ಶ್ರೀಕಿ ಹ್ಯಾಕಿಂಗ್ ಹಣ ವರ್ಗಾವಣೆ ಜಾಲ ಭೇದಿಸಿದ ED; ಕ್ರಿಪ್ಟೋ ಟ್ರೇಡರ್ ರಾಬಿನ್ ಖಂಡೇಲ್ವಾಲ್ ಬಂಧನ..!
ಭಾರತದ ಹೊರಗಿನ ಹಲವು ಕ್ರಿಪ್ಟೋ ಟ್ರೇಡಿಂಗ್ ವೇದಿಕೆಗಳಲ್ಲಿ ಖಾತೆಗಳನ್ನು ನಿರ್ವಹಿಸಿದ್ದ ಆತ, ವಿವಿಧ ದೇಶಗಳಿಗೆ ಹಣ ವರ್ಗಾವಣೆ ನಡೆಸಿದ್ದಾನೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಬೆಂಗಳೂರು: ಕುಖ್ಯಾತ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ನಡೆಸಿದ ಸೈಬರ್ ಅಪರಾಧಗಳಿಂದ ಬಂದ ಅಕ್ರಮ ಹಣವನ್ನು ಕ್ರಿಪ್ಟೋಕರೆನ್ಸಿ ಮೂಲಕ ವರ್ಗಾವಣೆ ಹಾಗೂ ಮರೆಮಾಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರೋಪದ ಮೇಲೆ ಕ್ರಿಪ್ಟೋ ವ್ಯಾಪಾರಿ ರಾಬಿನ್ ಖಂಡೇಲ್ವಾಲ್'ನನ್ನು ಜಾರಿ ನಿರ್ದೇಶನಾಲಯ (ED)ದ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದಾರೆ.
2016-17ರಿಂದಲೇ ಶ್ರೀಕಿ ಗಳಿಸಿದ್ದ ಅಕ್ರಮ ಹಣವನ್ನು ಕ್ರಿಪ್ಟೋಕರೆನ್ಸಿ ವ್ಯವಹಾರಗಳ ಮೂಲಕ ವೈಟ್ ಮನಿಯನ್ನಾಗಿ ಪರಿವರ್ತಿಸಲು ರಾಬಿನ್ ಪ್ರಮುಖ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ಇಡಿ ತನಿಖೆಯಿಂದ ತಿಳಿದುಬಂದಿದೆ.
ಭಾರತದ ಹೊರಗಿನ ಹಲವು ಕ್ರಿಪ್ಟೋ ಟ್ರೇಡಿಂಗ್ ವೇದಿಕೆಗಳಲ್ಲಿ ಖಾತೆಗಳನ್ನು ನಿರ್ವಹಿಸಿದ್ದ ಆತ, ವಿವಿಧ ದೇಶಗಳಿಗೆ ಹಣ ವರ್ಗಾವಣೆ ನಡೆಸಿದ್ದಾನೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಇದಲ್ಲದೆ, 'ಧರ್ಮಸ್ಥಳ.ಆರ್ಗ್' (dharmasthala.org) ಎಂಬ ಡೊಮೇನ್‌ನ ಮಾಲೀಕತ್ವ ಬದಲಾವಣೆಯಲ್ಲಿಯೂ ರಾಬಿನ್ ಪಾತ್ರವಿರುವುದು ಪತ್ತೆಯಾಗಿದೆ. ಶ್ರೀಕಿ ಮತ್ತು ರಾಬಿನ್ ನಡುವಿನ ವಾಟ್ಸ್ಆಪ್ ಸಂಭಾಷಣೆಗಳ ಪರಿಶೀಲನೆಯ ವೇಳೆ ಈ ಮಾಹಿತಿ ಬಹಿರಂಗವಾಗಿದೆ ಎಂದು ತಿಳಿದುಬಂದಿದೆ.
2026ರ ಮೇ ತಿಂಗಳಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ದಾಖಲಿಸಿದ ಹೇಳಿಕೆಯಲ್ಲಿ, ರಾಬಿನ್ ತಾನು Namecheap.com ವೆಬ್‌ಸೈಟ್ ಮೂಲಕ ಡೊಮೇನ್ ಮಾಲೀಕತ್ವ ಬದಲಾವಣೆ ಮಾಡಿದ್ದು, ಅದರ ಪಾವತಿಯನ್ನು ಬಿಟ್‌ಕಾಯಿನ್ ಮೂಲಕ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಆದರೆ, ಆ ಬಿಟ್‌ಕಾಯಿನ್‌ಗಳನ್ನು ಹೇಗೆ ಪಡೆದಿದ್ದಾನೆ ಎಂಬುದಕ್ಕೆ ಸಮರ್ಪಕ ವಿವರಣೆ ನೀಡಲು ವಿಫಲನಾಗಿದ್ದ ಎಂದು ಇಡಿ ತಿಳಿಸಿದೆ.
