ಸಿಎಂ ಕುರ್ಚಿ ನನ್ನದಲ್ಲ, ಜನರದ್ದು; ಸಿದ್ದರಾಮಯ್ಯ ನುಡಿದಂತೆ ನಡೆದಿದ್ದಾರೆ: ಸಿಎಂ ಡಿ.ಕೆ ಶಿವಕುಮಾರ್; Video
ನನ್ನ ವೈಯಕ್ತಿಕ ವಿಚಾರ ಬದಿಗೊತ್ತಿ, ರಾಜ್ಯದ ಜನರ ಸೇವೆಗೆ ಸಂಕಲ್ಪ ಮಾಡಿ ಈ ಅಧಿಕಾರ ಸ್ವೀಕರಿಸಿದ್ದೇನೆ. 'ಹಿಂದಿನ ಹೆಜ್ಜೆಗಳನ್ನು ಮರೆತವನು ಮುಂದಿನ ಹೆಜ್ಜೆ ಇಡಲಾರ' ಎಂಬ ಮಾತನ್ನು ನಂಬಿರುವವನು ನಾನು. ನಾವು ನಮ್ಮ ಬೇರು ಮರೆತರೆ ಫಲ ಸಿಗುವುದಿಲ್ಲ ಎಂದು ಹೇಳುತ್ತಿರುತ್ತೇನೆ.

ಬೆಂಗಳೂರು: ಸಿಎಂ ಕುರ್ಚಿ ಈ ಡಿ ಕೆ ಶಿವಕುಮಾರನದ್ದಲ್ಲ, ಇದು ಜನರ ಕುರ್ಚಿ. ಜನರು ಕೊಟ್ಟಿರುವ ಅಧಿಕಾರವನ್ನು ಜನರ ಸೇವೆಗೆ ಮುಡಿಪಾಗಿಡುತ್ತೇನೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ವಿಧಾನಸೌಧದಲ್ಲಿ ಬುಧವಾರ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿ ಮೊದಲ ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಶಿವಕುಮಾರ್ ಅವರು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು.
“ನನ್ನ ವೈಯಕ್ತಿಕ ವಿಚಾರ ಬದಿಗೊತ್ತಿ, ರಾಜ್ಯದ ಜನರ ಸೇವೆಗೆ ಸಂಕಲ್ಪ ಮಾಡಿ ಈ ಅಧಿಕಾರ ಸ್ವೀಕರಿಸಿದ್ದೇನೆ. 'ಹಿಂದಿನ ಹೆಜ್ಜೆಗಳನ್ನು ಮರೆತವನು ಮುಂದಿನ ಹೆಜ್ಜೆ ಇಡಲಾರ' ಎಂಬ ಮಾತನ್ನು ನಂಬಿರುವವನು ನಾನು. ನಾವು ನಮ್ಮ ಬೇರು ಮರೆತರೆ ಫಲ ಸಿಗುವುದಿಲ್ಲ ಎಂದು ಹೇಳುತ್ತಿರುತ್ತೇನೆ.
ಇಂದು ಹೊಸ ದಿನ. ಹೊಸ ಕೆಲಸ ಮಾಡಿ, ಹೊಸ ಅವಕಾಶಗಳನ್ನು ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯದ ಜನತೆ ನೀಡಿದ್ದಾರೆ. ಬಾಕಿ ಇರುವ 2 ವರ್ಷಗಳಲ್ಲಿ ರಾಜ್ಯದ ಜನರ ಸೇವೆ ಮಾಡಲು ಏನೆಲ್ಲಾ ಸೇವೆ ಮಾಡಬಹುದು, ರಾಜ್ಯದ ಕಲ್ಯಾಣಕ್ಕೆ ನಾನು ಹೊಸ ಅವಕಾಶಗಳನ್ನು ಹುಡುಕುತ್ತಿದ್ದೇನೆ” ಎಂದು ತಿಳಿಸಿದರು. ಎಲ್ಲಾ ಗೊಂದಲಗಳಿಗೆ ಹೈಕಮಾಂಡ್ ನಾಯಕರು ತೆರೆ ಎಳೆದಿದ್ದಾರೆ“ಮಾಧ್ಯಮಗಳು ಇಷ್ಟು ದಿನ ಅಧಿಕಾರ ಹಸ್ತಾಂತರ, ನಾಯಕತ್ವ ಬದಲಾವಣೆ ವಿಚಾರವಾಗಿ ಅನೇಕ ಸುದ್ದಿ, ಹೇಳಿಕೆಗಳನ್ನು ಪ್ರಸಾರ ಮಾಡುತ್ತಿದ್ದವು.
