ರಾಜ್ಯ

'ಕಸದಲ್ಲೂ ಕಾಸು': ಕಸ ಸಂಸ್ಕರಣೆ ನೆಪದಲ್ಲಿ ₹39,000 ಕೋಟಿ ಹಗರಣ, ₹10,000 ಕೋಟಿ ಕಿಕ್‌ಬ್ಯಾಕ್‌; ಆರ್‌ ಅಶೋಕ ಗಂಭೀರ ಆರೋಪ

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ದಲ್ಲಿ ಈವರೆಗೆ ರಾಜ್ಯದ ಗುತ್ತಿಗೆದಾರರು ಕೆಲಸ ಮಾಡುತ್ತಿದ್ದರು. ಹೊಸದಾಗಿ ಟೆಂಡರ್‌ನ್ನು ದೆಹಲಿಯ ಕಂಪನಿಗೆ ನೀಡಿದ್ದು, ಇದರಲ್ಲಿ ಕಿಕ್‌ಬ್ಯಾಕ್‌ ಪಡೆಯಲಾಗಿದೆ ಎಂದು ದೂರಿದ್ದಾರೆ.

'ಕಸದಲ್ಲೂ ಕಾಸು': ಕಸ ಸಂಸ್ಕರಣೆ ನೆಪದಲ್ಲಿ ₹39,000 ಕೋಟಿ ಹಗರಣ, ₹10,000 ಕೋಟಿ ಕಿಕ್‌ಬ್ಯಾಕ್‌; ಆರ್‌ ಅಶೋಕ ಗಂಭೀರ ಆರೋಪ
ರಾಜ್ಯಪಾಲ ಥಾವರಚಂದ್ ಗೆಹ್ಲೋಟ್‌ರನ್ನು ಭೇಟಿ ಮಾಡಿ ದೂರು ಸಲ್ಲಿಸಿದ ಬಿಜೆಪಿ ನಾಯಕರು
Published On :