ತನಿಖೆಯಲ್ಲಿ ರಾಬಿನ್ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಎರಡು ಕಂಪನಿಗಳನ್ನು ಸ್ಥಾಪಿಸಿದ್ದೂ ಪತ್ತೆಯಾಗಿದೆ. ಲಂಡನ್‌ನಲ್ಲಿ Sigma Trading Corporation Ltd ಮತ್ತು Supriore Solutions Ltd ಹೆಸರಿನ ಸಂಸ್ಥೆಗಳನ್ನು ಆರಂಭಿಸಿ, ಅವುಗಳ ಹೆಸರಿನಲ್ಲಿ Wise.com ಮೂಲಕ ಬ್ಯಾಂಕ್ ಖಾತೆ ತೆರೆದಿದ್ದಾನೆ ಎನ್ನಲಾಗಿದೆ. ಆದರೆ, ಆ ಖಾತೆಗಳ ವಿವರಗಳನ್ನು ತನಿಖಾ ಸಂಸ್ಥೆಗೆ ನೀಡಿಲ್ಲ ಎಂದು ಇಡಿ ಆರೋಪಿಸಿದೆ.
ಅಲ್ಲದೆ, Mobikwik ಹಾಗೂ Moneypolo ಸೇರಿದಂತೆ ಹಲವು ವೇದಿಕೆಗಳ ಮೂಲಕ ವಿದೇಶಗಳಿಗೆ ದೊಡ್ಡ ಪ್ರಮಾಣದ ಹಣ ವರ್ಗಾವಣೆ ನಡೆಸಿದ್ದರೂ, ಸಂಬಂಧಿತ ವಾಲೆಟ್ ಖಾತೆಗಳ ವಿವರಗಳನ್ನು ಒದಗಿಸಿಲ್ಲ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಶ್ರೀಕಿ ನೀಡಿದ ಹೇಳಿಕೆಯ ಪ್ರಕಾರ, ಕಳವು ಮಾಡಲಾದ ಡಿಜಿಟಲ್ ಆಸ್ತಿಗಳನ್ನು ರಾಬಿನ್‌ಗೆ ನೀಡಲಾಗುತ್ತಿತ್ತು. ಬಳಿಕ ಆತ ವಿವಿಧ ಕ್ರಿಪ್ಟೋ ಟ್ರೇಡಿಂಗ್ ವೇದಿಕೆಗಳ ಮೂಲಕ ಅವುಗಳನ್ನು ಮಾರಾಟ ಮಾಡಿ ಕಮಿಷನ್ ಗಳಿಸುತ್ತಿದ್ದನು. ಈ ವ್ಯವಹಾರಗಳ ನೈಜ ವಿವರಗಳನ್ನು ತನ್ನ ಲೆಕ್ಕಪತ್ರಗಳಲ್ಲಿ ದಾಖಲಿಸದೆ, ಹಣದ ಮೂಲವನ್ನು ಮರೆಮಾಚಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ರಾಬಿನ್ ಅಪರಾಧದಿಂದ ಬಂದ ಹಣವನ್ನು ಹೊಂದಿಕೆ, ಸ್ವಾಧೀನ, ಮರೆಮಾಚುವಿಕೆ ಹಾಗೂ ವರ್ಗಾವಣೆಗೆ ನೇರವಾಗಿ ಸಹಕಾರ ನೀಡಿದ್ದಾನೆ. ತನಿಖೆಯ ವೇಳೆ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡದೆ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದರಿಂದ ತನಿಖೆಗೆ ಅಡ್ಡಿಯಾಗಿದೆ ಎಂದು ಇಡಿ ಹೇಳಿದೆ.
ಈ ಹಿನ್ನೆಲೆಯಲ್ಲಿ ರಾಬಿನ್ ಖಂಡೇಲ್ವಾಲ್ ಅವರನ್ನು ಬಂಧಿಸಿರುವ ಇಡಿ, ಶ್ರೀಕಿ ಸೈಬರ್ ಹ್ಯಾಕಿಂಗ್ ಪ್ರಕರಣದ ಹಣಕಾಸು ಜಾಲದ ಬಗ್ಗೆ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



