ರಾಜ್ಯದ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರ ತಂಡ ಕಳುಹಿಸಿ; ಪ್ರಧಾನಿ ಮೋದಿಗೆ CM ಡಿ.ಕೆ ಶಿವಕುಮಾರ್ ಪತ್ರ
ಜುಲೈ 11ರವರೆಗೆ ರಾಜ್ಯದಲ್ಲಿ ಸಾಮಾನ್ಯವಾಗಿ 292 ಮಿ.ಮೀ. ಮಳೆಯಾಗಬೇಕಿದ್ದರೆ, ಕೇವಲ 203 ಮಿ.ಮೀ. ಮಳೆಯಷ್ಟೇ ದಾಖಲಾಗಿದ್ದು, ಶೇ.30ರಷ್ಟು ಮಳೆ ಕೊರತೆ ಉಂಟಾಗಿದೆ.

ಬೆಂಗಳೂರು: ರಾಜ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಬರ ಪರಿಸ್ಥಿತಿಯನ್ನು ಸ್ಥಳದಲ್ಲೇ ಪರಿಶೀಲಿಸಲು ಕೇಂದ್ರ ಸರ್ಕಾರ ತಕ್ಷಣವೇ ತಜ್ಞರ ತಂಡವನ್ನು ಕಳುಹಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಅವರು, ಕೇಂದ್ರದ ತಂಡ ರಾಜ್ಯಕ್ಕೆ ಭೇಟಿ ನೀಡುವುದರಿಂದ ಬರದ ತೀವ್ರತೆಯ ಬಗ್ಗೆ ನೇರ ಮಾಹಿತಿ ದೊರೆಯಲಿದ್ದು, ಸಂಕಷ್ಟದಲ್ಲಿರುವ ರೈತರಿಗೆ ಕೇಂದ್ರ ಸರ್ಕಾರ ತಮ್ಮೊಂದಿಗಿದೆ ಎಂಬ ವಿಶ್ವಾಸ ಮೂಡುತ್ತದೆ. ಅಲ್ಲದೆ, ಮುಂಚಿತವಾಗಿ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಿ ಅಗತ್ಯ ನೆರವು ನೀಡಿದರೆ ರಾಜ್ಯ ಸರ್ಕಾರದ ಪರಿಹಾರ ಕಾರ್ಯಗಳಿಗೆ ಹೆಚ್ಚಿನ ಬಲ ಸಿಗಲಿದೆ ಎಂದು ತಿಳಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) 2026ರ ನೈರುತ್ಯ ಮುಂಗಾರು ಅವಧಿಯಲ್ಲಿ ಎಲ್ ನಿನೋ (ENSO) ಪರಿಣಾಮದಿಂದ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿತ್ತು. ಅದರಂತೆ ಕರ್ನಾಟಕದಲ್ಲೂ ಮಳೆ ತೀವ್ರವಾಗಿ ಕೊರತೆಯಾಗಿದೆ ಎಂದು ವಿವರಿಸಿದ್ದಾರೆ.
ಜುಲೈ 11ರವರೆಗೆ ರಾಜ್ಯದಲ್ಲಿ ಸಾಮಾನ್ಯವಾಗಿ 292 ಮಿ.ಮೀ. ಮಳೆಯಾಗಬೇಕಿದ್ದರೆ, ಕೇವಲ 203 ಮಿ.ಮೀ. ಮಳೆಯಷ್ಟೇ ದಾಖಲಾಗಿದ್ದು, ಶೇ.30ರಷ್ಟು ಮಳೆ ಕೊರತೆ ಉಂಟಾಗಿದೆ. ಇದು ಕೊರತೆ ಮಳೆಯ ವರ್ಗಕ್ಕೆ ಸೇರಿದೆ.
ಈ ಬಾರಿ ಮುಂಗಾರು ಕೂಡ ರಾಜ್ಯಕ್ಕೆ ನಿಧಾನವಾಗಿ ಪ್ರವೇಶಿಸಿತು. ಜೂನ್ 5ರಂದು ಕರ್ನಾಟಕ ಪ್ರವೇಶಿಸಿದ ಮುಂಗಾರು, ದೀರ್ಘ ವಿರಾಮದ ಕಾರಣದಿಂದ ರಾಜ್ಯದಾದ್ಯಂತ ವ್ಯಾಪಿಸಲು 17 ದಿನಗಳು ತೆಗೆದುಕೊಂಡಿದ್ದು, ಜೂನ್ 22ರಂದು ಮಾತ್ರ ಸಂಪೂರ್ಣ ವ್ಯಾಪಿಸಿತು.
