ರಾಜ್ಯ

ಸರ್ಕಾರಿ ಕಾಲೇಜುಗಳಲ್ಲಿ ಉದ್ಯೋಗಕ್ಕೆ ನಕಲಿ PhD ಪ್ರಮಾಣಪತ್ರ: 249 ಅತಿಥಿ ಉಪನ್ಯಾಸಕರಿಂದ ವಂಚನೆ!

ಆಯುಕ್ತರು ಕಾಲೇಜುಗಳ ಪ್ರಾಂಶುಪಾಲರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ನಡೆಸಿ, ನಕಲಿ ಪಿಹೆಚ್ ಡಿ ಪ್ರಮಾಣಪತ್ರಗಳನ್ನು ಸಲ್ಲಿಸಿ ಉದ್ಯೋಗ ಪಡೆದಿರುವ ಉಪನ್ಯಾಸಕರ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಚನೆ ನೀಡಿದ್ದಾರೆ.

ಸರ್ಕಾರಿ ಕಾಲೇಜುಗಳಲ್ಲಿ ಉದ್ಯೋಗಕ್ಕೆ ನಕಲಿ PhD ಪ್ರಮಾಣಪತ್ರ: 249 ಅತಿಥಿ ಉಪನ್ಯಾಸಕರಿಂದ ವಂಚನೆ!
ಸಾಂದರ್ಭಿಕ ಚಿತ್ರ
Published On :

ಕಲಬುರಗಿ: ಕರ್ನಾಟಕದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ನಕಲಿ ಪಿಹೆಚ್ ಡಿ ಪ್ರಮಾಣಪತ್ರಗಳನ್ನು ಸಲ್ಲಿಸಿ ಉದ್ಯೋಗ ಪಡೆದಿದ್ದ 249 ಅತಿಥಿ ಉಪನ್ಯಾಸಕರ ಪ್ರಕರಣ ಬೆಳಕಿಗೆ ಬಂದಿದ್ದು, ರಾಜ್ಯಾದ್ಯಂತ ಸಂಚಲನ ಮೂಡಿಸಿದೆ.

ಈ ಹಿನ್ನೆಲೆಯಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರು ಜುಲೈ 21ರಂದು ಆದೇಶ ಹೊರಡಿಸಿ, ಸಂಬಂಧಿತ ಅತಿಥಿ ಉಪನ್ಯಾಸಕರ ವಿರುದ್ಧ ತಕ್ಷಣವೇ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಹಾಗೂ ಒಂದು ವಾರದೊಳಗೆ ಅನುಪಾಲನಾ ವರದಿ(compliance reports) ಸಲ್ಲಿಸುವಂತೆ ಪದವಿ ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚಿಸಿದ್ದಾರೆ.

ಮೂಲಗಳ ಪ್ರಕಾರ, ಆಯುಕ್ತರು ಕಾಲೇಜುಗಳ ಪ್ರಾಂಶುಪಾಲರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ನಡೆಸಿ, ನಕಲಿ ಪಿಹೆಚ್ ಡಿ ಪ್ರಮಾಣಪತ್ರಗಳನ್ನು ಸಲ್ಲಿಸಿ ಉದ್ಯೋಗ ಪಡೆದಿರುವ ಉಪನ್ಯಾಸಕರ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಚನೆ ನೀಡಿದ್ದಾರೆ.

ನಕಲಿ ಪ್ರಮಾಣಪತ್ರ ಸಲ್ಲಿಸಿರುವ 249 ಅತಿಥಿ ಉಪನ್ಯಾಸಕರನ್ನು ತಕ್ಷಣದಿಂದಲೇ ಸೇವೆಯಿಂದ ಬಿಡುಗಡೆ ಮಾಡಲಾಗುವುದು. ಜೊತೆಗೆ, ಭವಿಷ್ಯದಲ್ಲಿ ನಡೆಯುವ ಯಾವುದೇ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ಅವರನ್ನು ಕಪ್ಪುಪಟ್ಟಿಗೆ (Blacklist) ಸೇರಿಸಲಾಗುವುದು.

ಅತಿಥಿ ಉಪನ್ಯಾಸಕರ ನೇಮಕಾತಿ ಸಂದರ್ಭದಲ್ಲಿ ನೇಮಕಾತಿ ಪ್ರಾಧಿಕಾರವು ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಿ ನೇಮಕಾತಿ ಆದೇಶ ನೀಡುತ್ತದೆ. ಬಳಿಕ ಆ ದಾಖಲೆಗಳನ್ನು ಸಂಬಂಧಿತ ವಿಶ್ವವಿದ್ಯಾಲಯಗಳಿಗೆ ಕಳುಹಿಸಿ ಪ್ರಮಾಣಪತ್ರಗಳ ಸತ್ಯಾಸತ್ಯತೆ ಪರಿಶೀಲಿಸಲಾಗುತ್ತದೆ.

