ಪ್ರೌಢಶಾಲೆ ಹಂತದಲ್ಲಿ ಶಾಲೆ ತೊರೆಯುವ ಬಾಲಕಿಯರ ಪ್ರಮಾಣ: ಬಿಹಾರ, ಉತ್ತರ ಪ್ರದೇಶಕ್ಕಿಂತ ಕರ್ನಾಟಕದಲ್ಲಿ ಹೆಚ್ಚು!
2025-26ರ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ 9 ಮತ್ತು 10ನೇ ತರಗತಿಯ 13.9% ಬಾಲಕಿಯರು ಶಾಲೆ ತೊರೆದಿದ್ದಾರೆ.

ಮಂಗಳೂರು: ಕಳೆದ ಮೂರು ವರ್ಷಗಳಲ್ಲಿ ಪ್ರೌಢಶಾಲಾ ಹಂತದಲ್ಲಿ ಬಾಲಕಿಯರ ಶಾಲಾ ತೊರೆಯುವಿಕೆ (Dropout) ಪ್ರಮಾಣದಲ್ಲಿ ಇಳಿಕೆ ಕಂಡಿದ್ದರೂ, ಕರ್ನಾಟಕವು ಇನ್ನೂ ದೇಶದ ಪ್ರಮುಖ ರಾಜ್ಯಗಳಲ್ಲಿ ಅತಿ ಹೆಚ್ಚು ಡ್ರಾಪ್‌ಔಟ್ ಪ್ರಮಾಣ ಹೊಂದಿರುವ ರಾಜ್ಯವಾಗಿ ಮುಂದುವರಿದಿದೆ. ಈ ಮಾಹಿತಿ ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾದ ಯುನಿಫೈಡ್ ಡಿಸ್ಟ್ರಿಕ್ಟ್ ಇನ್ಫರ್ಮೇಷನ್ ಸಿಸ್ಟಂ ಫಾರ್ ಎಜುಕೇಶನ್ ಪ್ಲಸ್ (UDISE+) 2025-26ರ ಅಂಕಿ-ಅಂಶಗಳಿಂದ ಬಹಿರಂಗವಾಗಿದೆ.
2025-26ರ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ 9 ಮತ್ತು 10ನೇ ತರಗತಿಯ 13.9% ಬಾಲಕಿಯರು ಶಾಲೆ ತೊರೆದಿದ್ದಾರೆ. ಇದು ರಾಷ್ಟ್ರದ ಸರಾಸರಿ 8%ಕ್ಕಿಂತ ಬಹಳ ಹೆಚ್ಚಾಗಿದೆ. ರಾಜ್ಯದಲ್ಲಿ ಈ ಪ್ರಮಾಣ 2023-24ರಲ್ಲಿ 19.6%, 2024-25ರಲ್ಲಿ 14.6% ಇದ್ದು, ಇದೀಗ 13.9%ಕ್ಕೆ ಇಳಿದಿದ್ದರೂ, ದೇಶದ ದೊಡ್ಡ ರಾಜ್ಯಗಳಲ್ಲಿ ಅತಿ ಹೆಚ್ಚು ಡ್ರಾಪ್‌ಔಟ್ ಪ್ರಮಾಣ ಹೊಂದಿರುವ ರಾಜ್ಯ ಎಂಬ ಸ್ಥಾನದಿಂದ ಹೊರಬಂದಿಲ್ಲ.
ಇದೇ ಅವಧಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿಯೂ ಪ್ರೌಢಶಾಲಾ ಹಂತದ ಬಾಲಕಿಯರ ಡ್ರಾಪ್‌ಔಟ್ ಪ್ರಮಾಣ ಸತತವಾಗಿ ಇಳಿಕೆಯಾಗಿದೆ. 2023-24ರಲ್ಲಿ 12.6% ಇದ್ದದ್ದು, 2024-25ರಲ್ಲಿ 9.6% ಹಾಗೂ 2025-26ರಲ್ಲಿ 8%ಕ್ಕೆ ಇಳಿದಿದೆ. ಇದರಿಂದ ಇತರ ರಾಜ್ಯಗಳ ಪ್ರಗತಿಗೆ ಹೋಲಿಸಿದರೆ ಕರ್ನಾಟಕದ ಸುಧಾರಣೆಯ ವೇಗ ಕಡಿಮೆಯಾಗಿದೆ ಎಂಬುದು ಸ್ಪಷ್ಟವಾಗಿದೆ.
ಈ ವಿಭಾಗದಲ್ಲಿ 15.6% ಡ್ರಾಪ್‌ಔಟ್ ಪ್ರಮಾಣದೊಂದಿಗೆ ಕೇಂದ್ರಾಡಳಿತ ಪ್ರದೇಶ ಲಡಾಖ್ ದೇಶದಲ್ಲೇ ಅತಿ ಹೆಚ್ಚು ಡ್ರಾಪ್‌ಔಟ್ ಹೊಂದಿದೆ.
2023-24ರಲ್ಲಿ 25.1% ಎಂಬ ಆತಂಕಕಾರಿ ಡ್ರಾಪ್‌ಔಟ್ ಪ್ರಮಾಣ ದಾಖಲಿಸಿದ್ದ ಬಿಹಾರ, 2025-26ರಲ್ಲಿ ಅದನ್ನು 9.1%ಕ್ಕೆ ಇಳಿಸುವಲ್ಲಿ ಯಶಸ್ವಿಯಾಗಿದೆ.
ಉತ್ತರ ಪ್ರದೇಶದಲ್ಲಿ 2023-24 ಹಾಗೂ 2025-26ರಲ್ಲಿ 7.3% ಡ್ರಾಪ್‌ಔಟ್ ಪ್ರಮಾಣ ದಾಖಲಾಗಿದ್ದು, 2024-25ರಲ್ಲಿ ಅದು 5.1%ಕ್ಕೆ ಇಳಿದಿತ್ತು.
ಪ್ರಮುಖ ರಾಜ್ಯಗಳ ಪೈಕಿ ಅಸ್ಸಾಂ ಕೂಡ 13.9% ಡ್ರಾಪ್‌ಔಟ್ ಪ್ರಮಾಣದೊಂದಿಗೆ ಕರ್ನಾಟಕದ ಮಟ್ಟದಲ್ಲೇ ಇದ್ದರೆ, ಗುಜರಾತ್ 13.3% ನಂತರದ ಸ್ಥಾನದಲ್ಲಿದೆ.
ಇದಕ್ಕೆ ವಿರುದ್ಧವಾಗಿ, ಕೇರಳ (3%), ತಮಿಳುನಾಡು (3.2%) ಹಾಗೂ ಹರಿಯಾಣ (3.8%) ಪ್ರೌಢಶಾಲಾ ಹಂತದಲ್ಲಿ ಬಾಲಕಿಯರ ಅತಿ ಕಡಿಮೆ ಡ್ರಾಪ್‌ಔಟ್ ಪ್ರಮಾಣ ದಾಖಲಿಸಿದ ರಾಜ್ಯಗಳಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