ಬೆಂಗಳೂರು: ಬೆಂಗಳೂರಿನಲ್ಲಿ ಕಸ ಸಂಸ್ಕರಣೆ ಮಾಡುವ ನೆಪದಲ್ಲಿ ಕಾಂಗ್ರೆಸ್‌ ಸರ್ಕಾರ ₹39,000 ಕೋಟಿ ಹಗರಣ ನಡೆಸಿದೆ. 35 ವರ್ಷಗಳ ಸುದೀರ್ಘ ಅವಧಿಗೆ ಎಂಎಸ್‌ಡಬ್ಲ್ಯು ಸೊಲ್ಯೂಶನ್ಸ್‌ ಲಿಮಿಟೆಡ್‌ಗೆ ನೀಡುತ್ತಿರುವ ಟೆಂಡರ್‌ನ ಒಟ್ಟು ಮೊತ್ತದಲ್ಲಿ ₹10,000 ಕೋಟಿ ಕಿಕ್‌ಬ್ಯಾಕ್‌ ಪಡೆಯಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಸ್ವಚ್ಛತೆಯಲ್ಲಿ ಅತ್ಯುತ್ತಮ ನಗರ ಎಂಬ ಹೆಗ್ಗಳಿಕೆ ಬೆಂಗಳೂರಿಗೆ ಸಿಕ್ಕಿತ್ತು. ಈಗ ಇಡೀ ಬೆಂಗಳೂರು ಬೆಚ್ಚಿಬೀಳುವಂತಹ ₹39,000 ಕೋಟಿ ಹಗರಣವನ್ನು ಕಾಂಗ್ರೆಸ್‌ ಸರ್ಕಾರ ಕಸದ ಹೆಸರಲ್ಲಿ ಮಾಡಿದೆ. ದೇಶದ ಇತಿಹಾಸದಲ್ಲಿಯೇ ಕಸದಲ್ಲೂ ಲೂಟಿ ಮಾಡಿರುವ ಹಗರಣ ಇದೇ ಮೊದಲು. ಇದು ಹೈಕಮಾಂಡ್‌ನ ಕಪ್ಪ ಕಾಣಿಕೆ ಟೆಂಡರ್‌ ಆಗಿದೆ. ಪ್ರತಿ ವರ್ಷ ಬೆಂಗಳೂರಿನಲ್ಲಿ ಕಸ ಸಂಗ್ರಹ ಮತ್ತು ಸಾಗಣೆಗೆ ₹514 ಕೋಟಿ ಮತ್ತು ಸಂಸ್ಕರಣೆ ಮತ್ತು ವಿಲೇವಾರಿಗೆ ₹380 ಕೋಟಿ ಖರ್ಚು ಮಾಡಲಾಗುತ್ತಿದೆ. 11,000 ಪೌರಕಾರ್ಮಿಕರಿಗೆ ವರ್ಷಕ್ಕೆ ₹444 ಕೋಟಿ ಸಂಬಳ ನೀಡಲಾಗುತ್ತಿದೆ. ಎಲ್ಲ ಸೇರಿ ಸೇರಿ ವರ್ಷಕ್ಕೆ ಒಟ್ಟು ₹1,344 ಕೋಟಿ ಖರ್ಚಾಗುತ್ತದೆ ಎಂದು ತಿಳಿಸಿದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ದಲ್ಲಿ ಈವರೆಗೆ ರಾಜ್ಯದ ಗುತ್ತಿಗೆದಾರರು ಕೆಲಸ ಮಾಡುತ್ತಿದ್ದರು. ಹೊಸದಾಗಿ ₹39,000 ಕೋಟಿ ಮೊತ್ತದ ಟೆಂಡರ್‌ನ್ನು ದೆಹಲಿಯ ಕಂಪನಿಗೆ ನೀಡಿದ್ದು, ಇದರಲ್ಲಿ ₹10,000 ಕೋಟಿ ಕಿಕ್‌ಬ್ಯಾಕ್‌ ಪಡೆಯಲಾಗಿದೆ. ಪ್ರತಿ ವರ್ಷ ಟೆಂಡರ್‌ ಬದಲಿಗೆ, ಈ ಬಾರಿ 30 ವರ್ಷ ಹಾಗೂ ಇನ್ನೂ ವಿಸ್ತರಣೆಯ 5 ವರ್ಷ ಸೇರಿ ಒಟ್ಟು 35 ವರ್ಷಕ್ಕೆ ದೆಹಲಿಯ ಎಂಎಸ್‌ಡಬ್ಲ್ಯು ಸೊಲ್ಯೂಶನ್ಸ್‌ ಲಿಮಿಟೆಡ್‌ (ಮಾತೃ ಸಂಸ್ಥೆ ರಾಮ್‌ಕಿ ಕಂಪನಿ) ಗೆ ಟೆಂಡರ್‌ ನೀಡಲಾಗಿದೆ. ಬೆಂಗಳೂರು ಉತ್ತರ ಹಾಗೂ ದಕ್ಷಿಣಕ್ಕೆ ಎರಡು ಪ್ಯಾಕೇಜ್‌ ಮಾಡಲಾಗಿದೆ. ಇದಕ್ಕೂ ಮುನ್ನ ಸರ್ಕಾರಿ ಸ್ವಾಮ್ಯದ ರೈಟ್ಸ್‌ ಕಂಪನಿಯಿಂದ ಸಲಹೆ ಪಡೆದರೂ, ಅದನ್ನು ಕಸದ ಬುಟ್ಟಿಗೆ ಹಾಕಲಾಗಿದೆ. ಮಾನ್ಯತೆಯೇ ಇಲ್ಲದ ಕಂಪನಿಗೆ ಸಲಹೆಗಾಗಿ ಅವಕಾಶ ನೀಡಲಾಗಿದೆ. ಈಗ ಕಸದ ಟೆಂಡರ್‌ನ್ನು ಎಂಎಸ್‌ಡಬ್ಲ್ಯು ಕಂಪನಿಗೆ ನೀಡಿ, ₹1,500 ಕೋಟಿ ಸಾಲ ಪಡೆಯಲು ಕೂಡ ಅವಕಾಶ ಕೊಡಲಾಗಿದೆ. ಇದಕ್ಕೆ ಜಮೀನನ್ನು ಕೂಡ ಸರ್ಕಾರದಿಂದಲೇ ನೀಡಲಾಗಿದೆ ಎಂದು ದೂರಿದರು.

