'ರೌಡಿ' ಪಟ್ಟದಿಂದ ಮುಕ್ತಿ: CCBಯಿಂದ one-on-one ಕೌನ್ಸೆಲಿಂಗ್ ಆರಂಭ; ಉದ್ಯೋಗಾವಕಾಶ ಕಲ್ಪಿಸಲು ಮುಂದು!
ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ) ಅಜಯ್ ಹಿಲೋರಿ ಅವರ ಮಾರ್ಗದರ್ಶನದಲ್ಲಿ ಈ ಯೋಜನೆ ಜಾರಿಯಾಗಿದೆ.

ಬೆಂಗಳೂರು: ಅಪರಾಧದ ಹಾದಿ ತೊರೆದು ಸಾಮಾನ್ಯ ಜೀವನಕ್ಕೆ ಮರಳಲು ಬಯಸುವ ರೌಡಿಶೀಟರ್‌ಗಳಿಗೆ ಹೊಸ ಅವಕಾಶ ಕಲ್ಪಿಸುವ ಉದ್ದೇಶದಿಂದ ಬೆಂಗಳೂರು ನಗರ ಪೊಲೀಸ್‌ನ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ವಿನೂತನ ಕಾರ್ಯಕ್ರಮವೊಂದನ್ನು ಆರಂಭಿಸಿದೆ.
ಮೊದಲ ಬಾರಿಗೆ ರೌಡಿಶೀಟರ್‌ಗಳಿಗೆ ಒನ್-ಆನ್-ಒನ್ (ವೈಯಕ್ತಿಕ) ಕೌನ್ಸೆಲಿಂಗ್ ನಡೆಸಲಾಗುತ್ತಿದ್ದು, ಸಮಾಜದ ಮುಖ್ಯವಾಹಿನಿಗೆ ಮರಳಲು ನೆರವಾಗುವ ಜೊತೆಗೆ ಅವರಿಗೆ ಉದ್ಯೋಗಾವಕಾಶ ಕಲ್ಪಿಸುವ ಪ್ರಯತ್ನಕ್ಕೂ ಪೊಲೀಸರು ಮುಂದಾಗಿದ್ದಾರೆ.
ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ) ಅಜಯ್ ಹಿಲೋರಿ ಅವರ ಮಾರ್ಗದರ್ಶನದಲ್ಲಿ ಈ ಯೋಜನೆ ಜಾರಿಯಾಗಿದೆ.
ಈ ಕುರಿತು ಮಾತನಾಡಿರುವ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು, "ರೌಡಿಶೀಟರ್‌ಗಳನ್ನು ವಿವಿಧ ವಿಭಾಗಗಳಾಗಿ ವಿಂಗಡಿಸಿ ಆಯ್ದ ವ್ಯಕ್ತಿಗಳಿಗೆ ಕೌನ್ಸೆಲಿಂಗ್ ನೀಡಲಾಗುತ್ತಿದೆ. ಸಂಕಷ್ಟದ ಪರಿಸ್ಥಿತಿಯಿಂದ ಅಪರಾಧದ ದಾರಿ ಹಿಡಿದವರು ದೀರ್ಘಕಾಲ ಯಾವುದೇ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗದೇ ಇದ್ದರೆ, ಅವರಿಗೆ ಮತ್ತೊಂದು ಅವಕಾಶ ನೀಡಬೇಕು. ಅಗತ್ಯವಿದ್ದರೆ ಅವರ ಮೇಲಿನ 'ರೌಡಿ' ಪಟ್ಟವನ್ನೂ ತೆಗೆದುಹಾಕಬೇಕು ಎಂಬುದು ನಮ್ಮ ಉದ್ದೇಶ ಎಂದು ಹೇಳಿದರು.
ಈ ಯೋಜನೆಯ ಪರಿಕಲ್ಪನೆ ರೂಪಿಸಿರುವ ಅಪರಾಧ ವಿಭಾಗ-1ರ ಡಿಸಿಪಿ ಶ್ರೀಹರಿ ಬಾಬು ಬಿ.ಎಲ್. ಅವರು ಮಾತನಾಡಿ, ಕೇವಲ ಎರಡು ಅಥವಾ ಮೂರು ಪ್ರಕರಣಗಳಲ್ಲಿ ಸಿಲುಕಿ ನಂತರ ಯಾವುದೇ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗದವರನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ.
ಅವರ ಕುಟುಂಬ ಸದಸ್ಯರೊಂದಿಗೂ ಪೊಲೀಸರು ಸಮಾಲೋಚನೆ ನಡೆಸಿ, ಅವರ ಇತ್ತೀಚಿನ ನಡವಳಿಕೆ, ಸಾಮಾಜಿಕ ಪರಿಸರ ಹಾಗೂ ಜೀವನಶೈಲಿಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಉತ್ತಮ ಬದಲಾವಣೆ ಕಂಡುಬಂದರೆ ಅಂತಹ ರೌಡಿಶೀಟರ್‌ಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ವಿವಿಧ ಸಂಸ್ಥೆಗಳೊಂದಿಗೆ ಸಂಪರ್ಕ ಸಾಧಿಸುವ ಪ್ರಯತ್ನವೂ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಪ್ರತಿ ಕೌನ್ಸೆಲಿಂಗ್ ಅಧಿವೇಶನ ಕನಿಷ್ಠ ಎರಡು ಗಂಟೆಗಳ ಕಾಲ ನಡೆಯುತ್ತಿದ್ದು, ವ್ಯಕ್ತಿಯ ಹಿನ್ನೆಲೆ ಹಾಗೂ ಪ್ರತಿಕ್ರಿಯೆ ಆಧರಿಸಿ ನಾಲ್ಕು ಗಂಟೆಗಳವರೆಗೂ ಮುಂದುವರಿಯಬಹುದು ಎಂದು ತಿಳಿಸಿದ್ದಾರೆ.
ಈ ಕೌನ್ಸೆಲಿಂಗ್ ಕಾರ್ಯಕ್ರಮವನ್ನು ಸಿಸಿಬಿಯ ಸಂಘಟಿತ ಅಪರಾಧ ವಿಭಾಗ (Organised Crime Wing) ಕಚೇರಿಯಲ್ಲಿ ಪೂರ್ವ ಹಾಗೂ ಪಶ್ಚಿಮ ವಿಭಾಗದ ಇನ್‌ಸ್ಪೆಕ್ಟರ್‌ಗಳು ನಡೆಸುತ್ತಿದ್ದಾರೆ.
ಕೌನ್ಸೆಲಿಂಗ್ ಪಡೆಯುತ್ತಿರುವ ಹಲವರು ಕಳೆದ 10 ವರ್ಷಗಳಿಂದ ಯಾವುದೇ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಆದರೂ ಅವರು ಇನ್ನೂ ರೌಡಿಶೀಟರ್‌ಗಳ ಪಟ್ಟಿಯಲ್ಲೇ ಉಳಿದಿದ್ದಾರೆ. ಇಂತಹವರಿಗೆ ಹೊಸ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



