ಜೈಲಿಗೆ ಹೋದ್ರೂ ಹ್ಯಾಕಿಂಗ್ ನಿಲ್ಲಿಸದ ಕಿಲಾಡಿ: ಹ್ಯಾಕರ್ ಶ್ರೀಕಿ ಅಕ್ರಮ ಸಾಮ್ರಾಜ್ಯದ ರಹಸ್ಯ ಬಿಚ್ಚಿಟ್ಟ ED..!
ವೆಬ್‌ಸೈಟ್ ಹ್ಯಾಕಿಂಗ್, ಕ್ರಿಪ್ಟೊ ಆಸ್ತಿಗಳ ಕಳವು, ವಂಚನೆ, ಸುಲಿಗೆ ಹಾಗೂ ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವು ಗಂಭೀರ ಅಪರಾಧಗಳಲ್ಲಿ ಶ್ರೀಕಿ ಭಾಗಿಯಾಗಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಬೆಂಗಳೂರು: ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ಬಹುಕೋಟಿ ಬಿಟ್‌ಕಾಯಿನ್ ಹಗರಣದ ಮುಖ್ಯ ಆರೋಪಿ, ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ, ತನ್ನ ವಿರುದ್ಧ ಹಲವು ಎಫ್‌ಐಆರ್ (FIR) ಹಾಗೂ ಚಾರ್ಜ್‌ಶೀಟ್‌ಗಳು ದಾಖಲಾಗಿದ್ದರೂ ಹ್ಯಾಕಿಂಗ್ ಚಟುವಟಿಕೆಗಳನ್ನು ನಿರಂತರವಾಗಿ ಮುಂದುವರಿಸಿರುವುದು ಜಾರಿ ನಿರ್ದೇಶನಾಲಯದ (ED) ತನಿಖೆಯಿಂದ ಬಹಿರಂಗವಾಗಿದೆ.
ವೆಬ್‌ಸೈಟ್ ಹ್ಯಾಕಿಂಗ್, ಕ್ರಿಪ್ಟೊ ಆಸ್ತಿಗಳ ಕಳವು, ವಂಚನೆ, ಸುಲಿಗೆ ಹಾಗೂ ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವು ಗಂಭೀರ ಅಪರಾಧಗಳಲ್ಲಿ ಶ್ರೀಕಿ ಭಾಗಿಯಾಗಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಶ್ರೀಕಿಯ ಆಪ್ತ ಸಹಚರ ಹಾಗೂ ಕ್ರಿಪ್ಟೊ ವ್ಯಾಪಾರಿಯಾಗಿರುವ ರಾಬಿನ್ ಖಂಡೇಲ್ವಾಲ್ ಅವರೊಂದಿಗೆ ನಡೆಸಿದ ವಾಟ್ಸ್ಆಪ್ ಸಂಭಾಷಣೆಗಳಲ್ಲಿ ಹಲವು ಮಹತ್ವದ ಮಾಹಿತಿಗಳು ಪತ್ತೆಯಾಗಿವೆ.
ವಿದೇಶಿ ಸಂಸ್ಥೆಗಳಿಂದ e-SIMಗಳನ್ನು ಖರೀದಿಸಿರುವುದು, ಜೊತೆಗೆ ಪ್ರೋಟಾನ್ VPN ಸೇರಿದಂತೆ ವಿವಿಧ ಸಾಫ್ಟ್‌ವೇರ್ ಸೇವೆಗಳ ಚಂದಾದಾರಿಕೆ ಪಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಜಾರಿ ನಿರ್ದೇಶನಾಲಯ ಬಂಧನದ ವೇಳೆ ಶ್ರೀಕಿಯಿಂದ ವಶಪಡಿಸಿಕೊಂಡ ಮೊಬೈಲ್ ಫೋನ್ ಪರಿಶೀಲನೆಯಿಂದ ಈ ಮಾಹಿತಿಗಳು ಲಭ್ಯವಾಗಿವೆ. ವಾಟ್ಸ್ಆಪ್ ಚಾಟ್‌ಗಳ ಪ್ರಕಾರ, ಶ್ರೀಕಿಗಾಗಿ ರಾಬಿನ್ ಖಂಡೇಲ್ವಾಲ್ ಈ ಸೇವೆಗಳನ್ನು ಖರೀದಿಸಿದ್ದರು ಎನ್ನಲಾಗಿದೆ.