ಜುಲೈ 11ರ ವೇಳೆಗೆ ರಾಜ್ಯದ 31 ಜಿಲ್ಲೆಗಳ ಪೈಕಿ 18 ಜಿಲ್ಲೆಗಳು ಕೊರತೆ ಅಥವಾ ತೀವ್ರ ಕೊರತೆ ಮಳೆಯ ದಾಖಲೆಯನ್ನು ಹೊಂದಿವೆ. 240 ತಾಲ್ಲೂಕುಗಳ ಪೈಕಿ 141 ತಾಲ್ಲೂಕುಗಳಲ್ಲಿ ಸಹ ಮಳೆ ಕೊರತೆ ಕಂಡುಬಂದಿದ್ದು, ರಾಜ್ಯಾದ್ಯಂತ ಪರಿಸ್ಥಿತಿ ಗಂಭೀರವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮುಂಗಾರು ಕೊರತೆಯ ಪರಿಣಾಮ ಕೃಷಿಯ ಮೇಲೂ ಬಿದ್ದಿದೆ. ಜುಲೈ ಮೊದಲ ವಾರದ ವೇಳೆಗೆ 84.10 ಲಕ್ಷ ಹೆಕ್ಟೇರ್ ಗುರಿಯ ಪೈಕಿ ಕೇವಲ 28.36 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಮುಂಗಾರು ಬಿತ್ತನೆ ನಡೆದಿದ್ದು, ಇದು ಗುರಿಯ ಕೇವಲ ಶೇ.34ರಷ್ಟೇ ಆಗಿದೆ.
ರಾಜ್ಯದ ಜಲಾಶಯಗಳ ಸ್ಥಿತಿಯೂ ಆತಂಕಕಾರಿಯಾಗಿದೆ. ರಾಜ್ಯದ ಪ್ರಮುಖ ನದಿ ಜಲಾನಯನ ಪ್ರದೇಶಗಳಲ್ಲಿ ಮಳೆ ಕೊರತೆಯಿಂದ ಜಲಾಶಯಗಳಿಗೆ ನೀರಿನ ಹರಿವು ಕುಂಠಿತವಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ನೀರಾವರಿ, ಕುಡಿಯುವ ನೀರು ಹಾಗೂ ಜಲವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ.
ಜುಲೈ 10ರ ವೇಳೆಗೆ ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿ ಒಟ್ಟು 895.65 ಟಿಎಂಸಿಗಳ ಸಂಗ್ರಹ ಸಾಮರ್ಥ್ಯದ ಪೈಕಿ ಕೇವಲ 303 ಟಿಎಂಸಿ ನೀರು, ಅಂದರೆ ಶೇ.34ರಷ್ಟು ಮಾತ್ರ ನೀರು ಸಂಗ್ರಹವಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈಗಾಗಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಲಭ್ಯವಿರುವ ಜಲಾಶಯಗಳ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಮೊದಲ ಆದ್ಯತೆ ನೀಡುವ ನೀತಿ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ಇನ್ನೊಂದೆಡೆ, ಮಂಡ್ಯ ಜಿಲ್ಲೆಯಲ್ಲಿ ರೈತರ ಪ್ರತಿಭಟನೆ ಮಂಗಳವಾರವೂ ಮುಂದುವರಿದಿದೆ. ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯದಿಂದ ನೀರಾವರಿಗೆ ಕಾವೇರಿ ನೀರು ಬಿಡುಗಡೆ ಮಾಡದಿರುವುದನ್ನು ಖಂಡಿಸಿ ವಿವಿಧ ರೈತ ಸಂಘಟನೆಗಳ ಸದಸ್ಯರು ಮಂಡ್ಯದ ಸಂಜಯ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಹಳೆಯ ಮೈಸೂರು–ಬೆಂಗಳೂರು ಹೆದ್ದಾರಿಯನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೆಆರ್‌ಎಸ್ ಜಲಾಶಯದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪಾಂಡವಪುರ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಧ್ಯಪ್ರವೇಶಿಸಿ, ನೀರಾವರಿ ಹಾಗೂ ಕುಡಿಯುವ ನೀರಿಗಾಗಿ ಕೆಆರ್‌ಎಸ್‌ನಿಂದ ತಕ್ಷಣ ನೀರು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