ಶೇ 950 ರಷ್ಟು ಅಧಿಕ ಶುಲ್ಕ

ಸದ್ಯ ಪ್ರತಿ ಟನ್‌ಗೆ ಟಿಪ್ಪಿಂಗ್‌ ಶುಲ್ಕವಾಗಿ ₹260 ನೀಡಲಾಗುತ್ತಿದೆ. ಹೊಸ ಟೆಂಡರ್‌ನಂತೆ ₹2,400 ನೀಡಲಾಗುತ್ತಿದ್ದು, ಇದು ಶೇ 950 ರಷ್ಟು ಅಧಿಕವಾಗಿದೆ. ಹಳೆ ವೆಚ್ಚದಲ್ಲೇ ಮುಂದುವರಿಸಿದರೆ, 30 ವರ್ಷಕ್ಕೆ ₹6,117 ಕೋಟಿ ವೆಚ್ಚ ಆಗುತ್ತದೆ. ಹೊಸ ಟೆಂಡರ್‌ನಿಂದ ಹೆಚ್ಚುವರಿಯಾಗಿ ₹33,320 ಕೋಟಿ ವೆಚ್ಚವಾಗುತ್ತದೆ. ಟೆಂಡರ್‌ ಪ್ರಕಾರ, ದಕ್ಷಿಣ ಬೆಂಗಳೂರು ಪ್ಯಾಕೇಜ್‌ನಲ್ಲಿ ಶೇ 19.43 ಹಾಗೂ ಉತ್ತರ ಬೆಂಗಳೂರಿನ ಪ್ಯಾಕೇಜ್‌ನಲ್ಲಿ ಶೇ 19.25 ರಷ್ಟು ಅಧಿಕ ಮೊತ್ತ ನಮೂದಾಗಿದೆ. ಎರಡೂ ಪ್ಯಾಕೇಜ್‌ ಸೇರಿ ಶೇ 19.33 ರಷ್ಟು ಹೆಚ್ಚಿದೆ ಎಂದರು.

ಮೊದಲೆರಡು ಬಾರಿ ಟೆಂಡರ್‌ ಕರೆದು ವಿಫಲವಾಗಿ ಮೂರನೇ ಬಾರಿಗೆ ದೆಹಲಿಯ ಎಂಎಸ್‌ಡಬ್ಲ್ಯು ಸೊಲ್ಯೂಶನ್ಸ್‌ ಲಿಮಿಟೆಡ್‌ ಕಂಪನಿಗೆ ನೀಡಲಾಗಿದೆ. ಅಧಿಕಾರಿಗಳು ಸರಿಯಾಗಿ ಟೆಂಡರ್‌ ಪರಿಶೀಲನೆ ನಡೆಸಿಲ್ಲ. ಈ ಟೆಂಡರ್‌ ಪ್ರಕಾರ, ಒಂದು ಟನ್‌ ಸಂಸ್ಕರಣೆಯ ಖರ್ಚು ಶೇ 430 ರಷ್ಟು ಹೆಚ್ಚಾಗಲಿದೆ. ಈಗ ಟನ್‌ಗೆ ₹2,151 ಆಗಿದ್ದರೆ, ಹೊಸ ಟೆಂಡರ್ ಪ್ರಕಾರ ₹9,297 ಆಗುತ್ತದೆ. ಕಾನೂನು ಪ್ರಕಾರ ಪತ್ರಿಕೆಗಳಲ್ಲಿ ಜಾಹೀರಾತು ನೀಡಬೇಕಿದ್ದರೂ, ಅದನ್ನು ಮಾಡದೆ ಅಕ್ರಮ ಎಸಗಲಾಗಿದೆ ಎಂದು ಕಿಡಿಕಾರಿದ್ದಾರೆ.

ಆರ್ಥಿಕ ಇಲಾಖೆಯಿಂದ ಎಚ್ಚರಿಕೆ

ಎರಡೂ ಪ್ಯಾಕೇಜ್‌ಗಳನ್ನು ಒಂದೇ ಕಂಪನಿಗೆ ನೀಡಿರುವುದು, 30 ವರ್ಷಗಳ ದೀರ್ಘ ಅವಧಿ, ಶೇ 5 ರಷ್ಟು ಹೆಚ್ಚಳ ಮೊದಲಾದ ಅಂಶಗಳ ಬಗ್ಗೆ ಹಣಕಾಸು ಇಲಾಖೆ ತಕರಾರು ಎತ್ತಿದೆ. ಅವಧಿಯನ್ನು 10 ವರ್ಷಕ್ಕೆ ಇಳಿಸಿ, ಹೆಚ್ಚಿನ ಮೊತ್ತವನ್ನು ಶೇ 2.5ಕ್ಕೆ ಇಳಿಸಬೇಕು, ಇಲ್ಲವಾದರೆ ಜಿಬಿಎಗೆ ಮುಂದೆ ಹೊರೆಯಾಗುತ್ತದೆ ಎಂದು ಸಲಹೆ ನೀಡಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಿತೇಶ್‌ ಕುಮಾರ್‌ ಸಿಂಗ್‌ ಮುಖ್ಯಮಂತ್ರಿಗೆ ಪತ್ರ ಬರೆದು, ಇದರಲ್ಲಿನ ಲೋಪಗಳನ್ನು ಎತ್ತಿ ತೋರಿಸಿದ್ದಾರೆ ಎಂದು ತಿಳಿಸಿದರು.