ಮಲಗಿದ್ದವರನ್ನು ಎಬ್ಬಿಸಿ, ಎದ್ದಿದ್ದವರನ್ನು ಮಲಗಿಸುತ್ತಿದ್ದರು. ನಮ್ಮ ಪಕ್ಷದ ವರಿಷ್ಠರು ಇದಕ್ಕೆಲ್ಲ ಈಗ ತೆರೆ ಎಳೆದಿದ್ದಾರೆ. ಶುಭ ಗಳಿಗೆ, ಶುಭ ಮುಹೂರ್ತ ಬರುತ್ತದೆ. ಸ್ವಲ್ಪ ತಾಳ್ಮೆಯಿಂದ ಕಾಯಿರಿ ಎಂದು ಹೇಳುತ್ತಲೇ ಇದ್ದೆ. ಇಂದು ಸಂಜೆ 4.15ಕ್ಕೆ ಶುಭ ಗಳಿಗೆ, ಶುಭ ಮುಹೂರ್ತಕ್ಕೆ ಮಾಧ್ಯಮಗಳು ಹಾಗೂ ರಾಜ್ಯದ ಜನತೆ ಸಾಕ್ಷಿಯಾಗಿದ್ದಾರೆ” ಎಂದು ತಿಳಿಸಿದರು.
ರಾಜ್ಯದ ಆಡಳಿತದಲ್ಲಿ ಹೊಸ ಬೆಳಕು ಮೂಡಿಸಲು ನನ್ನ 40 ವರ್ಷಗಳ ರಾಜಕೀಯ ಅನುಭವದಲ್ಲಿ ಪ್ರಯತ್ನ ಮಾಡುತ್ತೇನೆ. 1985ರಿಂದ ಇಲ್ಲೆಯವರೆಗೂ ಕಷ್ಟ ನೋಡಿದ್ದೇನೆ, ಸುಖ ನೋಡಿದ್ದೇನೆ. ಚಿಕ್ಕ ವಯಸ್ಸಿನಲ್ಲೇ ಅಧಿಕಾರ ನೋಡಿದ್ದೇನೆ. ಅನೇಕ ರಾಜಕೀಯ ತಂತ್ರಗಳ ಬಲೆಗೆ ಬಿದ್ದಿದ್ದೇನೆ. ತಿಹಾರ್ ಜೈಲಿಗೆ ಹೋಗುವ ಪರಿಸ್ಥಿತಿ ಬಂತು. ನಾನು ಎಂದಿಗೂ ಎದೆಗುಂದಲಿಲ್ಲ. ನಾನು ಭರವಸೆಗಳ ಮೇಲೆ ಬದುಕಿದೆ. ಇದೇ ವಿಶ್ವಾಸ ಮತ್ತೆ ರಾಜ್ಯದ ಜನರ ಸೇವೆ ಮಾಡಿ, ಸಾಕ್ಷಿಗುಡ್ಡೆ ಬಿಟ್ಟು ಹೋಗಲು ಅವಕಾಶ ಸಿಕ್ಕಿದೆ” ಎಂದು ತಿಳಿಸಿದರು.
ಕಾಂಗ್ರೆಸ್ ಕಾರ್ಯಕರ್ತರು, ಜನರು ಬಹಳ ನಂಬಿಕೆಯಿಂದ ಕೊಟ್ಟಿರುವ ಅವಕಾಶ. ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಈ ತೀರ್ಮಾನ ಮಾಡಿದ್ದಾರೆ. ಇದು ಸ್ವಲ್ಪ ತಡವಾಗಿದೆ. ಆದರೂ ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ನಡೆದಿದ್ದಾರೆ.
ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಿರುವುದಾಗಿ ಅವರು ಹೇಳುತ್ತಲೇ ಇದ್ದರು. ನಮ್ಮ ವರಿಷ್ಠರು ನಮ್ಮಿಬ್ಬರನ್ನು ಕರೆಸಿ ಈ ತೀರ್ಮಾನ ಮಾಡಿದಾಗ, ಸಿದ್ದರಾಮಯ್ಯ ಅವರು ಬಹಳ ಸಂತೋಷದಿಂದ ನನಗೆ ಜಾಗ ಮಾಡಿಕೊಟ್ಟಿದ್ದಾರೆ. ನಮ್ಮ ಪಕ್ಷದ ಎಲ್ಲಾ ನಾಯಕರು ಒಗ್ಗಟ್ಟಿನಿಂದ ಬೆಂಬಲ ನೀಡಿ ಜವಾಬ್ದಾರಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



