ರಾಜ್ಯ

ಬೆಂಗಳೂರಿಗೆ ರಾಹುಲ್ ಗಾಂಧಿ ಆಗಮನ: ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನಾಯಕರು ಸೂರಜ್ ಹೆಗ್ಡೆ ಅಂತ್ಯಕ್ರಿಯೆಯಲ್ಲಿ ಭಾಗಿ; Video

ಜೂನ್ 7ರಂದು ನಿಧನರಾದ ಸೂರಜ್ ಹೆಗ್ಡೆ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ಕಾಂಗ್ರೆಸ್ ಮುಖಂಡರು ಸಂತಾಪ ಸೂಚಿಸಿ, ಸಾಂತ್ವನ ಹೇಳಿದರು.

ಬೆಂಗಳೂರಿಗೆ ರಾಹುಲ್ ಗಾಂಧಿ ಆಗಮನ: ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನಾಯಕರು ಸೂರಜ್ ಹೆಗ್ಡೆ ಅಂತ್ಯಕ್ರಿಯೆಯಲ್ಲಿ ಭಾಗಿ; Video
ಸೂರಜ್ ಹೆಗ್ಡೆ ಪಾರ್ಥಿವ ಶರೀರಕ್ಕೆ ರಾಹುಲ್ ಗಾಂಧಿ, ಸಿಎಂ ಡಿ ಕೆ ಶಿವಕುಮಾರ್ ಸೇರಿ ಕಾಂಗ್ರೆಸ್ ನಾಯಕರಿಂದ ಅಂತಿಮ ವಿದಾಯ
Published On :

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ ಅವರು ಇಂದು ಬೆಂಗಳೂರಿನಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಪದಾಧಿಕಾರಿಯಾಗಿದ್ದ ಸೂರಜ್ ಹೆಗ್ಡೆ ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

ಜೂನ್ 7ರಂದು ನಿಧನರಾದ ಸೂರಜ್ ಹೆಗ್ಡೆ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ಕಾಂಗ್ರೆಸ್ ಮುಖಂಡರು ಸಂತಾಪ ಸೂಚಿಸಿ, ಸಾಂತ್ವನ ಹೇಳಿದರು.

ಈ ಮೊದಲು ರಾಹುಲ್ ಗಾಂಧಿ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಂತಾಪ ಸೂಚಿಸಿ, ಸೂರಜ್ ಹೆಗ್ಡೆ ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ಎಐಸಿಸಿ ಕಾರ್ಯದರ್ಶಿ ಹಾಗೂ ಭಾರತೀಯ ಯುವ ಕಾಂಗ್ರೆಸ್‌ನ ಮಾಜಿ ಉಸ್ತುವಾರಿಯಾಗಿ ಅವರು ಪಕ್ಷದ ಸಿದ್ಧಾಂತಗಳ ಮೇಲೆ ಅಪಾರ ನಂಬಿಕೆಯಿಂದ ಕೆಲಸ ಮಾಡಿದ್ದರು ಎಂದು ಬರೆದುಕೊಂಡಿದ್ದರು.

ಇಂದು ಕಾಂಗ್ರೆಸ್‌ನ ನ್ಯಾಯ ಮತ್ತು ಪ್ರಜಾಪ್ರಭುತ್ವದ ಬದ್ಧತೆಯನ್ನು ಮುಂದುವರಿಸುತ್ತಿರುವ ಅನೇಕ ಯುವಕರಿಗೆ ಅವರು ಮಾರ್ಗದರ್ಶನ ನೀಡಿದ್ದರು. ಅವರ ನಿಧನ ಕಾಂಗ್ರೆಸ್ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬ, ಸಹೋದ್ಯೋಗಿಗಳು ಹಾಗೂ ಅವರಿಂದ ಪ್ರೇರಿತರಾದ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರಿಗೆ ನನ್ನ ಸಂತಾಪಗಳು ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಸೂರಜ್ ಹೆಗ್ಡೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ನನ್ನ ಆತ್ಮೀಯ ಸಹೋದ್ಯೋಗಿ ಸೂರಜ್ ಹೆಗ್ಡೆ ಅವರ ಅಕಾಲಿಕ ನಿಧನದ ಸುದ್ದಿ ಕೇಳಿ ಆಘಾತಕ್ಕೊಳಗಾಗಿದ್ದೇನೆ. ಅವರು ಎಐಸಿಸಿ ಪದಾಧಿಕಾರಿ, ಕೆಪಿಸಿಸಿ ಉಪಾಧ್ಯಕ್ಷ ಹಾಗೂ ರಾಜ್ಯ ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸಂಘಟನಾ ಕೌಶಲ್ಯ ಮತ್ತು ಜನಪರ ಕಾಳಜಿಯ ಮೂಲಕ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವಲ್ಲಿ ಅವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದ್ದಾರೆ.

ಪಕ್ಷದ ಕಾರ್ಯಕರ್ತರೊಂದಿಗೆ ಸದಾ ಉತ್ತಮ ಬಾಂಧವ್ಯ ಹೊಂದಿದ್ದ ಸಕ್ರಿಯ ನಾಯಕನನ್ನು ನಾವು ಇಂದು ಕಳೆದುಕೊಂಡಿದ್ದೇವೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಈ ನಷ್ಟವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ. ಓಂ ಶಾಂತಿ ಎಂದು ಡಿ ಕೆ ಶಿವಕುಮಾರ್ ಸಂತಾಪ ವ್ಯಕ್ತಪಡಿಸಿದರು.

ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಕೂಡ ಸಂತಾಪ ಸೂಚಿಸಿ, ಅವರ ಸರಳ ವ್ಯಕ್ತಿತ್ವ, ನಾಯಕತ್ವ ಹಾಗೂ ಜನರ ಮೇಲಿನ ಕಾಳಜಿ ಸದಾ ಸ್ಮರಣೀಯವಾಗಿರುತ್ತದೆ ಎಂದು ಹೇಳಿದರು.

ಎಐಸಿಸಿ ಪದಾಧಿಕಾರಿ, ಕೆಪಿಸಿಸಿ ಉಪಾಧ್ಯಕ್ಷ ಹಾಗೂ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಸೇರಿದಂತೆ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದ ಸೂರಜ್ ಹೆಗ್ಡೆ ಅವರ ನಿಧನಕ್ಕೆ ದೇಶದಾದ್ಯಂತ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.