ರಾಮ್‌ಕಿ ಕಂಪನಿ ವಂಚನೆ ಮಾಡಿದೆ, ನಿಯಮಗಳನ್ನು ಉಲ್ಲಂಘಿಸಿದೆ ಎಂದು ವಿಶ್ವಬ್ಯಾಂಕ್‌ ಹೇಳಿದ್ದು, ಇದನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. 2016ರಲ್ಲಿ ಬಿಬಿಎಂಪಿಯಿಂದಲೇ ರಾಮ್‌ಕಿ ಕಂಪನಿಯ ಗುತ್ತಿಗೆ ರದ್ದು ಮಾಡಲಾಗಿತ್ತು. ಇಷ್ಟಿದ್ದರೂ ಆದೇ ಕಂಪನಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯನವರ ಕಾಂಗ್ರೆಸ್‌ ಸರ್ಕಾರ ಟೆಂಡರ್‌ ನೀಡಿದೆ ಎಂದರು.

ಸಿದ್ದರಾಮಯ್ಯ ರಾಜೀನಾಮೆ ನೀಡುವ ಮುನ್ನವೇ ಇದಕ್ಕೆ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಇದಕ್ಕಾಗಿ ಸಿದ್ದರಾಮಯ್ಯನವರಿಗೆ ದೆಹಲಿಯಿಂದ ಕರೆ ಬಂದಿತ್ತು. ಸಂಪುಟದಲ್ಲಿ ಸುಮಾರು 10 ಸಚಿವರು ಈ ಬಗ್ಗೆ ಗಲಾಟೆ ಮಾಡಿದ್ದರು. ಬೆಂಗಳೂರು ಚುನಾವಣೆಯಲ್ಲಿ ಇದು ಸಮಸ್ಯೆಯಾಗಲಿದೆ ಎಂದು ಸಚಿವರು ಹೇಳಿದಾಗ, ಇದು ಮೇಲಿನಿಂದ ಬಂದ ಸೂಚನೆ ಎಂದು ಸಿದ್ದರಾಮಯ್ಯ ಹೇಳಿದ್ದರು ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟೆಂಡರ್‌ ಪರಿಶೀಲನೆಗೆ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್‌ ನೇತೃತ್ವದ ಸಮಿತಿ ರಚಿಸಿದರೆ, ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅದನ್ನು ರದ್ದು ಮಾಡಿ, ಅಂಜುಮ್‌ ಪರ್ವೇಜ್‌ ಹಾಗೂ ಜಾಫರ್‌ ನೇತೃತ್ವದ ಸಮಿತಿ ರಚಿಸಿ ಕೇವಲ ಏಳು ದಿನಗಳ ಕಾಲಾವಕಾಶ ನೀಡಿದ್ದಾರೆ. ಕಸದಲ್ಲೂ ಕಾಸು ತೆಗೆಯುವ ಕೆಲಸವನ್ನು ಕಾಂಗ್ರೆಸ್‌ ಮಾಡಿದ್ದು, ಅಕ್ರಮದ ವಾಸನೆ ಹರಡಿದೆ. ಇದೇ ಕಾರಣಕ್ಕೆ ಬೆಂಗಳೂರಿನ ಹೊಣೆ ವಹಿಸಿಕೊಳ್ಳಲು ಸಚಿವರ ಮಧ್ಯೆ ಸ್ಪರ್ಧೆ ನಡೆದಿದೆ. ಕೂಡಲೇ ಈ ಟೆಂಡರ್‌ ರದ್ದು ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯಪಾಲರಿಗೆ ದೂರು

ಪ್ರತಿಪಕ್ಷ ನಾಯಕ ಆರ್‌ ಅಶೋಕ ಅವರು ಲೋಕಭವನಕ್ಕೆ ತೆರಳಿ ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್‌ ಅವರನ್ನು ಭೇಟಿಯಾಗಿ ಈ ಕುರಿತು ದೂರು ನೀಡಿದರು.

ಈ ಟೆಂಡರ್‌ ಪ್ರಕ್ರಿಯೆಯನ್ನು ತನಿಖೆಗೆ ಒಳಪಡಿಸಬೇಕು. ಟೆಂಡರ್‌ ಪಡೆದ, ಅರ್ಜಿ ಸಲ್ಲಿಸಿದ ಕಂಪನಿಗಳ ಅರ್ಹತೆ ಬಗ್ಗೆ ಪರಿಶೀಲನೆ ನಡೆಸಬೇಕು. ಡಿಪಿಆರ್‌ ಹಂತದಲ್ಲಾಗಿರುವ ಲೋಪವನ್ನು ತನಿಖೆ ಮಾಡಬೇಕು. ಟೆಂಡರ್‌ ಅನುಮೋದನೆಯಲ್ಲಾಗಿರುವ ಲೋಪಗಳನ್ನು ಪರಿಶೀಲಿಸಬೇಕು ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.