ಪರಿಶೀಲನೆಗಾಗಿ ಕಳುಹಿಸಲಾದ 249 ಅಭ್ಯರ್ಥಿಗಳ ಪಿಎಚ್‌ಡಿ ಪ್ರಮಾಣಪತ್ರಗಳೂ ನಕಲಿ ಎಂಬುದನ್ನು ಸಂಬಂಧಿತ ವಿಶ್ವವಿದ್ಯಾಲಯಗಳು ದೃಢಪಡಿಸಿವೆ ಎಂದು ತಿಳಿದುಬಂದಿದೆ.

ವಿಶ್ವವಿದ್ಯಾಲಯಗಳಿಂದ ವರದಿಗಳು ಬಂದ ಬಳಿಕ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ಸಂಬಂಧಿತ ಅಭ್ಯರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಲು ತೀರ್ಮಾನಿಸಿದ್ದಾರೆ.

2016ರ ಮೊದಲು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ನೇಮಕವಾಗಲು ಪಿಎಚ್‌ಡಿ ಕಡ್ಡಾಯ ಅರ್ಹತೆಯಾಗಿರಲಿಲ್ಲ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಕಲಿ ಪಿಹೆಚ್ ಡಿ ಪ್ರಮಾಣಪತ್ರ ಸಲ್ಲಿಸಿರುವ ಪ್ರಕರಣ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಕಲ್ಯಾಣ ಕರ್ನಾಟಕದಲ್ಲೇ 148 ಮಂದಿಗೆ ಉದ್ಯೋಗ

ಒಟ್ಟು 249 ನಕಲಿ ಪಿಹೆಚ್ ಡಿ ಪ್ರಮಾಣಪತ್ರಗಳ ಪೈಕಿ 148 ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಅತಿಥಿ ಉಪನ್ಯಾಸಕರಾಗಿ ನೇಮಕಗೊಂಡಿದ್ದಾರೆ.

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಅತಿ ಹೆಚ್ಚು 33 ಮಂದಿ ನಕಲಿ ಪ್ರಮಾಣಪತ್ರ ಸಲ್ಲಿಸಿರುವುದು ಪತ್ತೆಯಾಗಿದೆ. ನಂತರದ ಸ್ಥಾನಗಳಲ್ಲಿ ಯಾದಗಿರಿ – 31, ಬೀದರ್ – 28, ರಾಯಚೂರು – 24, ಕೊಪ್ಪಳ – 13, ವಿಜಯನಗರ – 9 ಹಾಗೂ ಬಳ್ಳಾರಿ – 2 ಮಂದಿ ಇದ್ದಾರೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೀದರ್‌ನಲ್ಲಿ ಅತಿ ಹೆಚ್ಚು 19 ಮಂದಿ ನಕಲಿ ಪ್ರಮಾಣಪತ್ರ ಸಲ್ಲಿಸಿದ್ದರೆ, ಕಲಬುರಗಿಯ ಸೇಡಂ ರಸ್ತೆ ಸರ್ಕಾರಿ ಕಾಲೇಜು (ಸ್ವಾಯತ್ತ ಕಾಲೇಜು)ಯಲ್ಲಿ 17 ಮಂದಿ, ಹಾಗೂ ಕಲಬುರಗಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ 15 ಮಂದಿ ನಕಲಿ ಪಿಎಚ್‌ಡಿ ಪ್ರಮಾಣಪತ್ರ ಸಲ್ಲಿಸಿರುವುದು ಪತ್ತೆಯಾಗಿದೆ.

ಇದೇ ವೇಳೆ, ಕಲಬುರಗಿ, ಕೊಪ್ಪಳ, ವಿಜಯನಗರ ಹಾಗೂ ಬೀದರ್ ಜಿಲ್ಲೆಗಳ ಕೆಲವು ಕಾಲೇಜುಗಳ ಪ್ರಾಂಶುಪಾಲರು ತಮ್ಮ ವರದಿಯಲ್ಲಿ 8 ಅಭ್ಯರ್ಥಿಗಳ ಪ್ರಮಾಣಪತ್ರಗಳು ನೈಜವಾಗಿವೆ ಎಂದು ಅಡಿಟಿಪ್ಪಣಿ ಸೇರಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಆ ಪ್ರಮಾಣಪತ್ರಗಳನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಸಂಬಂಧಿತ ಪ್ರಾಂಶುಪಾಲರಿಗೆ ಇಲಾಖೆ ಸೂಚನೆ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.