ರಾಜ್ಯ

ಉನ್ನತ ಶಿಕ್ಷಣಕ್ಕೆ ಹಣದ ಸಮಸ್ಯೆ: ಕೋಲಾರದಲ್ಲಿ ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿದ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕನಿಕಾ ಸಿಕ್ರಿವಾಲ್, ಮೃತಪಟ್ಟವರನ್ನು ಪ್ರಮೀಳಾ ಬಿ.ವಿ. (37ವ), ಅವರ ಪುತ್ರಿ ಸ್ವಪ್ನಾ (22ವ) ಹಾಗೂ ಪುತ್ರ ರಾಮಚರಣ್ (19ವ) ಎಂದು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.

ಉನ್ನತ ಶಿಕ್ಷಣಕ್ಕೆ ಹಣದ ಸಮಸ್ಯೆ: ಕೋಲಾರದಲ್ಲಿ ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
Published On :

ಕೋಲಾರ: ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಸಾಲ ಪಡೆದಿದ್ದ ಮಹಿಳೆಯೊಬ್ಬರು ತೀವ್ರ ಆರ್ಥಿಕ ಸಂಕಷ್ಟವನ್ನು ತಾಳಲಾರದೆ ಕೊನೆಗೆ ಜೀವನದ ಎದುರು ಸೋತರು. ಪುತ್ರ ಖಾಸಗಿ ಕಾಲೇಜೊಂದರಲ್ಲಿ ಉನ್ನತ ಶಿಕ್ಷಣ ಮುಂದುವರಿಸಲು ಬಯಸಿದ್ದರೂ, ಸುಮಾರು 15 ಲಕ್ಷ ರೂಪಾಯಿ ಸಾಲವನ್ನು ತೀರಿಸುವ ಸ್ಥಿತಿಯಲ್ಲಿ ಅವರು ಇರಲಿಲ್ಲ.

ಕೋಲಾರ ಜಿಲ್ಲೆಯ ಚಾತ್ರಕೋಡಿ ಹಳ್ಳಿಯ ಕೃಷಿ ಕೆರೆಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ತಾಯಿ ಹಾಗೂ ಇಬ್ಬರು ಮಕ್ಕಳ ಮೃತದೇಹಗಳು ಪತ್ತೆಯಾಗಿವೆ. ಈ ಘಟನೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿದ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕನಿಕಾ ಸಿಕ್ರಿವಾಲ್, ಮೃತಪಟ್ಟವರನ್ನು ಪ್ರಮೀಳಾ ಬಿ.ವಿ. (37ವ), ಅವರ ಪುತ್ರಿ ಸ್ವಪ್ನಾ (22ವ) ಹಾಗೂ ಪುತ್ರ ರಾಮಚರಣ್ (19ವ) ಎಂದು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.

ಸ್ವಪ್ನಾ ಇತ್ತೀಚೆಗೆ ವಾಣಿಜ್ಯ ಪದವಿ (ಬಿ.ಕಾಂ.) ಪೂರ್ಣಗೊಳಿಸಿದ್ದು, ರಾಮಚರಣ್ ದ್ವಿತೀಯ ಪಿಯುಸಿ ಮುಗಿಸಿ ಉನ್ನತ ಶಿಕ್ಷಣಕ್ಕಾಗಿ ಪ್ರವೇಶ ನಿರೀಕ್ಷಿಸುತ್ತಿದ್ದರು.

ಪ್ರಾಥಮಿಕ ತನಿಖೆಯಲ್ಲಿ, ಪ್ರಮೀಳಾ ಅವರ ಪತಿ ಸುರೇಶ್ ಎನ್., ಆಟೋ ಚಾಲಕರಾಗಿದ್ದು, 10 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಪ್ರಮೀಳಾ ಅವರು ಸ್ವಸಹಾಯ ಸಂಘಗಳು (SHGs) ಹಾಗೂ ಖಾಸಗಿ ಹಣಕಾಸುದಾರರಿಂದ 5 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಒಟ್ಟು 15 ಲಕ್ಷ ರೂಪಾಯಿ ಸಾಲದ ಹೊರೆ ಅವರನ್ನು ತೀವ್ರ ಆರ್ಥಿಕ ಸಂಕಷ್ಟಕ್ಕೆ ತಳ್ಳಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ತಮ್ಮ ಪುತ್ರಿ ಮೊದಲು ಪದವಿ ಶಿಕ್ಷಣ ಪೂರ್ಣಗೊಳಿಸಿ ಬಳಿಕ ಸ್ನಾತಕೋತ್ತರ ಶಿಕ್ಷಣ ಪಡೆಯುವಂತೆ ಪ್ರಮೀಳಾ ಸಲಹೆ ನೀಡಿದ್ದರು. ಇದೇ ವೇಳೆ ಪುತ್ರ ರಾಮಚರಣ್ ಚಿಕ್ಕಬಳ್ಳಾಪುರದ ಖಾಸಗಿ ಕಾಲೇಜೊಂದರ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, ಪ್ರವೇಶಕ್ಕೆ ಆಯ್ಕೆಯಾಗಿದ್ದರು.

ಪುತ್ರನ ಕಾಲೇಜು ಅಡ್ಮಿಷನ್ ಗೆ ಆರ್ಥಿಕ ನೆರವು ಪಡೆಯಲು ಪ್ರಮೀಳಾ ಹಲವು ಕಡೆ ಪ್ರಯತ್ನಿಸಿದರೂ ಅಗತ್ಯ ಸಹಾಯ ದೊರೆಯಲಿಲ್ಲ. ಇದರಿಂದ ಮನನೊಂದ ಅವರು ಪುತ್ರ ಹಾಗೂ ಪುತ್ರಿಯೊಂದಿಗೆ ಕೃಷಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಎಸ್‌ಪಿ ಕನಿಕಾ ಸಿಕ್ರಿವಾಲ್, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಸಮಾಲೋಚನಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಅವರು ಜಿಲ್ಲಾಡಳಿತ ಅಥವಾ ನನ್ನ ಕಚೇರಿಯನ್ನು ಸಂಪರ್ಕಿಸಿದ್ದರೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿತ್ತು ಎಂದು ಹೇಳಿದರು.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.

ಸಹಾಯವಾಣಿ

ನಿಮಗೆ ಆತ್ಮಹತ್ಯೆಯ ಆಲೋಚನೆಗಳು ಬರುತ್ತಿದ್ದರೆ, ಅಥವಾ ನಿಮ್ಮ ಸ್ನೇಹಿತರು ಅಥವಾ ಕುಟುಂಬದವರ ಬಗ್ಗೆ ಆತಂಕವಿದ್ದರೆ, ಅಥವಾ ಭಾವನಾತ್ಮಕ ಬೆಂಬಲದ ಅಗತ್ಯವಿದ್ದರೆ, ನಿಮ್ಮ ಮಾತು ಕೇಳಲು ಮತ್ತು ನೆರವಾಗಲು ಸದಾ ಯಾರಾದರೂ ಇದ್ದಾರೆ.

  • ಸ್ನೇಹಾ ಫೌಂಡೇಶನ್: 044-24640050

  • ಟೆಲಿ ಮಾನಸ್ (24×7): 14416

  • ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (TISS) ಸಹಾಯವಾಣಿ: 022-25521111 (ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 8ರಿಂದ ರಾತ್ರಿ 10 ಗಂಟೆಯವರೆಗೆ ಲಭ್ಯ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.