ಆದರೆ, ಈ ಸೇವೆಗಳಿಗಾಗಿ ವಿದೇಶಿ ಸಂಸ್ಥೆಗಳಿಗೆ ಹಣವನ್ನು ಹೇಗೆ ಪಾವತಿಸಲಾಯಿತು ಹಾಗೂ ಅದರ ಉದ್ದೇಶವೇನು ಎಂಬ ಪ್ರಶ್ನೆಗೆ ಸಂಬಂಧಿಸಿದಂತೆ ಶ್ರೀಕಿ ಮತ್ತು ಖಂಡೇಲ್ವಾಲ್ ED ಮುಂದೆ ಪರಸ್ಪರ ವಿರುದ್ಧ ಹೇಳಿಕೆಗಳನ್ನು ನೀಡಿದ್ದಾರೆ.
ವಿದೇಶಿ ಸಂಸ್ಥೆಗಳಿಗೆ ಹಣ ಪಾವತಿಸಿದ ಬಗ್ಗೆ ಸಮರ್ಪಕ ವಿವರ ನೀಡಲು ಇಬ್ಬರೂ ವಿಫಲರಾಗಿದ್ದಾರೆ ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ ತನಿಖೆಯಲ್ಲಿ ಮತ್ತೊಂದು ಮಹತ್ವದ ಅಂಶ ಬೆಳಕಿಗೆ ಬಂದಿದ್ದು, ಶ್ರೀಕಿ ಅಮೆಜಾನ್ ವೆಬ್ ಸೇವೆಗಳು (AWS) ಕ್ಲೌಡ್ ಸರ್ವರ್‌ಗಳನ್ನು ಬಳಸುತ್ತಿದ್ದನೆಂದು ತಿಳಿದುಬಂದಿದೆ. ಅಲ್ಲದೆ, ಹ್ಯಾಕಿಂಗ್ ಮೂಲಕ ಕಳವು ಮಾಡಿದ್ದ ಕ್ರಿಪ್ಟೊ ಆಸ್ತಿಗಳನ್ನು ವಿದೇಶಿ ಕ್ರಿಪ್ಟೊ ವಿನಿಮಯ ವೇದಿಕೆಗಳ ಮೂಲಕ ಮಾರಾಟ ಮಾಡಿ ಅಕ್ರಮ ಆದಾಯವನ್ನು ಮರೆಮಾಚುತ್ತಿದ್ದನೆಂದು ಇಡಿ ಹೇಳಿದೆ.
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ನಡೆದ ತನಿಖೆಯಲ್ಲಿ, ಹ್ಯಾಕಿಂಗ್ ಮೂಲಕ ಕಳವು ಮಾಡಿದ ಬಿಟ್‌ಕಾಯಿನ್ ಮತ್ತು ಇತರ ಕ್ರಿಪ್ಟೊ ಆಸ್ತಿಗಳನ್ನು ಶ್ರೀಕಿ ವೈಯಕ್ತಿಕ ಉದ್ದೇಶಗಳಿಗೆ ಬಳಸಿದ್ದಾನೆ ಎಂಬುದು ದೃಢಪಟ್ಟಿದೆ. ಆನ್‌ಲೈನ್ ಬೆಟ್ಟಿಂಗ್, ವಿದೇಶ ಪ್ರವಾಸ, ಐಷಾರಾಮಿ ಹೋಟೆಲ್‌ಗಳಲ್ಲಿ ವಾಸ್ತವ್ಯ, ಕ್ಯಾಸಿನೊ ಪಾವತಿಗಳು ಹಾಗೂ ಖಾಸಗಿ ವಿಮಾನ ಬಾಡಿಗೆಗೆ ಈ ಹಣವನ್ನು ಬಳಸಲಾಗಿತ್ತು ಎಂದೂ ಆರೋಪಿಸಿದೆ.
