'ಟೈ ಧರಿಸಿಲ್ಲ' ಎಂದು 'ಕಾಲು ಮುಟ್ಟಿ ಕ್ಷಮೆ ಕೇಳಿ ಅಂದ್ರು': ಮಾಜಿ ಉದ್ಯೋಗಿ ಆರೋಪ ತಳ್ಳಿ ಹಾಕಿದ IndiGo
ಟರ್ಮಿನಲ್ ಪರಿಶೀಲನೆ ವೇಳೆ ತಾವು ಯೂನಿಫಾರ್ಮ್ ಟೈ ಧರಿಸಲು ಮರೆತಿದ್ದಾಗಿ ಜಂಶೀದ್ ಒಪ್ಪಿಕೊಂಡಿದ್ದಾರೆ. ಆದರೆ, ಈ ಸಣ್ಣ ತಪ್ಪಿಗೆ ಹಿರಿಯ ಅಧಿಕಾರಿಯೊಬ್ಬರು ತನ್ನ ಸಹೋದ್ಯೋಗಿ ಹಾಗೂ ಸೂಪರ್‌ವೈಸರ್ ಕಾಲು ಹಿಡಿದು ಕ್ಷಮೆಯಾಚಿಸುವಂತೆ ಅಮಾನವೀಯ ರೀತಿಯಲ್ಲಿ ವರ್ತಿಸಿದ್ದರು.

ಬೆಂಗಳೂರು: ಯೂನಿಫಾರ್ಮ್ ಟೈ ಧರಿಸದಿದ್ದಕ್ಕೆ ಅಧಿಕಾರಿಯೊಬ್ಬರು ಸೂಪರ್‌ವೈಸರ್ ಕಾಲು ಮುಟ್ಟಿ ಕ್ಷಮೆ ಕೇಳುವಂತೆ ಒತ್ತಾಯಿಸಿದರು ಎಂದು ಮಾಜಿ ಗ್ರೌಂಡ್ ಸ್ಟಾಫ್ ಉದ್ಯೋಗಿ ಮಾಡಿದ್ದ ಆರೋಪಗಳನ್ನು ಇಂಡಿಗೋ ಸಂಸ್ಥೆಯು ತೀವ್ರವಾಗಿ ಖಂಡಿಸಿದ್ದು, ಇವೆಲ್ಲವೂ "ಆಧಾರರಹಿತ ಮತ್ತು ಸತ್ಯಕ್ಕೆ ದೂರವಾದವು" ಎಂದು ಸ್ಪಷ್ಟಪಡಿಸಿದೆ.
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಕಾರ್ಯನಿರ್ವಹಿಸುತ್ತಿದ್ದ ಮೊಹಮ್ಮದ್ ಜಂಶೀದ್ ಎಂಬುವರು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದನ್ನು ಹರಿಬಿಟ್ಟು, ತಮಗೆ ಕೆಲಸದ ಸ್ಥಳದಲ್ಲಿ ತೀವ್ರ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ್ದರು.
ಟರ್ಮಿನಲ್ ಪರಿಶೀಲನೆ ವೇಳೆ ತಾವು ಯೂನಿಫಾರ್ಮ್ ಟೈ ಧರಿಸಲು ಮರೆತಿದ್ದಾಗಿ ಜಂಶೀದ್ ಒಪ್ಪಿಕೊಂಡಿದ್ದಾರೆ. ಆದರೆ, ಈ ಸಣ್ಣ ತಪ್ಪಿಗೆ ಹಿರಿಯ ಅಧಿಕಾರಿಯೊಬ್ಬರು ತನ್ನ ಸಹೋದ್ಯೋಗಿ ಹಾಗೂ ಸೂಪರ್‌ವೈಸರ್ ಕಾಲು ಹಿಡಿದು ಕ್ಷಮೆಯಾಚಿಸುವಂತೆ ಅಮಾನವೀಯ ರೀತಿಯಲ್ಲಿ ವರ್ತಿಸಿದ್ದರು. ಈ ರೀತಿಯ ವರ್ತನೆ ನನ್ನ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದರಿಂದ, ನಾನು ಕಾಲು ಮುಟ್ಟಲು ನಿರಾಕರಿಸಿ, ಇಷ್ಟಪಟ್ಟು ಸೇರಿದ ಕೆಲಸಕ್ಕೆ ರಾಜೀನಾಮೆ ನೀಡಬೇಕಾಯಿತು ಎಂದು ಕಣ್ಣೀರಿಟ್ಟಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು.
ಆರೋಪ ಬೆನ್ನಲ್ಲೇ ಈ ಕುರಿತು ಪ್ರಕಟಣೆ ಹೊರಡಿಸಿರುವ ಇಂಡಿಗೋ, "ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವರದಿಗಳು ಸಂಪೂರ್ಣವಾಗಿ ಏಕಪಕ್ಷೀಯವಾಗಿದ್ದು, ಕಂಪನಿಯ ಘನತೆಗೆ ಮಸಿ ಬಳಿಯುವ ಪ್ರಯತ್ನವಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಂತರಿಕ ದೂರು ಸಮಿತಿಯು ಈ ಘಟನೆಯ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿದೆ. ಆದರೆ, ಉದ್ಯೋಗಿ ಹೇಳಿದ ಯಾವುದೇ ಘಟನೆ ನಡೆದಿರುವುದಕ್ಕೆ ವಿಮಾನ ನಿಲ್ದಾಣದ ಸಿಸಿಟಿವಿಗಳಲ್ಲಾಗಲಿ ಅಥವಾ ಇತರೆಡೆಗಳಲ್ಲಾಗಲಿ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ.
ರಾಜೀನಾಮೆ ನೀಡಿರುವ ಉದ್ಯೋಗಿಯು ತನ್ನ ಸೇವಾ ಅವಧಿಯಲ್ಲಿ ನಿಯಮಿತವಾಗಿ ಕರ್ತವ್ಯ ಲೋಪ ಎಸಗುತ್ತಿದ್ದರು, ಪುನರಾವರ್ತಿತ ವೃತ್ತಿಪರ ಶಿಸ್ತುಲಂಘನೆ, ಕಾರ್ಯಕ್ಷಮತೆ ಸಂಬಂಧಿತ ಸಮಸ್ಯೆಗಳು ಹಾಗೂ ಅನುಮತಿಯಿಲ್ಲದೆ ಕರ್ತವ್ಯಕ್ಕೆ ಗೈರಾಗುತ್ತಿದ್ದರು.
ಈ ಎಲ್ಲ ವಿಚಾರಗಳನ್ನು ಸಮಾಲೋಚನೆ ಮತ್ತು ವ್ಯವಸ್ಥಾಪಕರ ಮಧ್ಯಸ್ಥಿಕೆಯ ಮೂಲಕ ಪರಿಷ್ಕರಿಸಲು ಪ್ರಯತ್ನಿಸಲಾಗಿತ್ತು. ಉದ್ಯೋಗಿಯ ಅಭಿವೃದ್ಧಿಗೆ ಅಗತ್ಯ ಬೆಂಬಲ ನೀಡುವುದರ ಜೊತೆಗೆ, ಸುಧಾರಣೆಗೆ ಹಲವು ಅವಕಾಶಗಳನ್ನು ಕಲ್ಪಿಸಲಾಗಿತ್ತು ಎಂದು ಇಂಡಿಗೋ ತನ್ನ ಪ್ರಕಟಣೆಯಲ್ಲಿ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



