ಮೈಸೂರು ದಸರಾದಲ್ಲಿ ಕಂಬಳ ಬೇಡ; ಜನರ ಭಾವನೆಗಳಿಗೆ ಬೆಲೆ ಕೊಡಿ: ಕುಮಾರಸ್ವಾಮಿ, ವಿಜಯೇಂದ್ರ ಒತ್ತಾಯ!
ಕಂಬಳವು ಕರಾವಳಿ ಭಾಗದ ಸಾಂಸ್ಕೃತಿಕ ಶ್ರೇಷ್ಠತೆ ಮತ್ತು ನಂಬಿಕೆಯ ಪ್ರತೀಕ. ಭೌಗೋಳಿಕವಾಗಿ ಆ ಭಾಗಕ್ಕೆ ಮಾತ್ರ ಸರಿಹೊಂದುವ ಆಚರಣೆಯೂ ಹೌದು. ಅದನ್ನು ಮೈಸೂರಿಗೆ ತಂದು ದೈವಿಕ ಹಿನ್ನೆಲೆಯ ಆ ಪರಂಪರೆ, ಪಾವಿತ್ರ್ಯತೆಗೆ ಧಕ್ಕೆ ತರುವುದನ್ನು ಒಪ್ಪಲಾಗದು ಎಂದು ಹೇಳಿದ್ದಾರೆ.

ಮೈಸೂರು: ದಸರಾದಲ್ಲಿ ಕಂಬಳ ಬೇಡ ಎಂದು ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಶನಿವಾರ ಹೇಳಿದ್ದಾರೆ.
ಈ ಕುರಿತು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಪರಂಪರಾಗತವಾಗಿ ತನ್ನದೇ ಆದ ವೈಶಿಷ್ಟ್ಯದಿಂದ ಕಂಗೊಳಿಸುತ್ತಿರುವ ಮೈಸೂರು ದಸರಾ ಉತ್ಸವದಲ್ಲಿ ಕಂಬಳವನ್ನು ಸೇರಿಸುವ ಅಗತ್ಯವಿಲ್ಲ. ಈವರೆಗೂ ನಡೆದುಕೊಂಡು ಬಂದಿರುವ ದಸರಾಕ್ಕೆ ಧಕ್ಕೆ ತರುವ ಪ್ರಯತ್ನ ಖಂಡಿತ ಬೇಡ ಎಂದಿದ್ದಾರೆ.
ಕಂಬಳವು ಕರಾವಳಿ ಭಾಗದ ಸಾಂಸ್ಕೃತಿಕ ಶ್ರೇಷ್ಠತೆ ಮತ್ತು ನಂಬಿಕೆಯ ಪ್ರತೀಕ. ಭೌಗೋಳಿಕವಾಗಿ ಆ ಭಾಗಕ್ಕೆ ಮಾತ್ರ ಸರಿಹೊಂದುವ ಆಚರಣೆಯೂ ಹೌದು. ಅದನ್ನು ಮೈಸೂರಿಗೆ ತಂದು ದೈವಿಕ ಹಿನ್ನೆಲೆಯ ಆ ಪರಂಪರೆ, ಪಾವಿತ್ರ್ಯತೆಗೆ ಧಕ್ಕೆ ತರುವುದನ್ನು ಒಪ್ಪಲಾಗದು ಎಂದು ಹೇಳಿದ್ದಾರೆ.
ಕರಾವಳಿ ಪ್ರದೇಶ ಹಸಿರು ಮತ್ತು ನೀರಿನ ಸಂಗಮ. ಇಂಥ ಪ್ರಾಕೃತಿಕ ಹಿನ್ನೆಲೆಯಲ್ಲಿ ಕಂಬಳವನ್ನು ಕಣ್ತುಂಬಿಕೊಳ್ಳುವುದೇ ಧನ್ಯತೆಯ ಅನುಭವ ಎನ್ನುವುದು ನನ್ನ ಭಾವನೆ. ಹೀಗಾಗಿ ಮೈಸೂರು ಮತ್ತು ಕರಾವಳಿ ಜನರ ಭಾವನೆಗಳಿಗೆ ನೋವುಂಟು ಮಾಡುವುದು ಬೇಕಿಲ್ಲ ಎಂದಿದ್ದಾರೆ.
ಮತ್ತೊಂದೆಡೆ ಮೈಸೂರಿನಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ, ದಸರಾ ವೇಳೆ ಕಂಬಳ ಆಯೋಜಿಸುವುದು ಸೂಕ್ತವಲ್ಲ. ಸರ್ಕಾರ ಹಠಮಾರಿ ಧೋರಣೆ ಬಿಟ್ಟು ಮೈಸೂರಿನ ಜನರ ಸಾಂಸ್ಕೃತಿಕ ಭಾವನೆಗಳಿಗೆ ಗೌರವ ನೀಡಬೇಕು ಎಂದು ಒತ್ತಾಯಿಸಿದರು.
ಕರಾವಳಿ ಭಾಗದ ವಿಶಿಷ್ಟ ಪರಂಪರೆಯಾದ ಕಂಬಳಕ್ಕೆ ತನ್ನದೇ ಆದ ಶ್ರೀಮಂತ ಇತಿಹಾಸವಿದೆ. ಅದನ್ನು ಕರಾವಳಿ ಜಿಲ್ಲೆಗಳಲ್ಲೇ ಅತ್ಯಂತ ಅದ್ದೂರಿಯಾಗಿ ಆಯೋಜಿಸಲಿ, ಅದಕ್ಕೆ ನಮ್ಮ ಸಂಪೂರ್ಣ ಸಹಕಾರವಿರಲಿದೆ. ಆದರೆ, ಕರಾವಳಿಯ ಪರಂಪರೆಯನ್ನು ಮೈಸೂರಿನ ದಸರಾ ಸಂಸ್ಕೃತಿಯೊಂದಿಗೆ ಬೆರೆಸುವುದು ಬೇಡ ಎಂದು ವಿಜಯೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