ತನಿಖೆಯ ವೇಳೆ ಕಳವು ಮಾಡಲಾದ ಮಾಹಿತಿಯನ್ನು ಬಳಸಿ ಸುಲಿಗೆ ನಡೆಸಿರುವುದೂ ಬಹಿರಂಗವಾಗಿದೆ. ಅಕ್ರಮ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳ ಮೂಲಕ ವರ್ಗಾಯಿಸಿ ಅದರ ಮೂಲವನ್ನು ಮರೆಮಾಚುವ ಪ್ರಯತ್ನ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
2017ರಲ್ಲಿ ತುಮಕೂರಿನ ನ್ಯೂ ಎಕ್ಸ್ಟೆನ್ಷನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಕಳವು ಮಾಡಲಾದ ಕ್ರಿಪ್ಟೊ ಆಸ್ತಿಗಳ ಮಾರಾಟದಿಂದ ಬಂದ ಸುಮಾರು ರೂ.3.34 ಕೋಟಿ ಹಣವನ್ನು ಶ್ರೀಕಿ ಮತ್ತು ಆತನ ಸಹಚರರು ವೈಯಕ್ತಿಕ ಲಾಭಕ್ಕಾಗಿ ಬಳಸಿರುವುದಾಗಿ ಸಿಐಡಿ ನಡೆಸಿದ ಫೊರೆನ್ಸಿಕ್ ಆಡಿಟ್ ವರದಿ ತಿಳಿಸಿದೆ. ಈ ವರದಿಯನ್ನು ED ತನ್ನ ತನಿಖೆಯಲ್ಲಿ ಬಳಸಿಕೊಂಡಿದೆ.
ಫೊರೆನ್ಸಿಕ್ ವರದಿ ಪ್ರಕಾರ, ರಾಬಿನ್ ಖಂಡೇಲ್ವಾಲ್ ಸುಮಾರು 76.044 ಬಿಟ್‌ಕಾಯಿನ್ (ಅಂದಿನ ಮೌಲ್ಯ ಸುಮಾರು ರೂ.3.35 ಕೋಟಿ) ಹಾಗೂ 100 ಎಥೀರಿಯಂ (ಸುಮಾರು ರೂ.50.34 ಲಕ್ಷ) ಪಡೆದಿದ್ದಾನೆ. ಮೂರು ವರ್ಷಗಳ ಅವಧಿಯಲ್ಲಿ ಖಂಡೇಲ್ವಾಲ್, ಶ್ರೀಕಿ ಸೂಚಿಸಿದ್ದ ವಿವಿಧ ಖಾತೆಗಳಿಗೆ ಸುಮಾರು ರೂ.3.85 ಕೋಟಿ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ.
ಇದಲ್ಲದೆ, 2018ರಲ್ಲಿ ಆನ್‌ಲೈನ್ ಗೇಮಿಂಗ್ ವೇದಿಕೆ ಪೋಕರ್‌ಬಾಜಿ ವೆಬ್‌ಸೈಟ್ ಹ್ಯಾಕ್ ಮಾಡಲಾಗಿದ್ದು, ಸುಮಾರು ರೂ.70 ಲಕ್ಷ ಹಣ ಕಳವು ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಬಳಿಕ ಆ ಸಂಸ್ಥೆಯ ಮಾಲೀಕರಿಂದ ರೂ.2 ಕೋಟಿ ಸುಲಿಗೆ ಮಾಡಲು ಈ ಹ್ಯಾಕಿಂಗ್ ಅನ್ನು ಬಳಸಲಾಗಿತ್ತು ಎಂದು ರಾಬಿನ್ ಖಂಡೇಲ್ವಾಲ್ ED ಮುಂದೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ವಿಚಾರವನ್ನು ಶ್ರೀಕಿಯೂ ಒಪ್ಪಿಕೊಂಡಿದ್ದಾನೆ ಎಂದು ಇಡಿ ತಿಳಿಸಿದೆ.
ಪ್ರಕರಣದ ತನಿಖೆ ಮುಂದುವರಿದಿದ್ದು, ಶ್ರೀಕಿ ಮತ್ತು ಆತನ ಸಹಚರರ ವಿರುದ್ಧ ಇನ್ನಷ್ಟು ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



