜೀವಾ ಮತ್ತು ಆತನ ಸಹಚರರು ಕಾರಿನಲ್ಲಿ ಬಂದು ದೂರುದಾರನ ಮೇಲೆ ಹಲ್ಲೆ ನಡೆಸಿ, ಮೊಬೈಲ್ ಫೋನ್ ಹಾಗೂ ನಗದು ಹಣ ದೋಚಿ ಪರಾರಿಯಾಗಿದ್ದರು.

ಬೆಂಗಳೂರು: ದರೋಡೆ ಪ್ರಕರಣದ ಆರೋಪಿಯೊಬ್ಬನನ್ನು ಬಂಧಿಸಲು ತೆರಳಿದ ವೇಳೆ ಆತ ಪೊಲೀಸರ ಮೇಲೆ ಚಾಕು(ಡ್ಯಾಗರ್)ವಿನಿಂದ ದಾಳಿ ನಡೆಸಿ, ಕೊಲೆ ಯತ್ನಕ್ಕೆ ಮುಂದಾದ ಹಿನ್ನೆಲೆಯಲ್ಲಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿರುವ ಘಟನೆ ಬೆಂಗಳೂರಿನ ಹೊರವಲಯದಲ್ಲಿ ನಡೆದಿದೆ.
ಪೊಲೀಸರ ಪ್ರಕಟಣೆ ಪ್ರಕಾರ, ಜೂನ್ 2ರಂದು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು. ದೂರುದಾರ ಮತ್ತು ಅವರ ಸ್ನೇಹಿತರು ತಿರುಪಾಳ್ಯ ಸಮೀಪ ಚಹಾ ಕುಡಿಯಲು ತೆರಳಿದ್ದಾಗ, ಆರೋಪಿ ಜೀವಾ ಮತ್ತು ಆತನ ಸಹಚರರು ಕಾರಿನಲ್ಲಿ ಬಂದು ದೂರುದಾರನ ಮೇಲೆ ಹಲ್ಲೆ ನಡೆಸಿ, ಮೊಬೈಲ್ ಫೋನ್ ಹಾಗೂ ನಗದು ಹಣ ದೋಚಿ ಪರಾರಿಯಾಗಿದ್ದರು ಎಂದು ಆರೋಪಿಸಲಾಗಿದೆ.
ಈ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಲು ವಿಶೇಷ ತಂಡವನ್ನು ರಚಿಸಲಾಗಿತ್ತು. ಬುಧವಾರ ಜೀವಾ ಸಿಂಗೇನ ಅಗ್ರಹಾರ ಪ್ರದೇಶದಲ್ಲಿ ಇರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಮಾಹಿತಿಯ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಲು ತೆರಳಿದ್ದರು. ಆದರೆ, ಆರೋಪಿ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಚಾಕುವಿನಿಂದ ಪೊಲೀಸರ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ತಂಡ ಮೊದಲು ಗಾಳಿಯಲ್ಲಿ ಎರಡು ಸುತ್ತು ಎಚ್ಚರಿಕೆ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿತು. ಆದರೆ ಆರೋಪಿ ಎಚ್ಚರಿಕೆಯನ್ನು ಲೆಕ್ಕಿಸದೆ ಚಾಕುವಿನೊಂದಿಗೆ (ಡ್ಯಾಗರ್) ಪೊಲೀಸರ ಕಡೆಗೆ ಮುನ್ನುಗ್ಗಿ ಹಲ್ಲೆಗೆ ಯತ್ನಿಸಿದನೆಂದು ಪೊಲೀಸರು ಹೇಳಿದ್ದಾರೆ.
ತಮ್ಮ ಹಾಗೂ ಇತರ ಪೊಲೀಸ್ ಸಿಬ್ಬಂದಿಯ ರಕ್ಷಣೆಗಾಗಿ ಉಪನಿರೀಕ್ಷಕರೊಬ್ಬರು ಆರೋಪಿಯ ಬಲಗಾಲಿಗೆ ಗುಂಡು ಹಾರಿಸಿದ್ದು, ಬಳಿಕ ಆತನನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ. ಗಾಯಗೊಂಡ ಆರೋಪಿ ಹಾಗೂ ಗಾಯಗೊಂಡಿದ್ದ ಪೊಲೀಸ್ ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ, ಆರೋಪಿ ಜೀವಾ ವಿರುದ್ಧ ಈಗಾಗಲೇ ಏಳು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ನಾಲ್ಕು ಪ್ರಕರಣಗಳು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ, ತಲಾ ಒಂದು ಪ್ರಕರಣ ಸೂರ್ಯ ಸಿಟಿ ಮತ್ತು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಗಳಲ್ಲಿ ಹಾಗೂ ಮತ್ತೊಂದು ಪ್ರಕರಣ ತಮಿಳುನಾಡಿನ ವೆಟ್ಮೆಲಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



