ರಾಜ್‌ಕುಮಾರ್ ರಸ್ತೆಯಲ್ಲಿ ಹೈಡ್ರಾಮಾ; ಮೊಬೈಲ್ ಅಂಗಡಿ ಸಿಬ್ಬಂದಿಗಳ ನಡುವೆ ಮಾರಾಮಾರಿ, 17 ಮಂದಿ ವಿರುದ್ಧ ಪ್ರಕರಣ, Video
ಜುಲೈ 23, 2026ರ ರಾತ್ರಿ ಸುಮಾರು 9.40 ಗಂಟೆಗೆ ರಾಜ್‌ಕುಮಾರ್ ರಸ್ತೆಯಲ್ಲಿರುವ ಕಲರ್ಸ್ ಮೊಬೈಲ್ (Colours Mobile) ಅಂಗಡಿ ಎದುರು ಈ ಘಟನೆ ನಡೆದಿದೆ ಎನ್ನಲಾಗಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನ ರಾಜ್‌ಕುಮಾರ್ ರಸ್ತೆಯಲ್ಲಿ ಎರಡು ಮೊಬೈಲ್ ಅಂಗಡಿಗಳ ಮಾಲೀಕರು ಹಾಗೂ ಅವರ ಸಿಬ್ಬಂದಿಗಳ ನಡುವೆ ನಡೆದ ಭೀಕರ ಮಾರಾಮಾರಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಳಿಸಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿತು.
ತಕ್ಷಣ ಸ್ಥಳಕ್ಕಾಗಮಿಸಿದ ಮಾಗಡಿ ರಸ್ತೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು 17 ಮಂದಿಯ ವಿರುದ್ಧ ಗಲಾಟೆ (Affray) ಪ್ರಕರಣ ದಾಖಲಿಸಿದ್ದಾರೆ. ಜುಲೈ 23, 2026ರ ರಾತ್ರಿ ಸುಮಾರು 9.40 ಗಂಟೆಗೆ ರಾಜ್‌ಕುಮಾರ್ ರಸ್ತೆಯಲ್ಲಿರುವ ಕಲರ್ಸ್ ಮೊಬೈಲ್ (Colours Mobile) ಅಂಗಡಿ ಎದುರು ಈ ಘಟನೆ ನಡೆದಿದೆ ಎನ್ನಲಾಗಿದೆ.
ಗಸ್ತಿನಲ್ಲಿದ್ದ ಸಹಾಯಕ ಪೊಲೀಸ್ ಉಪನಿರೀಕ್ಷಕರು (ಎಎಸ್‌ಐ) ದಾಖಲಿಸಿರುವ ಎಫ್‌ಐಆರ್ ಪ್ರಕಾರ, ಸುಮಾರು 20 ಮಂದಿ ರಸ್ತೆಯಲ್ಲೇ ಪರಸ್ಪರ ನಿಂದನೆ ಮಾಡುತ್ತಾ ಕೈಕೈ ಮಿಲಾಯಿಸುತ್ತಿರುವುದು ಕಂಡುಬಂದಿತ್ತು. ಸಾರ್ವಜನಿಕರ ಎದುರೇ ನಡೆದ ಈ ಗಲಾಟೆಯಿಂದ ರಸ್ತೆಯಲ್ಲಿ ಭಾರಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಸಣ್ಣ ವಿಚಾರಕ್ಕೆ ದೊಡ್ಡ ಗಲಾಟೆ
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಕಲರ್ಸ್ ಮೊಬೈಲ್ ಮಾಲೀಕ ಸಿದ್ದರಾಜು ಆರ್ (40) ಹಾಗೂ ಸ್ಟಾರ್ ಮೊಬೈಲ್ (Star Mobile) ಮಾಲೀಕ ದೀಪಕ್ (30) ಈ ಗಲಾಟೆಯ ಪ್ರಮುಖ ಪ್ರಚೋದಕರಾಗಿರುವುದು ತಿಳಿದುಬಂದಿದೆ.
ಸಣ್ಣ ವಿಚಾರಕ್ಕೆ ಆರಂಭವಾದ ವಾಗ್ವಾದ ಕ್ಷಣಾರ್ಧದಲ್ಲೇ ಹಿಂಸಾತ್ಮಕ ಘರ್ಷಣೆಯಾಗಿ ಮಾರ್ಪಟ್ಟಿದ್ದು, ಎರಡೂ ಗುಂಪಿನವರು ಪರಸ್ಪರ ಹಲ್ಲೆ ನಡೆಸಿದ್ದಾರೆ. ಪರಿಣಾಮ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಸಮೀಪದ ಅಂಗಡಿಗಳು ಹಾಗೂ ಆಸ್ತಿಪಾಸ್ತಿಗೆ ಹಾನಿಯಾಗುವ ಆತಂಕವೂ ಎದುರಾಯಿತು.
ಸಾರ್ವಜನಿಕರಲ್ಲಿ ಭೀತಿ
ಎರಡೂ ಗುಂಪಿನವರ ಆಕ್ರಮಣಕಾರಿ ವರ್ತನೆಯಿಂದ ಅಲ್ಲಿದ್ದ ಸಾರ್ವಜನಿಕರು ಭಯಭೀತರಾಗಿದ್ದು, ವಾಹನ ಸಂಚಾರಕ್ಕೂ ತೀವ್ರ ಅಡಚಣೆ ಉಂಟಾಯಿತು. ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
17 ಮಂದಿಯ ವಿರುದ್ಧ ಪ್ರಕರಣ
ಘಟನೆ ಸಂಬಂಧ ಮಾಗಡಿ ರಸ್ತೆ ಪೊಲೀಸರು ಸ್ವಯಂಪ್ರೇರಿತವಾಗಿ (Suo Motu) ಪ್ರಕರಣ ದಾಖಲಿಸಿದ್ದು, ಒಟ್ಟು 17 ಆರೋಪಿಗಳನ್ನು ಹೆಸರಿಸಿದೆ.
ಇನ್ನೂ ಕೆಲ ಗುರುತಿಸಲಾಗದ ವ್ಯಕ್ತಿಗಳೂ ಗಲಾಟೆಯಲ್ಲಿ ಭಾಗಿಯಾಗಿರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದ್ದು, ಎಲ್ಲಾ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS)-2023ರ ಸೆಕ್ಷನ್ 194(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



